ಬೇಡಿಕೆಗೆ ಆಗ್ರಹಿಸಿ ಪಾದಯಾತ್ರೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 30
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೂರಾರು ಕೂಲಿಕಾರ್ಮಿಕರು ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮ ಪಂಚಾಯಿತಿನಿಂದ ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿ ವರೆಗೆ ಬುಧವಾರ ಪಾದಯಾತ್ರೆ ನಡೆಸಿದರು.
ಅಮರಾಪುರ ಗ್ರಾಪಂ ವ್ಯಾಪ್ತಿಗೆ ಬರುವ ತಾಲೂಕಿನ ಅಮರಾಪುರ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಗೋಡೆಹಾಳು, ಟಿ. ಬೂದಿಹಾಳು, ಅಸುಂಡಿ ಗ್ರಾಮಗಳ ನೂರಾರು ಕೃಷಿ ಕೂಲಿ ಕಾರ್ಮಿಕರು ಗ್ರಾಪಂ ಕಚೇರಿಯಿಂದ ಅನಂತಪುರ ರಸ್ತೆ ಮೂಲಕ ಬಳ್ಳಾರಿಯ ರಾಯಲ್ ವೃತ್ತ, ದುರ್ಗಮ್ಮ ದೇವಸ್ಥಾನ, ಎಸ್ಪಿ ಸರ್ಕಲ್, ಕೋಟೆ ಪ್ರದೇಶ ಮೂಲಕ ಜಿಪಂ ಕಚೇರಿ ತಲುಪಿತು. ರಸ್ತೆಯುದ್ದಕ್ಕೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಗ್ರಾಪಂ ಅಧಿಕಾರಿಗಳ ಅನಗತ್ಯ ಕಿರುಕುಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಅನಗತ್ಯ ಕಿರುಕುಳ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಎನ್. ಕುಮಾರಪ್ಪ ಮಾತನಾಡಿ, ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಪಂ ವ್ಯಾಪ್ತಿಗೆ ಬರುವ 6 ಗ್ರಾಮಗಳ ನೂರಾರು ಕೃಷಿ ಕೂಲಿಕಾರರಿಗೆ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ ಸಮರ್ಪಕವಾಗಿ ಕೆಲಸ ನೀಡಿಲ್ಲ. ಮಾಡಿದ ಕೆಲಸಕ್ಕೆ ಕೂಲಿಯನ್ನೂ ಸರಿಯಾಗಿ ನೀಡಲ್ಲ. ನೀಡಿದರೂ, ಅದು ಕಡಿಮೆಯಾಗಿದ್ದು, ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಅದು ಕಾಲುವೆಗಳಲ್ಲಿ ನೀರು ಬಿಟ್ಟಾಗ ಮಾತ್ರ ಕೆಲಸ ನೀಡುತ್ತಿದ್ದು, ಇಲ್ಲವಾದಲ್ಲಿ ನಗರ ಪ್ರದೇಶಕ್ಕೆ ಗುಳೆ ಹೋಗಬೇಕಾದ ಪರಿಸ್ಥಿತಿ ಇದೆ. ಮೇಲಾಗಿ ಕೃಷಿ ಕೂಲಿಕಾರರಿಗೆ ವರ್ಷದಲ್ಲಿ ನಿಗದಿತ ದಿನಗಳ ಕೆಲಸ ಕೊಡಲು ಅಧಿಕಾರಿಗಳ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
200 ದಿನಗಳಿಗೆ ಹೆಚ್ಚಿಸಿ: ವರ್ಷದಲ್ಲಿ ನೀಡುವ 100 ದಿನಗಳ ಕೆಲಸವನ್ನು 200 ದಿನಗಳಿಗೆ ಏರಿಕೆ ಮಾಡಬೇಕು. ಸೂರಿಲ್ಲದವರಿಗೆ ಮನೆ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಹಾಗೂ ಜಮೀನು ರಹಿತರಿಗೆ ಜಮೀನು ಹಂಚಿಕೆ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಬಡಜನತೆಗೆ, ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿ ಯಾವುದಕ್ಕೂ ಸಾಕಾವುದಿಲ್ಲ. ರೈತರಿಗೆ ಉದ್ಯೋಗ ಕಲ್ಪಿಸಬೇಕಾದ ಖಾತ್ರಿ ಯೋಜನೆಯು ಗುತ್ತಿಗೆ ಸ್ವರೂಪ ಪಡೆದು, ಭ್ರಷ್ಟರಿಗೆ ಲೂಟಿ ಮಾಡುವ ಸಾಧನವಾಗಿ ಪರಿಣಮಿಸಿದೆ. ಕೆಲಸ ಕೇಳಿದರೆ, ಅನಗತ್ಯ ಕಿರುಕುಳ, ಹಣ ಪಾವತಿಯಲ್ಲಿ ವಿಳಂಬ ಮಾಡುವ ಮೂಲಕ ಕೂಲಿಕಾರರು ಕೆಲಸ ಮಾಡದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ವಸ್ತುಸ್ಥಿತಿ ವಿವರಿಸಿದರು.
ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗಳು ಈ ಗ್ರಾಮಗಳ ಬಡ ದಲಿತರಿಗೆ, ಕೃಷಿ ಕೂಲಿಕಾರರಿಗೆ, ಕನಿಷ್ಠ ಎರಡೂವರೆ ಎಕರೆ ಜಮೀನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯ ಈಗಿರುವ ಕೂಲಿಯನ್ನು ರು. 300ಗೆ ಹೆಚ್ಚಿಸಬೇಕು. ಕೂಲಿ ಕೆಲಸ ಈಗಿರುವ 100 ದಿನಗಳಿಂದ 200 ದಿನಗಳಿಗೆ ವಿಸ್ತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಜಿಪಂ ಆಡಳಿತಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉರುಕುಂದಪ್ಪ, ಉಪಾಧ್ಯಕ್ಷ ಸಣ್ಣ ರುದ್ರಪ್ಪ, ಕಾರ್ಯದರ್ಶಿ ಮೋಹನ್, ಸಿಐಟಿಯು ಧುರೀಣ ಸತ್ಯಬಾಬು ಸೇರಿದಂತೆ ನೂರಾರು ಕಾರ್ಯಕರ್ತರು, ಕೃಷಿ ಕೂಲಿಕಾರರು ಇದ್ದರು.
ರೈತರಿಗೆ ಉದ್ಯೋಗ ಕಲ್ಪಿಸಬೇಕಾದ ಖಾತ್ರಿ ಯೋಜನೆಯು ಗುತ್ತಿಗೆ ಸ್ವರೂಪ ಪಡೆದು, ಭ್ರಷ್ಟರಿಗೆ ಲೂಟಿ ಮಾಡುವ ಸಾಧನವಾಗಿ ಪರಿಣಮಿಸಿದೆ. ಕೆಲಸ ಕೇಳಿದರೆ, ಅನಗತ್ಯ ಕಿರುಕುಳ, ಹಣ ಪಾವತಿಯಲ್ಲಿ ವಿಳಂಬ ಮಾಡುವ ಮೂಲಕ ಕೂಲಿಕಾರರು ಕೆಲಸ ಮಾಡದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ.
- ಎನ್. ಕುಮಾರಪ್ಪ,
ಸಂಘದ ಮುಖಂಡ