ಬಾಸ್ಕೆಟ್ಬಾಲ್: ಬೆಂಗಳೂರು ಸೌತ್ಗೆ ಪ್ರಶಸ್ತಿ
ಬಳ್ಳಾರಿ: ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಬಾಲಕಿ- ಬಾಲಕರ ವಿಭಾಗದಲ್ಲಿ ಬೆಂಗಳೂರು ಸೌತ್ ತಂಡ ಜಯ ಸಾಧಿಸಿದ್ದು, ಬಾಲಕಿಯರ ತಂಡ ಅಂತಿಮ ಸುತ್ತಿನಲ್ಲಿ 34 ಅಂಕಗಳನ್ನು ಗಳಿಸಿ ಜಯ ಸಾಧಿಸಿದರೆ, 64 ಅಂಕಗಳಿಂದ ಬಾಲಕರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ, ಪ್ಯೂಪಿಲ್ ಟ್ರೀ ಪಿಯು ಕಾಲೇಜು ಸಹಯೋಗದಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಸೆಮಿಫೈನಲ್ನಲ್ಲಿ 23 ಅಂಕಗಳಿಂದ ಉಡುಪಿ ತಂಡದ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಸೌತ್ ಬಾಲಕಿರ ತಂಡ, ಕೊಡಗಿನ ವಿರುದ್ಧ 21-31ರಿಂದ ಜಯಗಳಿಸಿದ ಮೈಸೂರು ತಂಡವನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿತು. ಮೊದಲ ಹತ್ತು ನಿಮಿಷದಲ್ಲಿ ಮುನ್ನಡೆ ಸಾಧಿಸಿದ ಬೆಂಗಳೂರು ಸೌತ್ ತಂಡ, 2ನೇ ಅವಧಿಯಲ್ಲಿ ಹಿನ್ನೆಡೆ ಸಾಧಿಸಿತು. ಇನ್ನುಳಿದ ಎರಡು ಅವಧಿಗಳಲ್ಲಿ ಮತ್ತೆ ಚೇತರಿಸಿಕೊಂಡು ಅಂತಿಮವಾಗಿ 34-22ರಿಂದ ಮೈಸೂರು ತಂಡವನ್ನು ಮಣಿಸಿತು. ಬೆಂಗಳೂರು ಸೌತ್ ತಂಡದ ಪರ ದೇಚ್ಕಾ, ದೀಕ್ಷಾ ಹಾಗೂ ಮೈಸೂರು ತಂಡದ ಪರ ಗೋಮೇದಾ, ಸಿಂಚನಾ ಉತ್ತಮ ಪ್ರದರ್ಶನ ನೀಡಿದರು. ಬಾಲಕರ ವಿಭಾಗದಲ್ಲಿ ಧಾರವಾಡ- ಬೆಂಗಳೂರು ಸೌತ್ ತಂಡಗಳ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಜಯಗಳಿಸಿದೆ. ಆರಂಭದಿಂದಲೆ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ತಂಡ ಪಂದ್ಯದ ಎಲ್ಲ ಅವಧಿಗಳಲ್ಲೂ ಧಾರವಾಡ ತಂಡಕ್ಕಿಂತ ಮುನ್ನಡೆ ಕಾಯ್ದುಕೊಂಡು 62-37ರಿಂದ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬೆಂಗಳೂರು ಸೌಥ್ ತಂಡದ ಪರ ಶರತ್, ರೇಣುಕಾರಾಧ್ಯ, ಧಾರವಾಡದ ತಂಡದ ಪರ ಗನಿಸಾಬ್, ಮನೋಜ್ ಉತ್ತಮ ಪ್ರದರ್ಶನ ನೀಡಿದರು. ಪ್ರಶಸ್ತಿ ವಿತರಿಸಿ ಡಿಡಿಪಿಯು ಅಬ್ದುಲ್ ರಶೀದ್ ಮಾತನಾಡಿದರು. ಪ್ಯೂಪಿಲ್ ಟ್ರೀ ಕಾಲೇಜು ವ್ಯವಸ್ಥಾಪಕ ಪ್ರಭುರಾಜ್ ಜಹಗೀರ್ದಾರ್, ನಂದಿ ಇಂಟರ್ನ್ಯಾಷನಲ್ ಕಾಲೇಜಿನ ಉಮೇರ್ ಅಹ್ಮದ್ ಮಾತನಾಡಿದರು. ಡಾ. ಲಕ್ಷ್ಮಣ್ ಶರ್ಮ, ರಾಜೀವ್ ನಾಯ್ಕ್ ನಿರ್ಣಾಯಕರಾಗಿ ಭಾಗವಹಿಸಿದ್ದರು. ಪಪೂ ಶಿಕ್ಷಣ ಇಲಾಖೆಯ ಅಶೋಕ ಕುಮಾರ್, ಇಲಾಖೆ ಅಧಿಕಾರಿ ಎಂ.ಎಂ. ಕಟ್ಟಿ, ಪ್ರಾಚಾರ್ಯ ಜೆ. ಪ್ರಸಾದ್ ರೆಡ್ಡಿ, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.