ಹಂಪಿ ಉತ್ಸವಕ್ಕೆ ವೈಭವದ ಪರಂಪರೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 30
ಬಳ್ಳಾರಿ ಜಿಲ್ಲೆ ಎಂದಾಕ್ಷಣ ಐತಿಹಾಸಿಕ ಸ್ಥಳ, ವಿಶ್ವ ಪರಂಪರೆ ತಾಣ ಹಂಪಿ ಎಲ್ಲರಿಗೂ ನೆನಪಾಗುತ್ತದೆ. ಇಂತಹ ಹಂಪಿಯ ಸಾಂಸ್ಕೃತಿಕ, ಕಲಾ ವೈಭವವನ್ನು ಹಂಪಿ ಉತ್ಸವದ ಮೂಲಕ ಪರಿಚಯ ಮಾಡಿ ಕೊಡುವ ಪ್ರಯತ್ನ 43 ವರ್ಷಗಳಿಂದ ನಡೆದು ಬಂದಿದೆ.
1970ರಲ್ಲಿ ಪ್ರವಾಸಿ ಉತ್ಸವ ಎಂದು ಪರಿಚಯವಾಗಿ 1988ರಲ್ಲಿ ವಿಜಯನಗರ ವೈಭವ ದರ್ಶನ ಎಂಬ ಹೆಸರಿನಲ್ಲಿ ಪ್ರಥಮ ಹಂಪಿ ಉತ್ಸವದ ರೂಪ ಪಡೆಯಿತು. 43 ವರ್ಷಗಳಲ್ಲಿ ಹಂಪಿ ಉತ್ಸವ ಹಲವು ಕಾರಣಗಳಿಂದ ರದ್ದಾದ, ಸರಳ ಆಚರಣೆಯಾದ ಹಲವು ನಿದರ್ಶನಗಳಿವೆ. 2 ವರ್ಷಗಳ ಬರದಿಂದ ರದ್ದಾಗಿದ್ದ ಹಂಪಿ ಉತ್ಸವ, ಈ ಬಾರಿ ಜನವರಿಯಲ್ಲಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ.
2011-12, 2012-13ನೇ ಸಾಲಿನಲ್ಲಿ ಹಂಪಿ ಉತ್ಸವ ಬರಗಾಲದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಜನವರಿಯಲ್ಲಿ 2013-14ನೇ ಸಾಲಿನ ಹಂಪಿ ಉತ್ಸವ ಆಚರಿಸಲು ಮುಂದಾಗಿದೆ. 2010ರಲ್ಲಿ ಶ್ರೀ ಕೃಷ್ಣದೇವರಾಯರ 500ನೇ ವರ್ಷದ ಪೀಠಾರೋಹಣದ ಸ್ಮರಣಾರ್ಥ ಜ. 27ರಿಂದ 29ರ ವರೆಗೆ ಆಚರಿಸಲು ಸಿದ್ಧತೆ ನಡೆಯಿತು. ಇದಕ್ಕಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಿದ್ದರಿಂದ ಉತ್ಸವ ಸಂಭ್ರಮದಿಂದ ನಡೆಯಿತು.
ಮೊದಲು ಪ್ರವಾಸಿ ಉತ್ಸವ: ಪ್ರವಾಸಿ ಉತ್ಸವದ ಹೆಸರಿನಲ್ಲಿ ಆರಂಭವಾದ ಹಂಪಿ ಉತ್ಸವ, ವಿಜಯಗರ ಸಾಮ್ರಾಜ್ಯದ ಗತ ವೈಭವವನ್ನು, ಇತಿಹಾಸ, ಸಾಂಸ್ಕೃತಿಕ ಪರಂಪರೆಯನ್ನು ಪುನರ್ ದರ್ಶನ ಮಾಡಿಸಲು ಹಂಪಿ ಉತ್ಸವವನ್ನಾಗಿ ರಾಜ್ಯ ಸರ್ಕಾರ ಆರಂಭಿಸಿದೆ. ಹಂಪಿಯನ್ನು ಉತ್ಸವದ ಮೂಲಕ ಪರಿಚಯಿಸುವ ಪ್ರಯತ್ನ 1970ರಲ್ಲಿ ಸರ್ಕಾರ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಮಲ ಮಹಲ್ನ ಆವರಣದಲ್ಲಿ ಆರಂಭಿಸಲಾಯಿತು. ಆಗ ಕಿರುಚಿತ್ರ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. 1987ರಲ್ಲಿ ಪ್ರವಾಸಿ ಉತ್ಸವವು ಕನಕ ಪುರಂದರ ಉತ್ಸವವಾಗಿ ರೂಪಾಂತರಗೊಂಡಿತು. ಅನಂತರದ ದಿನಗಳಲ್ಲಿ ಸರ್ಕಾರ ಇದನ್ನು ಹಂಪಿ ಉತ್ಸವ ಎಂಬ ಹೆಸರಿನಲ್ಲಿ ಆಚರಿಸುತ್ತಿದೆ.
1988ರಲ್ಲಿ ಪ್ರಥಮ ಹಂಪಿ ಉತ್ಸವ: 1988ರ ಅಕ್ಟೋಬರ್ 24ರಿಂದ 26ರ ವರೆಗೆ ವಿಜಯನಗರ ವೈಭವ ದರ್ಶನ ಎಂಬ ಹೆಸರಿನಲ್ಲಿ ಪ್ರಥಮ ಹಂಪಿ ಉತ್ಸವ ಉದ್ಘಾಟನೆಗೊಂಡಿತು. ಆಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಅಬ್ದುಲ್ ನಜೀರ್ಸಾಬ್ ನಿಧನದಿಂದಾಗಿ ಉತ್ಸವದ ಎಲ್ಲ ಕಾರ್ಯಕ್ರಮಗಳ ರದ್ದಾದವು. 1995ರಿಂದ 2000ರ ವರೆಗೆ ಹಂಪಿ ಉತ್ಸವ ನಿರಂತರ ನಡೆದುಕೊಂಡು ಬಂದಿತು. ನವೆಂಬರ್ನಲ್ಲಿ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡುತ್ತ ರಾಜ್ಯದ ಜನರ ಗಮನ ಸೆಳೆಯಿತು. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಪ್ರತಿವರ್ಷ ನವೆಂಬರ್ 3,4 ಮತ್ತು 5ರಂದು ಆಚರಿಸಲು ಸರ್ಕಾರ 1997ರಲ್ಲಿ ಆದೇಶ ಹೊರಡಿಸಿತು.
ಬರದಿಂದ ಸರಳ ಆಚರಣೆ: 2001ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದರಿಂದ ಜಿಲ್ಲಾ ಉತ್ಸವದ ಮಾದರಿಯಲ್ಲಿ ಹಂಪಿ ಉತ್ಸವವನ್ನು ಆಚರಿಸಲಾಯಿತು. ಬರಗಾಲ ಮುಂದುವರಿದ ಕಾರಣ 2002ರಲ್ಲಿ ಹಂಪಿ ಉತ್ಸವ ಆಚರಿಸದೆ, 2003ರಲ್ಲಿ ಜ. 26ರಿಂದ 28ರ ವರೆಗೆ ಆಚರಿಸಲು ಸಿದ್ಧತೆ ನಡೆಯಿತಾದರೂ, ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಎಂ. ಸೂರ್ಯನಾರಾಯಣ ನಿಧನದಿಂದಾಗಿ ರದ್ದಾಯಿತು. ಆದರೆ ಅದೇ ವರ್ಷ ನವೆಂಬರ್ 3ರಿಂದ 5ರ ವರೆಗೆ ಉತ್ಸವ ಆಚರಿಸಲಾಯಿತು. ಅಂದಿನಿಂದ 2009ರ ವರೆಗೆ ನವೆಂಬರ್ನಲ್ಲಿ ಆಚರಿಸಲಾಯಿತು. 2009-10ನೇ ಸಾಲಿನಲ್ಲಿ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪೀಠಾರೋಹಣ ಸ್ಮರಣಾರ್ಥ ಜನವರಿ 27ರಿಂದ 29ರ ವರೆಗೆ ಆಚರಿಸಲಾಯಿತು. 2010-11ರಲ್ಲಿ ಉತ್ಸವ ನಡೆಯಿತು. ಆದರೆ 2011-12, 2012-13ರಲ್ಲಿ ಬಿದ್ದ ಬರದಿಂದಾಗಿ ಉತ್ಸವ ರದ್ದಾಯಿತು. ಆದರೆ ಈ ವರ್ಷ ಜನವರಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಕ್ಷೇತ್ರದ ಶಾಸಕರ ಅನುಪಸ್ಥಿತಿ: ಹಂಪಿ ಉತ್ಸವಕ್ಕೆ ಬೇಕಾಗುವ ತಯಾರಿ ಕುರಿತಾಗಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಮಂಗಳವಾರ ಹಂಪಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಜಿ ಪ್ರವಾಸೋದ್ಯಮ ಸಚಿವ, ಹಾಲಿ ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯಬೇಕಾದ ಹಂಪಿ ಉತ್ಸವ, ಅವರ ಅನುಪಸ್ಥಿತಿಯಲ್ಲಿ ಈ ಬಾರಿ ನಡೆಯುವಂತಾಗಿದೆ.
ಶಾಸಕ ಆನಂದ್ ಸಿಂಗ್ ಅವರು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲಿಗೆ ಹೋಗಿರುವುದರಿಂದ ಇದೀಗ ಅವರ ಅನುಪಸ್ಥಿತಿಯಲ್ಲಿ ಉತ್ಸವ ನಡೆಯುವಂತಾಗಿದೆ. ಜಿಲ್ಲೆಯ ಮೂರು ಶಾಸಕರಾದ ಆನಂದ್ ಸಿಂಗ್, ಟಿ.ಎಚ್. ಸುರೇಶ್ಬಾಬು, ಬಿ. ನಾಗೇಂದ್ರ ಅವರು ಶಿಷ್ಟಾಚಾರ ಶಾಸಕರಾಗಿ ಮಾತ್ರ ಆಹ್ವಾನ ಪತ್ರಿಕೆಗೆ ಸೀಮಿತವಾಗಲಿದ್ದಾರೆ.
ಹಂಪಿಯನ್ನು ಉತ್ಸವದ ಮೂಲಕ ಪರಿಚಯಿಸುವ ಪ್ರಯತ್ನ 1970ರಲ್ಲಿ ಸರ್ಕಾರ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೊದಲ ಬಾರಿಗೆ ನಡೆಯಿತು.
1987ರಲ್ಲಿ ಪ್ರವಾಸಿ ಉತ್ಸವವು ಕನಕ ಪುರಂದರ ಉತ್ಸವವಾಗಿ ರೂಪಾಂತರಗೊಂಡಿತು. ಅನಂತರದ ದಿನಗಳಲ್ಲಿ ಸರ್ಕಾರ ಇದನ್ನು ಹಂಪಿ ಉತ್ಸವ ಎಂಬ ಹೆಸರಿನಲ್ಲಿ ಆಚರಿಸುತ್ತಿದೆ.
1988ರ ಅಕ್ಟೋಬರ್ 24ರಿಂದ 26ರ ವರೆಗೆ ವಿಜಯನಗರ ವೈಭವ ದರ್ಶನ ಎಂಬ ಹೆಸರಿನಲ್ಲಿ ಪ್ರಥಮ ಹಂಪಿ ಉತ್ಸವ ಉದ್ಘಾಟನೆಗೊಂಡಿತು. 1995ರಿಂದ 2000ರ ವರೆಗೆ ಹಂಪಿ ಉತ್ಸವ ನಿರಂತರ ನಡೆದುಕೊಂಡು ಬಂದಿತು. ಉತ್ಸವ ಈಗ ರಾಜ್ಯದ ಜನರ ಗಮನ ಸೆಳೆಯುತ್ತಿದೆ.
-ಶಶಿಧರ ಮೇಟಿ