ಬೆಳೆ ನಿರ್ವಹಣೆಗೆ ಸಲಹೆ
ಬಳ್ಳಾರಿ: ಇತ್ತೀಚಿಗೆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಬೆಳೆಗಳು ನೀರಿನಲ್ಲಿ ಮುಳುಗಿ ಕೊಳೆಯುವ ಸ್ಥಿತಿಗೆ ತಲುಪಿವೆ. ಪೋಷಕಾಂಶಗಳ ಕೊರತೆಯಿಂದ ಬಳಲುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ರೈತರು ನಿರ್ವಹಣೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ.
ಅತಿವೃಷ್ಟಿಯಿಂದ ಪ್ರಮುಖವಾಗಿ ತೊಗರಿ, ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ, ಸೂರ್ಯಕಾಂತಿ ಮತ್ತಿತರ ಬೆಳೆಗಳ ಬೆಳವಣಿಗೆ ವ್ಯತಿರಿಕ್ತವಾಗುತ್ತದೆ. ಇದರಿಂದ ಹತ್ತಿ ಎಲೆ ಕೆಂಪಾಗುವಿಕೆ, ಕಾಯಿ, ಮೊಗ್ಗು ಉದುರುವುದು, ತೊಗರಿ ಗಿಡಗಳು ಒಣಗುವುದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು, ಹೂವು ಉದುರುವುದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ನಿರ್ವಹಣೆ ಬಹು ಮುಖ್ಯವಾಗಿದ್ದು, ರೈತರು ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗಿದೆ.
ಮೊದಲನೆಯದಾಗಿ ಹೊಲದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ತೋಡಿ ನೀರನ್ನು ಹೊರಹಾಕಬೇಕು. 24 ಗಂಟೆ ನೀರು ನಿಂತರೆ ತೊಗರಿ, ಹತ್ತಿ ಮತ್ತು ಮೆಕ್ಕೆಜೋಳ ಒಣಗಲು ಪ್ರಾರಂಭಿಸುತ್ತವೆ. ಬೆಳೆಯನ್ನು ಬದುಗಳ ಸಾಲಿನ ಮೇಲೆ ಬಿತ್ತನೆ ಮಾಡಿದ್ದರೆ ಅತಿವೃಷ್ಟಿಯ ಪ್ರತಿಕೂಲ ಪರಿಣಾಮ ಕಡಿಮೆ ಇರುತ್ತದೆ.
ಹತ್ತಿ ಎಲೆಗಳು ಕೆಂಪಾಗುವುದನ್ನು ತಡೆಯಲು 10 ಗ್ರಾಂ ಮೆಗ್ನಿಸಿಯಂ ಸಲ್ಫೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತದನಂತರ 10 ಗ್ರಾಂ 19-19-19 ಒಂದು ಲೀಟರ್ ನೀರಿಗೆ ಬೆರೆಸಿ ಅಥವಾ 15 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ತಕ್ಷಣವೇ ಸಿಂಪಡಿಸಿದರೆ ಪೋಷಕಾಂಶಗಳು ಲಭ್ಯವಾಗಿ ಹಸಿರು ಬಣ್ಣಕ್ಕೆ ತಿರುಗುತ್ತವೆ. ಇದಲ್ಲದೆ ಮುಂದಿನ ದಿನಗಳಲ್ಲಿ ಹೂ ಬಿಡುವ, ಕಾಯಿ ಪ್ರಾರಂಭವಾಗುವ ಮತ್ತು ಕಾಯಿ ಬೆಳವಣಿಗೆಯ ಆರಂಭದ ಹಂತಗಳಲ್ಲಿ ಮೂರು ಬಾರಿ ಶೇ. ಒಂದರ ಮೆಗ್ನೀಸಿಯಂ ಸಲ್ಫೇಟ್ ಮತ್ತು ಶೇ. ಒಂದರ 19-19-19 ರಾಸಾಯನಿಕ ಗೊಬ್ಬರಗಳ ದ್ರಾವಣ ಸಿಂಪರಣೆ ಮಾಡಬೇಕು. ಎಕರೆಗೆ ಮೇಲುಗೊಬ್ಬರವಾಗಿ 10 ಕೆಜಿ ಸಾರಜನಕ ಕೊಡಬೇಕು.
ಸತತವಾಗಿ ಮೋಡ ಕವಿದ ವಾತಾವರಣವಿರುವುದರಿಂದ ಹತ್ತಿ ಮತ್ತು ತೊಗರಿಯಲ್ಲಿ ಹೂ ಮತ್ತು ಮೊಗ್ಗು ಉದುರುವುದು ಕಂಡು ಬರುತ್ತದೆ. ಅದನ್ನು ತಡೆಗಟ್ಟಲು ಪ್ರತಿ 18 ಲೀಟರ್ ನೀರಿಗೆ 4.5 ಮಿ.ಲೀ ಪ್ಲಾನೋಫಿಕ್ಸ್ ದ್ರಾವಣ ಬೆರೆಸಿ 2-3 ಬಾರಿ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 300-400 ಲೀಟರ್ ದ್ರಾವಣಬೇಕು. ಇದರಿಂದ ಹತ್ತಿ, ತೊಗರಿಯಲ್ಲಿ ಮೊಗ್ಗು, ಹೂ, ಕಾಯಿ ಉದುರುವಿಕೆ ಕಡಿಮೆಯಾಗುವುದು.
ಲಘು ಪೋಷಕಾಂಶಗಳ ಬಳಕೆ: ಬತ್ತದ ಬೆಳೆ ಸುಮಾರು 30-45 ದಿನಗಳ ಬೆಳವಣಿಗೆಯ ಹಂತದಲ್ಲಿದ್ದು, ಬೆಳವಣಿಗೆಯಲ್ಲಿ ಕುಂಠಿತ ಕಂಡಿದ್ದು, ಎಲೆಗಳು ಹಳದಿ ಬಣ್ಣಕ್ಕೆ ಮಾರ್ಪಟ್ಟಿದ್ದರೆ ಕೆಳಕಂಡ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬಹುದು.
ಸಾರಜನಕ, ರಂಜಕ ಪೋಟಾಷ್‌ಗಳ ಕೊರತೆಯಲ್ಲದೇ ಲಘು ಪೋಷಕಾಂಶಗಳ ಕೊರತೆಯೂ ಹೆಚ್ಚಾಗಿರುತ್ತದೆ. ಎಕರೆಗೆ ಮೇಲುಗೊಬ್ಬರವಾಗಿ 25 ಕೆ.ಜಿ. ಸಾರಜನಕವನ್ನು ಕೊಡಬೇಕು. ಶೇ. 0.5ರ ಯೂರಿಯ ದ್ರಾವಣ ಸಿಂಪರಣೆ ಮಾಡುವುದರಿಂದ ಗಿಡಗಳು ಬೆಳವಣೆಗೆಯಾಗಿ ವೃದ್ಧಿಯಾಗುತ್ತವೆ. ನಂತರ ಶೇ. 1 ಸತುವಿನ ಸಲ್ಫೇಟ್ ದ್ರಾವಣ ಸಿಂಪಡಿಸುವುದರಿಂದ ಹಳದಿ ಬಣ್ಣದ ಎಲೆಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ.
ರೈತರು ಹೆಚ್ಚಿನ ಮಾಹಿತಿ ಹಾಗೂ ಸಲಹೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ್, ದೂರವಾಣಿ ಸಂಖ್ಯೆ - 08532 220154ಗೆ ಸಂಪರ್ಕಿಸಬಹುದಾಗಿದೆ.