ವ್ಯಕ್ತ್ತಿತ್ವ ನಿರ್ಮಾಣಕ್ಕೆ ರಂಗಭೂಮಿ ಶ್ರೇಷ್ಠ ವೇದಿಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 27
ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ರಂಗಭೂಮಿ ಕಲಿಕೆ ಶ್ರೇಷ್ಠ ವೇದಿಕೆ ಎಂಬ ಗ್ರಹಿಕೆ ಯುವಕರಲ್ಲಿ ಪೂರ್ಣ ಇಳಿಮುಖವಾಗುತ್ತಿದೆ ಎಂದು ರಂಗನಟ, ನಿರ್ದೇಶಕ ಮಂಡ್ಯ ರಮೇಶ್ ವಿಷಾದಿಸಿದರು.
ನಗರದಲ್ಲಿ ರಂಗ ತೋರಣದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 9ನೇ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವದ ಸರ್ವಾಧ್ಯಕ್ಷರಾಗಿದ ಅವರು 3ನೇ ದಿನವಾದ ಭಾನುವಾರ ಸಂಸ್ಥೆಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋಗಳಲ್ಲಿ ಮುಖ ತೋರಿಸಿಬಿಟ್ಟರೆ ಜೀವನ ಪರಮ ಪಾವನ ಎಂಬ ಹಗುರ ಮನೋಭಾವದವರು ಅಧಿಕವಾಗಿರುವುದರಿಂದ ಶ್ರೇಷ್ಠತೆ ಕಡೆಗೆ ಮುಖ ಮಾಡಲು ಬೇಕಾದ ಇಚ್ಛಾಶಕ್ತಿ ಮತ್ತು ಸಿದ್ಧತೆಯ ಕೊರತೆ ಯುವಕರಲ್ಲಿ ಮನೆ ಮಾಡಿದೆ ಎಂದ ಬೇಸರ ವ್ಯಕ್ತಪಡಿಸಿದರು.
ರಂಗಭೂಮಿ ಎಂಬುದೇ ಸಮರ್ಥ ಶ್ರೇಷ್ಠ ಭಾಷೆಯಾಗಿದೆ. ಎಲ್ಲರಿಗೂ ತಲುಪುವ ಸರಳ ಮಾಧ್ಯಮವಾಗಿದ್ದರಿಂದ ಬದ್ಧತೆಯಿಂದ ಯುವಕರು ರಂಗದಲ್ಲಿ ತೊಡಗಿಕೊಂಡು, ಸಾಹಿತ್ಯ ವಾಚನ, ರಂಗ ಭೂಗೋಳ, ರಸ ಸಿದ್ಧಾಂತ, ರಂಗ ವ್ಯಾಕರಣ, ಭಾಷಾಜ್ಞಾನ, ಧ್ವನಿ ಮತ್ತು ಉಸಿರಾಟದ ನಿಯಂತ್ರಣ, ದೇಹ ಭಾಷಾ ವಿಸ್ತಾರ - ಸಾಧ್ಯತೆಗಳನ್ನು ಸತತ ಅಭ್ಯಾಸ ಮಾಡುತ್ತ ರಂಗಾಂದೋಲನದಲ್ಲಿ ನಿರಂತರತೆ ಕಾಯ್ದುಕೊಂಡರೇ ಈಗಿರುವ ಮನೋಧರ್ಮವೇ ಬದಲಾಗಿ, ವ್ಯಕ್ತಿತ್ವವೂ ಪ್ರಕಾಶಗೊಂಡು ಪ್ರಬುದ್ಧ ಕಲಾವಿದರು ರೂಪಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ಬಳ್ಳಾರಿಯ ರಂಗತೋರಣದ ಈ ವಿದ್ಯಾರ್ಥಿ ನಾಟಕೋತ್ಸವ ಸಾವಿರಾರು ವಿದ್ಯಾರ್ಥಿಗಳನ್ನು ಏಕಕಾಲಕ್ಕೆ ಒಂದೇ ವೇದಿಕೆಗೆ ರಂಗಭೂಮಿಯತ್ತ ಮುಖ ಮಾಡುವ ಆರೋಗ್ಯಕರ ವಾತಾವರಣವನ್ನು ಸಶಕ್ತವಾಗಿ ಮೂಡಿಸಿರುವುದು ಅತೀವ ಸಂತಸ ತಂದಿದೆ ಎಂದರು.
ವಿದ್ಯಾರ್ಥಿಗಳಿಗೆ ಕಲೆ ಅಗತ್ಯ: ಹಿರಿಯ ರಂಗಕರ್ಮಿ ಬಿ.ವಿ. ರಾಜಾರಾಮ್ ಮಾತನಾಡಿ, ಸೆಮಿಸ್ಟರ್ ಪದ್ಧತಿಗಳಿಂದ ದಿನಂಪ್ರತಿ ಅಂಕಗಳಿಂದ ಬಿದ್ದಿರುವ ವಿದ್ಯಾರ್ಥಿಗಳು ರಂಗಭೂಮಿ, ಸಾಂಸ್ಕೃತಿಕ ಕಲೆಗಳ ಪರಿಚಯವಿಲ್ಲದಾಗಿದೆ. ಹೀಗಾಗಿಯೇ ಅವರಿಗೆ ರಂಗಭೂಮಿ ಕಲೆ ಅಗತ್ಯವಾಗಿದೆ. ಬೆಂಗಳೂರಿನಲ್ಲೂ ಇಂತಹ ನಾಟಕಗಳನ್ನು ಆಯೋಜಿಸಲಾಗುತ್ತದೆ. ಆದರೆ, ಪ್ರದರ್ಶನವಾದ ನಂತರ ಕಲಾವಿದರು ತಮ್ಮ ಮನೆಗಳಿಗೆ ತೆರಳುತ್ತಾರೆ. ಆದರೆ, ಬಳ್ಳಾರಿಯಲ್ಲಿ 3 ದಿನಗಳಿಂದ ಆಯೋಜಿಸಿದ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ನಾಟಕ ಪ್ರದರ್ಶನ ಮುಗಿದರೂ, ಇಲ್ಲೇ ಇದ್ದು, ಬೇರೆ ತಂಡಗಳ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ. ಕಲಾವಿದರಿಗೆ ಮುಖ್ಯವಾಗಿ ಬೇಕಾಗುವ ಗ್ರಹಿಸುವಿಕೆ, ಆಲಿಸುವುದು, ರುಚಿಸುವುದು ಈ ಮೂರು ಇಲ್ಲಿ ಲಭ್ಯವಿವೆ ಎಂದು ಅಭಿಪ್ರಾಯಪಟ್ಟರು.
ರಂಗಭೂಮಿ ಸಾಹಿತ್ಯ, ಸಂಗೀತ, ಸಂಪ್ರದಾಯದಿಂದ ಕೂಡಿದ್ದು, ಇವುಗಳಿಂದ ಅರ್ಥಮಾಡಿಕೊಳ್ಳುವ ಜ್ಞಾನ ಕಲಾವಿದರಿಗೆ ಕಲಿಸಿಕೊಡಲಿದೆ. ಈ ಮೊದಲು ಈ ಶಿಕ್ಷಣ ಇರಲಿಲ್ಲ. ಆದರೆ ಈಚೆಗೆ ಹೊಸದಾಗಿ ಹುಟ್ಟಿಕೊಂಡಿದ್ದು, ಶಿಕ್ಷಣದಲ್ಲಿ ರಂಗಭೂಮಿ, ರಂಗಭೂಮಿಯಲ್ಲಿ ಶಿಕ್ಷಣ ಎಂದು ಎರಡು ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ. ಉತ್ತಮ ಶಿಕ್ಷಕರಾಗಬೇಕಾದರೆ, ಅವರಲ್ಲಿ ಉತ್ತಮ ನಟನಿರಬೇಕು ಎಂದು ತಿಳಿಸಿದರು.
ನೀನಾಸಂ ಅಶ್ವಥ್, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಅಡವಿಸ್ವಾಮಿ, ಸಿದ್ದೇಶ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.