ಅಂಗವಿಕಲ ನೌಕರರಿಗೆ ಬಡ್ತಿ ಮೀಸಲಾತಿ ಬೇಕು
ಬಳ್ಳಾರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ನೌಕರರಿಗೆ ಜ್ಯೇಷ್ಠತಾ ನಿಯಮಗಳನ್ನು ಅನುಸರಿಸಿ ಬಡ್ತಿ ನೀಡುವಂತೆ ಅಂಗವಿಕಲ ನೌಕರರಿಗೂ ಮೀಸಲಾತಿ ನೀಡಬೇಕು ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಆಗ್ರಹಿಸಿದ್ದಾರೆ.
ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರಿಗೆ ಅವರ ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಿ, ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು. ನೇಮಕಾತಿಯಲ್ಲಿ ಶೇ. 3ರಷ್ಟು ಮೀಸಲಾತಿ ಇದ್ದು, ಅದರಂತೆ ಬಡ್ತಿ ನಿಯಮವನ್ನು ಜಾರಿಗೆ ತರಬೇಕು. ಶಿಕ್ಷಕರ ವರ್ಗಾವಣೆಯಲ್ಲಿ ಅಂಗವಿಕಲ ಶಿಕ್ಷಕರಿಗೆ ಒಂದು ಕಡೆಯಲ್ಲಿ 3 ವರ್ಷ ಕಾರ್ಯನಿರ್ವಹಿಸಬೇಕೆಂಬ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರಿನ ನಿರ್ದೇಶಕರು ಆದೇಶ ನೀಡಿದ್ದಾರೆ. ಆದರೆ ಗುಲ್ಬರ್ಗ ವಿಭಾಗದ ನಿರ್ದೇಶಕರು ಮಾತ್ರ ಮೇಲಧಿಕಾರಿಗಳ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೆ ತನ್ನದೇ ಆದೇಶ ಹೊರಡಿಸುತ್ತಿದ್ದಾರೆ. ಇದರಿಂದಾಗಿ ಅಂಗವಿಕಲ ಶಿಕ್ಷಕರು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಅಶ್ವಿನಿ ಅಂಗಡಿಗೆ ಸನ್ಮಾನ: ವಿಶ್ವಸಂಸ್ಥೆಯು ಮಲಾಲಾ ದಿನದ ಅಂಗವಾಗಿ ನೀಡುವ ಯುವ ಪ್ರಶಸ್ತಿಗೆ ಭಾಜನರಾದ ಸಾಧಕಿ ಅಶ್ವಿನಿ ಅಂಗಡಿ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಗುರುತಿಸಿ ಗೌರವಿಸುವಂತೆ ಹಲವು ಭಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಗೌರವಿಸಿಲ್ಲ. ವಿಶ್ವಸಂಸ್ಥೆಯೇ ಅವರ ಕಾರ್ಯವನ್ನು ಹಾಗೂ ಅವರ ಹೋರಾಟವನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದರೂ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಅವರನ್ನು ಗುರುತಿಸಿ ಗೌರವಿಸದಿರುವುದು ವಿಷಾದನೀಯ ಹಾಗೂ ಖಂಡನಿಯ. ನಮ್ಮ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ನಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಅಂಗವಿಕಲ ನೌಕರರ ಸಮಾವೇಶ: ಡಿಸೆಂಬರ್ನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯ ಮಟ್ಟದ ಸರ್ಕಾರಿ ಅಂಗವಿಕಲ ನೌಕರರ ಸಮ್ಮೇಳ ನಡೆಸಲು ನಿರ್ಧರಿಸಲಾಗಿದೆ. ಸಿಎಂ ದಿನಾಂಕ ನೀಡಿದ ಕೂಡಲೆ ಸಮ್ಮೇಳನ ದಿನಾಂಕ ನಿರ್ಧರಿಸಲಾಗುತ್ತದೆ. ನಿರುದ್ಯೋಗಿ ಅಂಗವಿಕಲರಿಗೆ ನೀಡಲಾಗುವ ರಿಯಾಯಿತಿ ದರದ ಬಸ್ಪಾಸಿಗೆ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶ ಮಾಡಿಕೊಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಭೋಗಿ ಅಳವಡಿಸಲಿ: ಬಳ್ಳಾರಿ ಮೂಲಕ ಸಂಚರಿಸುವ ರೈಲುಗಳಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಭೋಗಿ ಇಲ್ಲದಿರುವುದರಿಂದ ಸಂಚರಿಸಲು ಕಷ್ಟವಾಗಿದೆ. ಈ ಕುರಿತು 2 ವರ್ಷದ ಹಿಂದೆ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ವಿನಾಯಕ ನಾಯಕ್ಗೆ ಮನವಿ ಸಲ್ಲಿಸಿದ್ದಾಗ ಭೋಗಿ ಅಳವಡಿಸಿದ್ದರು. ನಂತರ ಅವುಗಳು ಮಾಯವಾಗಿವೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕೊಪ್ಪಳಕ್ಕೆ ಭೇಟಿ ನೀಡಿದ್ದಾಗ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಆರ್. ಚನ್ನಕೇಶವಲು, ಬಿ. ರಾಘವೇಂದ್ರ, ಜಿ.ಆರ್. ಚಂದ್ರಣ್ಣ, ಆರ್. ಚಂದ್ರನಾಯ್ಕ, ಬಿ. ಷಣ್ಮುಖ ಸೇರಿದಂತೆ ಇದ್ದರು.