ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ ಎಪಿಎಂಸಿಗೆ ಶಾಸಕ ಅನಿಲ್ ಲಾಡ್ ಭೇಟಿ

Vishwanath S
Updated On : 31 Oct 2013, 12:16 pm

ಬಳ್ಳಾರಿ:  ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ದಿಢೀರ್ ಭೇಟಿ ನೀಡಿದ ಶಾಸಕ ಅನಿಲ್‌ಲಾಡ್ ಮಾರುಕಟ್ಟೆ ಪ್ರಾಂಗಣದಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿ, ಸದಸ್ಯರಿಂದ ಮಾಹಿತಿ ಪಡೆದರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಳಾದ ರಸ್ತೆ, ಕೊಚ್ಚೆ ತುಂಬಿದ ಪ್ರದೇಶ ವೀಕ್ಷಿಸಿ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವೀರೇಶ ಗೌಡ, ಕಾರ್ಯದರ್ಶಿ ಸರಳಾ, ಉಪಾಧ್ಯಕ್ಷ ಮಾರೆಪ್ಪ, ನಿರ್ದೇಶಕರಾದ ಕೆ. ರಾಮಕೃಷ್ಣ, ಪಾಲನ್ನ, ಪಂಪಣ್ಣ, ಅನಿಲ್ ಕುಮಾರ್ ಸಿಲ್ಲಾರ್ ಬಾಷ ಸೇರಿದಂತೆ ಎಪಿಎಂಸಿಯ ವರ್ತಕರು, ವ್ಯಾಪಾರಿಗಳು ಉಪಸ್ಥಿತರಿದ್ದರು.
ನಾಳೆ ಕನ್ನಡ ರಾಜ್ಯೋತ್ಸವ
ಬಳ್ಳಾರಿ: ನಗರದ ಸರ್ಕಾರಿ ಪದವಿಪೂರ್ವ (ಮಾಜಿ ಪುರಸಭೆ) ಕಾಲೇಜು ಮೈದಾನದಲ್ಲಿ ನವೆಂಬರ್ 1ರಂದು 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಿ, 9.15ಕ್ಕೆ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಲಿದ್ದಾರೆ. ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಬೆಂಡಿಗೇರಿ ಶೋಭಾ, ಸಂಸದೆ ಜೆ. ಶಾಂತಾ, ಶಾಸಕ ಬಿ. ಶ್ರೀರಾಮುಲು, ಈ. ತುಕಾರಾಂ, ಎಸ್. ಭೀಮಾನಾಯ್ಕ, ಬಿ.ಎಂ. ನಾಗರಾಜ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಎಸ್ಪಿ ಡಾ. ಚೇತನ್‌ಸಿಂಗ್ ರಾಥೋಡ್, ಜಿಪಂ ಸಿಇಒ ಮಂಜುನಾಥ ನಾಯಕ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಉಚಿತ ನೇತ್ರ ತಪಾಸಣೆ
ಬಳ್ಳಾರಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತ್, ವಿಮ್ಸ್ ಸಂಚಾರಿ ನೇತ್ರ ಘಟಕ, ಜಿಲ್ಲಾ ಅಂಧತ್ವ ನಿಯಂತ್ರಣ ಘಟಕ, ಕೋರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋರ್ಲಗುಂದಿ, ಶ್ರೀಧರಗಡ್ಡೆ, ಹಂದಿಹಾಳು ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ಅ. 31ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರವು ಕೋರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಗ್ಗೆ 9.30ರಿಂದ 4ರ ವರೆಗೆ ನಡೆಯಲಿದೆ. ಕಣ್ಣಿನ ಪೊರೆ ಬಂದವರಿಗೆ ನೇತ್ರ ತಜ್ಞರಿಂದ ಉಚಿತ ತಪಾಸಣೆ ಮಾಡಲಾಗುವುದು. ಅಗ್ಯವಿರುವವರಿಗೆ ವಿಮ್ಸ್‌ನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯಾಧಿಕಾರಿ ಡಾ॥ ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪೂರ್ವ ಮಿಲನ- 2013 ಕಾರ್ಯಕ್ರಮ
ಬಳ್ಳಾರಿ: ನಗರದ ರಾವ್‌ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಕಾಲೇಜಿನಲ್ಲಿ ನ. 9ರಂದು ಅಪೂರ್ವ ಮಿಲನ- 2013 ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ತಾಂತ್ರಿಕ ವಿಷಯಗಳ ಕುರಿತು ಚರ್ಚೆ ಹಾಗೂ ನಗೆಹಬ್ಬ ಜರುಗಲಿದೆ. ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿ ಜೆ. ನೇಪಾಕ್ಷಪ್ಪ, ಕೋಶಾಧಿಕಾರಿ ಎಸ್. ಹಿಮಂತ್‌ರಾಜ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ್, ಸದಸ್ಯ ಅಲ್ಲಂ ವಿನಾಯಕ, ಎಂ. ರಾಜೇಂದ್ರ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸುಧಾ ಬರಗೂರು ಮತ್ತವರ ತಂಡದಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಟಿ. ಹನುಮಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕೂಡ್ಲಿಗಿ: ತಾಲೂಕಿನ ಈಚಲಬೊಮ್ಮನಹಳ್ಳಿ ಗ್ರಾಮದ ಹೂಲೆಪ್ಪ (65) ಮಂಗಳವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಅನೇಕ ತಿಂಗಳಿಂದ ಸರ್ಪಹುಣ್ಣು ಬಾಧಿಸುತ್ತಿದ್ದರಿಂದ ಆಸ್ಪತ್ರೆಗೆ ತೋರಿಸಿದರು ಗುಣಮುಖವಾಗಲಿಲ್ಲ. ಈಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಶಕ ಸೇವಿಸಿದ್ದಾನೆ. ತಕ್ಷಣ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎಂದು ಕೂಡ್ಲಿಗಿ ಪಿಎಸ್‌ಐ ಕೃಷ್ಣನಾಯ್ಕ ತಿಳಿಸಿದ್ದಾರೆ. ಈ ಬಗ್ಗೆ ಕುಬೇರ ನೀಡಿದ ದೂರಿನಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ
ಬಳ್ಳಾರಿ: ಪತ್ನಿಗೆ ಕಿರುಕುಳ ನೀಡಿ ಕೊಲೆಗೈದ ಪತಿಗೆ 2ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಸವರಾಜ ವಿ. ಗುದ್ಲಿ ಜೀವಾವಧಿ ಶಿಕ್ಷೆ ಹಾಗೂ ರು. 50 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. ತೆಕ್ಕಲಕೋಟೆಯ ಕೊರಚರ ನಾಗೇಶ ಅಲಿಯಾಸ್ ನಾಗಪ್ಪ ಎಂಬುವವನೇ ಶಿಕ್ಷೆಗೊಳಗಾದ ವ್ಯಕ್ತಿ. ಈತನು ಬೈರಾಪುರದ ಮಾರೆಮ್ಮಳನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದಾಗಿನಿಂದ ಕಿರುಕುಳ ನೀಡುತ್ತಲೆ ಇದ್ದ. ಆದರೆ 2013ರ ಅಕ್ಟೋಬರ್ 9ರಂದು ಸಂಜೆ 5.45ರ ವೇಳೆಗೆ ಮಾರೆಮ್ಮಳನ್ನು ಮನೆಯಿಂದ ಅಂಗಡಿಗೆಂದು ಕರೆದೊಯ್ದು ಎಪಿಎಂಸಿ ಆವರಣದ ಗೋಡೌನ್ ಪಕ್ಕದಲ್ಲಿ ಅವಾಚ್ಯವಾಗಿ ಬೈಯ್ದು ಕಲ್ಲಿನಿಂದ ತಲೆಗೆ, ಹೊಟ್ಟೆಗೆ ಜಜ್ಜಿ ಕೊಲೆಗೈದಿರುವುದಗು ವಿಚಾರಣೆಯಿಂದ ಸಾಬೀತಾಗಿದೆ. ತೆಕ್ಕಲಕೋಟೆ ಆರಕ್ಷಕ ವೃತ್ತ ನಿರೀಕ್ಷಕರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎಂ.ಎ. ಬ್ಯಾಳಿರೊಟ್ಟಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಬಿಎಸ್ಪಿಗೆ ನೇಮಕ
ಬಳ್ಳಾರಿ:  ಬಹುಜನ ಸಮಾಜವಾದಿ ಪಕ್ಷದ ಬಳ್ಳಾರಿ ಜಿಲ್ಲಾ ಸಂಯೋಜಕರಾಗಿ ಉಮಾಪತಿ, ಅಬ್ದುಲ್ ಲತೀಫ್, ರೇಣುಕುಮಾರ್ ಆಯ್ಕೆಯಾಗಿದ್ದಾರೆ. ಈ ಕುರಿತು ನೇಮಕದ ಆದೇಶ ಹೊರಡಿಸಿರುವ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದ್ದಾರೆ.
ಕಲಾಶ್ರೀ ಪ್ರಶಸ್ತಿಗೆ ಸ್ಪರ್ಧೆ
ಬಳ್ಳಾರಿ: ಮಕ್ಕಳ ದಿನಾಚರಣೆ ಅಂಗವಾಗಿ ಬಾಲಭವನದ ಆಶ್ರಯದಲ್ಲಿ ನವೆಂಬರ್ 5ರಂದು 9ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿರುವ ಮಕ್ಕಳು  ಮಾತ್ರ ಭಾಗವಹಿಸಬಹುದಾಗಿದೆ. ಸೃಜನಾತ್ಮಕ ಕಲೆ (ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ ಮೂರರಲ್ಲೂ ಕಡ್ಡಾಯ), ಸೃಜನಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂಧ ಬರೆಯುವುದು ಮೂರರಲ್ಲೂ ಕಡ್ಡಾಯ), ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ ಇವುಗಳಲ್ಲಿ ಯಾವುದಾದರೂ ಒಂದು) ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ (ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ) ಈ 4 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ನಿಗದಿತ ವೇಳೆಗೆ ಸರಿಯಾಗಿ ತಮ್ಮ ಹುಟ್ಟಿದ ದಿನಾಂಕ ದೃಢೀಕರಣ ಪತ್ರದೊಂದಿಗೆ ನ. 5ರಂದು ಬೆಳಗ್ಗೆ 10ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಚಾರ ಸಂಕಿರಣ ಸಭಾಂಗಣದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಳ್ಳಾರಿ ನಗರ ಇವರನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗೆ ಆಯ್ಕೆ
ಹೂವಿನಹಡಗಲಿ: ಬಿಜೆಪಿ ತಾಲೂಕು ವಕ್ತಾರರಾಗಿ ಎಂ.ಬಿ. ಬಸವರಾಜ ಸೋಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಮುದ್ದಣನವರ ಬಸವರಾಜ ತಿಳಿಸಿದ್ದಾರೆ. ಮಾಜಿ ಶಾಸಕ ಚಂದ್ರನಾಯ್ಕ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಪಕ್ಷ ಅಧಿಕಾರ ನೀಡಿದೆ ಎಂದರು. ನೂತನ ಬಿಜೆಪಿ ವಕ್ತಾರ ಎಂ.ಬಿ. ಬಸವರಾಜ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುವುದು ಎಂದರು. ಮಾಜಿ ಶಾಸಕ ಬಿ. ಚಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಪೂಜೆಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂಜೀವರೆಡ್ಡಿ, ಬೀರಬ್ಬಿ ಬಸವರಾಜ, ಪುಟಾಣಿ ಬಸವರಾಜ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement