ಮೀನು ಬಲೆಗೆ ಸಿಕ್ಕಿಬಿದ್ದ ಮೊಸಳೆಮರಿ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಅ. 27
ಪಟ್ಟಣಕ್ಕೆ ಸಮೀಪದ ನಂ. 5 ಬೆಳಗೋಡು ಹಾಳ್ ಗ್ರಾಮದ ವಿಜಯನಗರ ಕಾಲುವೆಯಲ್ಲಿ ಭಾನುವಾರ ಬೆಳಗ್ಗೆ ಮೀನು ಹಿಡಿಯಲು ಬೀಸಿದ ಬಲೆಗೆ ಮೊಸಳೆ ಮರಿಯೊಂದು ಸಿಕ್ಕಿಬಿದ್ದಿದೆ.
ಇಲ್ಲಿನ ವಿಜಯನಗರ ಕಾಲುವೆಯ ಅಯ್ಯೋದಿ ನಾಗಪ್ಪ ಪೊಣವಿನ (ಸೇತುವೆ) ಬಳಿ ಮೀನುಗಾರ ಎನ್. ಪೆನ್ನಪ್ಪ ಹಾಗೂ ತಳವಾರ ಸಣ್ಣೆಪ್ಪ ಎಂಬವರು ಬೀಸಿದ ಬಲೆಗೆ ದೊಡ್ಡ ಮೊಸಳೆ, ಅದರ ಮರಿ ಬಿದ್ದಿತ್ತು. ದೊಡ್ಡ ಮೊಸಳೆ ಮೀನಿನ ಬಲೆ ಹರಿದುಕೊಂಡು ಪಾರಾಗಿ ಹೋಗಿದೆ. ಮರಿ ಮೊಸಳೆ ಮಾತ್ರ ಮೀನುಗಾರರ ಕೈಗೆ ಸಿಕ್ಕಿದೆ. ಮೊಸಳೆ ಮರಿ ಕಂಡ ಮೀನುಗಾರರು ಕ್ಷಣಕಾಲ ಗಾಬರಿಗೊಂಡರು.
ಕಾಲುವೆ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವುದರಿಂದ ಮಕ್ಕಳು ಈಜಲು, ಮಹಿಳೆಯರು ಬಟ್ಟೆ ಒಗೆಯಲು ಹೋಗುತ್ತಾರೆ. ಎತ್ತು, ಆಕಳು, ಎಮ್ಮೆ, ಕರುಗಳು, ಕುರಿ, ಮೇಕೆ ಇತ್ಯಾದಿ ಪ್ರಾಣಿಗಳು ನೀರು ಕುಡಿಯಲು ಕಾಲುವೆಗೆ ತೆರಳುವುದು ಸಾಮಾನ್ಯ. ಕೂಡಲೆ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿ ಮೊಸಳೆ ಹಿಡಿದು ಬೇರೆಡೆ ಸಾಗಿಸಬೇಕು ಎಂದು ಗ್ರಾಪಂ ಸದಸ್ಯ ಮಠದ ಮಲ್ಲಿಕಾರ್ಜುನಸ್ವಾಮಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಲುವೆಯಲ್ಲಿ ಎರಡು ದೊಡ್ಡ ಮೊಸಳೆಗಳು, 10-20 ಮರಿ ಮೊಸಳೆಗಳನ್ನು ಕಂಡಿರುವುದಾಗಿ ಮೀನುಗಾರರು ಹೇಳುತ್ತಾರೆ. ಕಾಲುವೆ ಬುಡದಲ್ಲಿ ಮೇಯಲು ಬಂದ ಆಡು ಮರಿಯನ್ನು ಮೊಸಳೆಗಳು ತಿಂದು ಹಾಕಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮಕ್ಕೆ ಎಎಸ್ಐ ಲಕ್ಷ್ಮಣ, ಶರಣಪ್ಪ ಭೇಟಿ ನೀಡಿ, ಮೊಸಳೆ ಮರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಸಲಹೆ ನೀಡಿದರು. ಮೊಸಳೆ ಮರಿಯನ್ನು ಕಮಲಾಪುರ ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.