ಗಣಿ ಅಕ್ರಮಕ್ಕೆ ಸಿಂಹಸ್ವಪ್ನ: ರಾಜ್ಯಕ್ಕೆ ಹಿತಇಂದ್ರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 31
ಎಲ್ಲರೂ ಅಧಿಕಾರಿಗಳಾಗಿರುತ್ತಾರೆ. ಆದರಲ್ಲಿ ಕೆಲವರು ಮಾತ್ರ ಕಾರ್ಯದಕ್ಷತೆ ಮೇಲೆ ಹೆಸರು ಮಾಡುತ್ತಾರೆ. ಅಂಥ ವ್ಯಕ್ತಿಗಳಲ್ಲಿ ಸಿಬಿಐ ಡಿಐಜಿ ಹಿತೇಂದ್ರ ಒಬ್ಬರು. ಬಳ್ಳಾರಿಯ ಗಣಿಗಾರಿಕೆ ಅಕ್ರಮಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದು ಸಿಬಿಐ. ಇಂಥ ಸಿಬಿಐ ತನಿಖೆ ನೇತೃತ್ವ ವಹಿಸಿಕೊಂಡಿದ್ದವರೆ ಸಿಬಿಐ ಡಿಐಜಿ ಹಿತೇಂದ್ರ.
ಅಕ್ರಮ ಗಣಿಗಾರಿಕೆ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನಾಲ್ಕು ಶಾಸಕರು, ಐಎಎಸ್, ಐಎಫ್ಎಸ್ ಅಧಿಕಾರಿಗಳು ಸೇರಿದಂತೆ ಹಲವು ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದು, ಜನಾರ್ದನ ರೆಡ್ಡಿ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಹೆಗ್ಗಳಿಕೆ ಸಿಬಿಐ ಡಿಐಜಿ ಹಿತೇಂದ್ರ ಅವರಿಗೆ ಸಲ್ಲುತ್ತದೆ. ಇಂಥ ಅಧಿಕಾರಿ ಗುರುವಾರ ಸಂಜೆ ಸಿಬಿಐ ವಿಭಾಗದಿಂದ ಮಾತೃ ಸಂಸ್ಥೆ ಪೊಲೀಸ್ ಇಲಾಖೆಗೆ ಮರಳಿದ್ದಾರೆ.
ಇಲ್ಲಿವರೆಗೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ಜನಾರ್ದನ ರೆಡ್ಡಿ ಪಾಲುದಾರತ್ವದ ಅಸೋಸಿಯೆಟೆಡ್ ಮೈನಿಂಗ್ ಕಂಪನಿ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸೇರಿದಂತೆ ಪ್ರಮುಖವಾಗಿ ಅಕ್ರಮ ಗಣಿಗಾರಿಕೆ, ಅಕ್ರಮ ರಫ್ತಿಗೆ ಸಂಬಂಧಿಸಿದಂತೆ ತನಿಖೆ ನೇತೃತ್ವವಹಿಸಿದ್ದರು. ಅಕ್ರಮ ಎಸಗಿದ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಎಂದು ಲೆಕ್ಕಿಸದೆ ಜೈಲು ಕಂಬಿ ಎಣಿಸುವಂತೆ ಮಾಡಿದ್ದ ಹಿತೇಂದ್ರ ಅವರು ಮೂಲತಃ ಕರ್ನಾಟಕದವರೇ ಎಂಬುದು ಮತ್ತೊಂದು ಹೆಗ್ಗಳಿಕೆ.
ಹಿತೇಂದ್ರ ಮುಂದಾಳತ್ವದಲ್ಲಿ ತನಿಖೆ: ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲ್ಲಿಸಿದ ಅಕ್ರಮ ಗಣಿಗಾರಿಕೆ ಕುರಿತ ವರದಿಯಿಂದ ಬಳ್ಳಾರಿ ಗಣಿಗಾರಿಕೆ ಅಕ್ರಮದ ಮುಖ ಸಮಾಜಕ್ಕೆ ಪರಿಚಯವಾಯಿತು. ವರದಿಯಿಂದಲೇ ಮುಖ್ಯಮಂತ್ರಿಗಳು, ಸಚಿವರು ಅಧಿಕಾರ ಕಳೆದುಕೊಳ್ಳುವಂತಾಯಿತು. ನಂತರದ ದಿನಗಳಲ್ಲಿ ಸಿಬಿಐ ಹೆಗಲಿಗೆ ಕೆಲ ಗಣಿ ಕಂಪನಿಗಳ ತನಿಖೆ ವಹಿಸಿಕೊಡಲಾಯಿತು. ಓಎಂಸಿ ಪ್ರಕರಣದಲ್ಲಿ ಆಂಧ್ರಪ್ರದೇಶದ ಸಿಬಿಐನಿಂದ ಬಂಧಿತರಾದ ಜನಾರ್ದನ ರೆಡ್ಡಿಯನ್ನು ರಾಜ್ಯದಲ್ಲಿರುವ ಅವರ ಪಾಲುದಾರತ್ವದ ಅಸೋಸಿಯೆಟೆಡ್ ಮೈನಿಂಗ್ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ ಡಿಐಜಿ ಹಿತೇಂದ್ರ ಅವರು ಅ. 1, 2011ರಂದು ರೆಡ್ಡಿ ವಿರುದ್ಧ ಪ್ರಥಮ ಎಫ್ಐಆರ್ ದಾಖಲಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸಿಬಿಐ ತನಿಖೆ ನೇತೃತ್ವ ವಹಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ಕೈಗೆತ್ತಿಕೊಂಡು 5 ಕಂಪನಿಗಳ ಮೇಲೆ ಎಫ್ಐಆರ್ ದಾಖಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ಬಾಬು, ಸತೀಶ್ ಸೈಲ್, ನಾಗೇಂದ್ರ, ಬಿ.ಎಸ್. ಆನಂದ್ಸಿಂಗ್, ಐಎಎಸ್ ಅಧಿಕಾರಿಗಳಾದ ಶಮೀಂ ಬಾನು, ವಿಶ್ವನಾಥನ್ (ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ), ಎಂ.ವಿ. ಶಿವಲಿಂಗಮೂರ್ತಿ, ಐಎಫ್ಎಸ್ ಅಧಿಕಾರಿಗಳಾದ ಮನೋಜ್ಕುಮಾರ್ ಶುಕ್ಲಾ, ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ರಾಜು ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಐದು ಎಫ್ಐಆರ್ಗಳಲ್ಲಿ ಎಸ್ಬಿ ಲಾಜಿಸ್ಟಿಕ್ ಕಂಪನಿ ಮೇಲೆ ದೋಷಾರೋಪಣ ಪಟ್ಟಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿಯೂ ಜನಾರ್ದನ ರೆಡ್ಡಿಯನ್ನು ಆರೋಪಿ ನಂ. 1 ಎಂದು ತಿಳಿಸಿದ್ದಾರೆ. ಎಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ರು. 480 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.
ನ್ಯಾಯ ಎಲ್ಲರ ಸ್ವತ್ತು: ಉನ್ನತ ಮಟ್ಟದ ಅಧಿಕಾರಿಗಳು ಕಾನೂನು, ನಿಯಮಗಳನ್ನು ಪಾಲನೆ ಮಾಡಿದರೂ, ತಮ್ಮ ಕರ್ತವ್ಯದಲ್ಲಿ ದಿಟ್ಟತನ ತೋರುವವರು ಕೆಲವೇ ಅಧಿಕಾರಿಗಳು ಮಾತ್ರ. ದುಡ್ಡಿದ್ದರೆ ಎಲ್ಲ ಎನ್ನುವ ಕಾಲದಲ್ಲಿ ದುಡ್ಡಿದ್ದವರಿಗೂ, ಇಲ್ಲದವರಿಗೂ ಒಂದೇ ಕಾನೂನು ಎಂಬುದು ಸರ್ವವಿಧಿತ ಎಂಬುದನ್ನು ಹಿತೇಂದ್ರ ತಮ್ಮ ಕಾರ್ಯದಕ್ಷತೆಯಿಂದ ಸಾಧಿಸಿ ತೋರಿಸಿದ್ದಾರೆ. ಇಂಥ ಅಧಿಕಾರಿಗಳ ಧಕ್ಷತೆಯನ್ನು ಪ್ರತಿಯೊಬ್ಬರು ಅನುಸರಿಸಿದರೆ, ಅಪರಾಧ ಮುಕ್ತ ಸಮಾಜ, ಶಾಂತಿಯುತ ಸಮಾಜ ನಿರ್ಮಾಣವಾಗಬಹುದಲ್ಲವೇ? ನ್ಯಾಯ ಎನ್ನುವುದು ಎಲ್ಲರ ಸ್ವತ್ತು ಎಂದು ಸಾರಿ ಹೇಳಬಹುದು.