ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವೈಜ್ಞಾನಿಕ ಸರ್ವೇಗೆ ಒಲವು

Lingaraj Badiger
Updated On : 1 Nov 2013, 11:10 am

ಬಳ್ಳಾರಿ: ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಣಿಗಾರಿಕೆ ಕುರಿತು ಎರಡೂ ರಾಜ್ಯಗಳ ಗಡಿ ಸರ್ವೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ವೇ ಆಫ್ ಇಂಡಿಯಾ ಸುಪ್ರೀಂಕೋರ್ಟ್‌ಗೆ 8 ಪುಟಗಳ ಅಫಿಡೆವಿಟ್ ಸಲ್ಲಿಸುವ ಮೂಲಕ ವೈಜ್ಞಾನಿಕ ಮಾದರಿಯ ಸರ್ವೇ ಮಾಡಲು ಮುಂದಾಗಿದೆ.
ಏ. 18ರಂದು ಸುಪ್ರೀಂಕೋರ್ಟ್ ಸರ್ವೇ ಆಫ್ ಇಂಡಿಯಾದ ಸಮ್ಮುಖದಲ್ಲಿ ಸರ್ವೇ ಮಾಡಬೇಕೆಂದು ಆದೇಶ ನೀಡಿದ ಬೆನ್ನಲ್ಲೇ ಡೆಹರಾಡೂನ್‌ನ ಸರ್ವೇ ಆಫ್ ಇಂಡಿಯಾ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಸ್ವರ್ಣ ಸುಬ್ಬರಾವ್ ಅವರು ಅ. 21ರಂದು ಸರ್ವೇ ಮಾಡುವ ಕುರಿತು 8 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ.
ತಮಗೆ ಈ ಸರ್ವೇ ಬಗ್ಗೆ ಅ. 19ರಂದು ಮೇಲ್ ಮೂಲಕ ಮಾಹಿತಿ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಎರಡೂ ರಾಜ್ಯಗಳ ಕಚೇರಿಗಳನ್ನು ಸಂಪರ್ಕಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಅಫಿಡವಿಟ್‌ನಲ್ಲೇನಿದೆ?: ದೇಶದ ರಾಷ್ಟ್ರೀಯ ಸಂಪತ್ತನ್ನು ಕೇವಲ ಕೆಲ ಅವಕಾಶವಾದಿಗಳು ಕೊಳ್ಳೆ ಹೊಡೆಯುತ್ತ ಲಾಭ ಗಳಿಸುತ್ತಿದ್ದಾರೆಂಬ ಆರೋಪವಿದೆ. ಸರ್ವೇ ಆಫ್ ಇಂಡಿಯಾ ಈ ಸಂಪತ್ತನ್ನು ರಕ್ಷಣೆ ಮಾಡಲು, ಬಹಳ ಜಾಗರೂಕತೆಯಿಂದ ಯಾರೂ ಪ್ರಶ್ನೆ ಮಾಡದಂತ ವಿಧಾನ ಅನುಸರಿಸಿ ಸರ್ವೇ ಮಾಡುತ್ತದೆ. ಉತ್ಕೃಷ್ಟ, ಪ್ರಗತಿಪರ ದೇಶಗಳ ಸರ್ವೇಗೆ ಕಡಿಮೆ ಇಲ್ಲದಂತೆ ಹೋಲಿಕೆ ಮಾಡಲು ಆಗದಂತೆ, ಕಣ್ತತಪ್ಪಿನಿಂದ ಆಗಬಹುದಾದ ತಪ್ಪುಗಳಿಗೂ ಅವಕಾಶ ಮಾಡಿಕೊಡದಂತೆ ಸರ್ವೇ ಮಾಡಲಾಗುತ್ತದೆ. ಇದೀಗ ಮಾಡುವ ಸರ್ವೇಯು ಸಿಬಿಐ ತನಿಖೆಗೆ ಅಗತ್ಯವಾಗಿರುವುದರಿಂದ ಜಾಗರೂಕತೆಯಿಂದ ಈ ಕಾರ್ಯ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಸರ್ವೇ ವಿಧಾನ: ಗ್ರೌಂಡ್ ಕಂಟ್ರೋಲ್ ಪಾಯಿಂಟ್ (ಜಿಸಿಪಿ)ನ ಡಿಜಿಟಲೀಕರಣದಿಂದ ಜಿಯೋ ರೆಫೆರನ್ಸ್ ಮೂಲಕ ಪಿಕ್ಸಲ್ ಲವೆಲ್‌ನಿಂದ ಸರ್ವೇ ಮಾಡಲಾಗುತ್ತದೆ.
ಸರ್ವೇ ಆಫ್ ಇಂಡಿಯಾ ಹ್ಯಾಂಡ್ ಬುಕ್ ಆಫ್ ಟೋಪೋ ಶೀಟ್‌ನ 7ನೇ ಅಧ್ಯಾಯದಲ್ಲಿರುವ ರಿ ಕನೈಜನ್ಸ್ ಅಂಡ್ ಸ್ಪೆಷಲ್ ಸರ್ವೇ ಮಾಡಲಾಗುತ್ತದೆ. ಸರ್ವೇ ಆಫ್ ಇಂಡಿಯಾದವರು 1974- 1975ರಲ್ಲಿ ಸರ್ವೇ ಮಾಡಿ 1976ರ ಸರ್ವೇ ನಕ್ಷೆಯಲ್ಲಿ ಎರಡು ರಾಜ್ಯದ ಗಡಿ ತೋರಿಸಿದ್ದು, ಇದನ್ನು ಎರಡೂ ರಾಜ್ಯದವರು ಅಂಗೀಕರಿಸಿದ್ದಾರೆ.
ಅಂಗೀಕರಿಸಿರುವ ನಕ್ಷೆಯನ್ನೇ ಮೂಲವಾಗಿಟ್ಟುಕೊಂಡು ಸರ್ವೇ ಮಾಡಲಾಗುತ್ತದೆ. ನಡವಳಿಯ ಮುಕ್ತತೆಗೆ ಕೊರತೆ ಇಲ್ಲದೆ, ಸಣ್ಣ ತಪ್ಪುಗಳು ಕಾಣದಂತೆ ಸರ್ವೇ ಮಾಡಲಾಗುವುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ದಾಖಲೆಗಾಗಿ ಸುಪ್ರೀಂಗೆ ಮನವಿ: ಗಡಿ ಸರ್ವೇ ಮಾಡಬೇಕಾದರೆ ಎರಡೂ ರಾಜ್ಯ ಸರ್ಕಾರಕ್ಕೆ ಕೆಲ ಮಾಹಿತಿ, ದಾಖಲೆಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚಿಸಬೇಕೆಂದು ತಮ್ಮ ಅಫಿಡವಿಟ್‌ನಲ್ಲಿ ಸ್ವರ್ಣ ಸುಬ್ಬರಾವ್ ಮನವಿ ಮಾಡಿದ್ದಾರೆ.
1986ರಲ್ಲಿ ಬಳ್ಳಾರಿ ರಿಸರ್ವ್ ಫಾರೆಸ್ಟ್ ಮ್ಯಾಪ್‌ನ್ನು ತಂತ್ರಾಂಶ ರೂಪದಲ್ಲಿ ಕೊಡಬೇಕು, 1991ರ ಸರ್ವೇ ಮ್ಯಾಪ್‌ನ್ನೂ ನೀಡಬೇಕು. 1890ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಬಳ್ಳಾರಿ ರಿಜರ್ವ್ ಫಾರೆಸ್ಟ್ ಕುರಿತು ಹೊರಡಿಸಿದ ನೋಟಿಫಿಕೇಷನ್, 1979ರ ಪೂರ್ವದಲ್ಲಿನ ಟೋಪೋ ಶೀಟ್‌ಗಳನ್ನು ನೀಡಬೇಕು. ಅಂತಾರಾಜ್ಯ ಗಡಿಗೆ ಹೊಂದಿಕೊಂಡ ಗ್ರಾಮ ನಕಾಶೆ, ಗಣಿ ಗುತ್ತಿಗೆ ಬರುವ ಜಿಪಿಎಫ್ ದತ್ತಾಂಶಗಳನ್ನು ನೀಡಲು ಸೂಚಿಸಬೇಕೆಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಗಡಿಗೆ ಹೊಂದಿಕೊಂಡಿರುವ ಕಂಪನಿಗಳು: ಅಂತಾರಾಜ್ಯ ಗಡಿಯನ್ನು ಒತ್ತುವರಿ ಮಾಡಿ ಗಣಿಗಾರಿಕೆ ಮಾಡಿರುವ ಕೆಲ ಕಂಪನಿಗಳು ಆತಂಕಕ್ಕೀಡಾಗಿವೆ.
ಗಡಿಯಲ್ಲಿರುವ ಎಲ್ಲ ಕಂಪನಿಗಳು ಒತ್ತುವರಿ ಮಾಡಿಲ್ಲ. ಆದರೆ ಒತ್ತುವರಿ ಮಾಡಿರುವ ಕಂಪನಿಗಳ ಆತಂಕ ಮಾತ್ರ ಹೆಚ್ಚಿದೆ. ಗಡಿಯ ಅನಂತಪುರ ಜಿಲ್ಲೆಗೆ ಹೊಂದಿಕೊಂಡು ಓಎಂಸಿಯ 3 ಗುತ್ತಿಗೆ ಪ್ರದೇಶ, ಅನಂತಪುರ ಮೈನಿಂಗ್ ಕಂಪನಿ, ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್, ವೈ. ಮಹಾಬಲೇಶ್ವರ, ಕರ್ನಾಟಕ ಗಡಿಯಲ್ಲಿ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡು ಮೆಹಬೂಬ್ ಟ್ರಾನ್ಸ್‌ಪೋರ್ಟ್, ಹಿಂದ್ ಟ್ರೇಡರ್ಸ್, ಎನ್. ರತ್ನಯ್ಯ, ಸುಗ್ಗಲಮ್ಮ ಗುಡ್ಡ ಮೈನ್ಸ್, ವಿಭೂತಿ ಗುಡ್ಡ ಮೈನ್ಸ್, ಬಳ್ಳಾರಿ ಮೈನಿಂಗ್ ಕಾರ್ಪೋರೇಷನ್, ಎನ್. ನಾರಾಯಣ ರೆಡ್ಡಿ ಕಂಪನಿಗಳು ಗಡಿಗೆ ಹೊಂದಿಕೊಂಡು ಗಣಗಾರಿಕೆ ಮಾಡಿವೆ. ಇದರಲ್ಲಿ ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡಿದ ಕಂಪನಿಗಳಿಗೆ ಭೀತಿ ಎದುರಾಗಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement