ಅತ್ಯಾಚಾರ: ಪೊಲೀಸರ ವಿರುದ್ಧ ಧರಣಿ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಅ. 31
ನಕ್ರಾಳತಾಂಡಾದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದಿರುವ ಆರೋಪಿಗಳನ್ನು ಬಂಧಿಸದೆ ಇರುವ ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಹಾಗೂ ತಕ್ಷಣ ಈ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕೆಂದು ಒತ್ತಾಯಿಸಿ ಸಿಪಿಎಂಗೆ ಸೇರಿದ ಅಂಗ ಸಂಘಟನೆಗಳು ಗುರುವಾರ ಮಧ್ಯಾಹ್ನ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘ, ರಾಜ್ಯ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಎಸ್ಎಫ್ಐ, ಡಿವೈಎಫ್ಐ, ಅಂಗವಿಕಲರ ಒಕ್ಕೂಟ, ಆಟೋ ಚಾಲಕ ಮತ್ತು ಮಾಲಕರ ಯೂನಿಯನ್, ಸಿಐಟಿಯು ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಪೊಲೀಸರು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಂದು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಕುಳಿತರು.
ಆತಂಕ ಮೂಡಿಸಿದೆ: ಪ್ರತಿಭಟನಾನಿರತರನ್ನುದ್ದೇಶಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ ಮಾತನಾಡಿ, ತಾಲೂಕಿನ ನಕ್ರಾಳ ತಾಂಡಾದಲ್ಲಿ ನಡೆದಿರುವ ಈ ಪ್ರಕರಣ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಜರುಗಿ ಒಂದೂವರೆ ತಿಂಗಳಾದರೂ ಇನ್ನೂ ಕೂಡ ಯಾವೊಬ್ಬ ಆರೋಪಿಯನ್ನು ಬಂಧಿಸದಿರುವ ಇಲ್ಲಿನ ಪೊಲೀಸ್ ಇಲಾಖೆ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹಣ ಪಡೆದು ಇಡೀ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ನವದೆಹಲಿ, ಮಣಿಪಾಲ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಜರುಗಿರುವ ಅತ್ಯಚಾರ ಪ್ರಕರಣಗಳನ್ನು ಅಲ್ಲಿನ ಪೊಲೀಸರು ಬೇಧಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಆದರೆ, ನಕ್ರಾಳ ತಾಂಡಾ ಪ್ರಕರಣದಲ್ಲಿ ಮಾತ್ರ ಯಾವುದೆ ಪ್ರಗತಿ ಕಾಣಿಸದಿರುವುದು ಇಲ್ಲಿನ ಪೊಲೀಸರ ಮೇಲೆ ಸಾರ್ವಜನಿಕರು ಅನುಮಾನ ಪಡುವಂತೆ ಮಾಡಿದೆ. ಕೂಡಲೆ ಇಡೀ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವ ಮೂಲಕ ನೊಂದ ಬಾಲಕಿಯರ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.
ಕಣ್ಣೀರು ಸುರಿಸಿದ ಪಾಲಕರು: ನಮ್ಮ ಹುಡುಗಿ ಕೊಲೆಯಾದ ಸಮಯದಲ್ಲಿ ಇನ್ನು ಮೂರು ದಿನಗಳ ಒಳಗಡೆ ಎಲ್ಲ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ರು, ಆದ್ರೆ ನಮ್ಮ ಹುಡುಗಿ ಸತ್ತು ಒಂದೂವರೆ ತಿಂಗಳಾದರೂ ಇನ್ನೂ ಯಾರನ್ನು ಬಂಧಿಸಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅತ್ಯಚಾರಕ್ಕೀಡಾಗಿ ಕೊಲೆಯಾದ ಬಾಲಕಿಯ ಪಾಲಕರು ಕಣ್ಣೀರು ಸುರಿಸಿದರು.
ಸಿಐಟಿಯು ಸಂಚಾಲಕ ಎಸ್. ಜಗನ್ನಾಥ, ಪ್ರಾಂತ ರೈತ ಸಂಘದ ಅಧ್ಯಕ್ಷ ಕೊಟಗಿ ಮಲ್ಲಿಕಾರ್ಜುನ, ಜನವಾದಿ ಮಹಿಳಾ ಸಂಘಟನೆಯ ಜಿ.ಆರ್. ಮಲ್ಲಮ್ಮ, ದೇವದಾಸಿ ಸಂಘದ ತಾಲೂಕಾಧ್ಯಕ್ಷೆ ಎಚ್. ಮೈಲಮ್ಮ, ಆಟೋ ಚಾಲಕರ ಸಂಘದ ಕೈಲಾಶ್, ಅಂಗವಿಕಲರ ಸಂಘದ ಕಾರ್ಯದರ್ಶಿ ಪಿ. ಚಾಂದಬೀ, ಬಿ. ಮಂಜುಳಾ, ಎಚ್. ದೊಡ್ಡಬಸಪ್ಪ ಸೇರಿ ಹಲವರು ಪಾಲ್ಗೊಂಡಿದ್ದರು.