ಬರದ ಗಾಯದ ಮೇಲೆ ಜಿಂಕೆ ಹಾವಳಿ ಬರೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 1
ರೈತರು ಹೊಲಗದ್ದೆಗಳಿಗೆ ಹೋದಾಗ ಕರಡಿ, ಚಿರತೆ, ಆನೆಗಳ ದಾಳಿಗಳು ಸಹಜ. ಆದರೆ, ಬಳ್ಳಾರಿಯ ರೈತರು ಜಿಂಕೆ ಕಂಡರೆ ಹೆದರುತ್ತಾರೆ ಇದು ಅಕ್ಷರಶಃ ಸತ್ಯ.
ಇದೇನು? ಜಿಂಕೆ ಸಸ್ಯಹಾರಿ ಪ್ರಾಣಿ ಅಲ್ಲವೇ? ರೈತರನ್ನು ಏನು ಮಾಡುತ್ತೆ? ಎನ್ನಬಹುದು. ಆದರೆ, ಇಡೀ ರೈತರ ಜೀವನಾಡಿಯಾಗಿರುವ ಬಿತ್ತನೆ ಸಸಿಗಳಿಗೆ ತಿನ್ನುತ್ತವೆ. ಬರದೊಂದಿಗೆ ಜಿಂಕೆಯ ಹಾವಳಿ ಕೈ ಜೋಡಿಸಿ, ರೈತರ ಬದುಕು ದುಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ಇದರಿಂದಾಗಿ ರೈತರಿಗೆ ದಿಕ್ಕು ತೋಚದಾಗಿದೆ. ಜತೆಗೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕಾಡು ಹಂದಿ ಕಾಟ ವಿಪರೀತವಾಗಿದೆ.
ರಾಜ್ಯದಲ್ಲಿ ರೈತರ ಮೇಲೆ ಆನೆಗಳು ದಾಳಿ, ಕರಡಿ ದಾಳಿ ನೋಡಿದ್ದೇವೆ. ಬಳ್ಳಾರಿ ರೈತರ ಜೀವಕ್ಕೆ ಜೀವಾಗಿರುವ ಜಮೀನುಗಳಲ್ಲಿ ಬೆಳೆದಿರುವ ಚಿಕ್ಕ ಚಿಕ್ಕ ಸಸಿಗಳನ್ನು ತಿಂದುಹಾಕುತ್ತಿರುವುದು ರೈತರ ಮೇಲಿನ ದಾಳಿ ಅಲ್ಲದೆ ಮತ್ತೇನು ಎನ್ನುವಂತಾಗಿದೆ. ಜಿಲ್ಲೆಯಲ್ಲಿ ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ. ಹೆಚ್ಚುವರಿ ನೀರು ನದಿಯ ಮೂಲಕ ಹರಿದುಹೋಗಿ ಸಮುದ್ರ ಸೇರುತ್ತದೆ. ಆದರೂ ಬಳ್ಳಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಬಳ್ಳಾರಿ ಜಿಲ್ಲೆಯ ರೂಪನಗುಡಿ ಹೋಬಳಿ ಸೇರಿದಂತೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚಾಗಿರುವ ಪ್ರದೇಶದಲ್ಲಿ ಜಿಂಕೆ ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿರುವುದು ರೈತರನ್ನು ಕಂಗಾಲು ಪಡುವಂತಾಗಿದೆ.
ಜಿಂಕೆ ಕಾಟ: ಬಳ್ಳಾರಿ ತಾಲೂಕಿನ ಕೆ. ವೀರಾಪುರ, ಚೇಳ್ಳಗುರ್ಕಿ, ಜೋಳದರಾಶಿ, ಶಿಡಿಗಿನ ಮೊಳ, ಮೀನಳ್ಳಿ, ರೂಪನಗುಡಿ, ಸಿರುಗುಪ್ಪ ತಾಲೂಕಿನ ರಾವಿಹಾಳ್, ಹಚ್ಚೊಳ್ಳಿ, ಬಿ.ಎಂ. ಸೂಗೂರು ಸೇರಿದಂತೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಬಂದಿದ್ದರೂ, ಮಳೆಯನ್ನು ನೆಚ್ಚಿಕೊಂಡು ತೇವಾಂಶದ ಕೊರತೆ ನಡುವೆಯೂ ಹತ್ತಿ ಸೇರಿದಂತೆ ಇತರೆ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಇದೀಗ ಮಳೆಯ ಕೊರತೆಯ ನಡುವೆ ಅಲ್ಲೊಂದು, ಇಲ್ಲೊಂದು ಸಸಿಗಳು ಬೆಳೆದಿದ್ದು, ಅಷ್ಟಿಷ್ಟು ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರ ಆಸೆಗೆ ಇದೀಗ ಜಿಂಕೆಗಳು ಕಾಟ, ತಣ್ಣೀರು ಎರಚುತ್ತಿವೆ.
ಜಿಂಕೆಗಳು
ಜಮೀನಿಗೆ ಮುತ್ತಿಗೆ: ಜಮೀನುಗಳಿಗೆ ಕೇವಲ ಒಂದೆರೆಡು ಜಿಂಕೆಗಳು ಬಂದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ನೂರಾರು ಜಿಂಕೆಗಳುಳ್ಳ ಹಿಂಡು ಜಮೀನಿಗೆ ಬರುವುದರಿಂದ ಜಮೀನಿನನಲ್ಲಿ ಚಿಕ್ಕ ಚಿಕ್ಕ ಸಸಿಗಳನ್ನು ತಿಂದು ಹಾಕುತ್ತಿವೆ, ತುಳಿದಾಡುತ್ತವೆ. ಇದರಿಂದಾಗಿ ತೇವಾಂಶದ ಕೊರತೆಯಿಂದ ಅಷ್ಟಿಷ್ಟು ಬೆಳೆದ ಸಸಿಗಳು ಕೂಡ ಜಿಂಕೆ ಬಾಯಿಗೆ ಆಹಾರವಾಗುತ್ತಾ, ರೈತರಿಗೆ ಹಾನಿಯಾಗುತ್ತಿದೆ. ಇದರಿಂದಾಗಿ ಬೇಸತ್ತಿರುವ ರೈತರು ಏನು ಮಾಡಬೇಕೆಂದು ಚಿಂತೆ ಮಾಡುತ್ತಿದ್ದಾರೆ. ಇದಕ್ಕೆ ಅನಿವಾರ್ಯವಾಗಿ ಹಗಲು-ರಾತ್ರಿ ಹೊಲದಲ್ಲಿ ಬೀಡು ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವಂತಿಲ್ಲ. ಇನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಏನು ತಾನೇ ಮಾಡಿಯಾರೂ ಎನ್ನುವಂತಾಗಿದೆ.
ಕಾಡು ಹಂದಿಗಳ ಕಾಟ: ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾಡು ಹಂದಿಗಳ ಕಾಟವೂ ಹೆಚ್ಚಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕೂಡ್ಲಿಗಿ ಹಾಗೂ ಹೂವಿನಹಡಗಲಿ ಇತರ ತಾಲೂಕುಗಳಲ್ಲಿ ಕಾಡು ಹಂದಿಗಳ ಕಾಟದಿಂದ ಮುಂಗಾರು ಬೆಳೆ ರೈತರ ಕೈ ಸೇರುತ್ತದೋ ಇಲ್ಲವೆ ಎನ್ನುವ ಚಿಂತೆಯಾಗಿದೆ. ಶೇಂಗಾ ಬೀಜ ಬಿತ್ತನೆ ಮಾಡಿದಾಗ, ಬಿತ್ತನೆ ಮಾಡಿದ ಬೀಜವನ್ನು ಕಾಡು ಹಂದಿ ಸಾಲು ಹಿಡಿದು ತಿಂದುಹಾಕುತ್ತದೆ. ಬೆಳೆದು ನಿಂತ ಮೆಕ್ಕೆಜೋಳದ ಜಮೀನಿನಲ್ಲಿ ಓಡಾಡಿ ಸಸಿಯನ್ನು ನೆಲಕ್ಕೆ ಬೀಳುವಂತೆ ಮಾಡುತ್ತಿದೆ. ಪರ್ಯಾಯ ವ್ಯವಸ್ಥೆ ಏನೆಂಬುದು ರೈತರಿಗೆ ತಿಳಿಯದಾಗಿದೆ.
ಕಾಡು ಹಂದಿ ಕಾಟ
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾಡು ಹಂದಿಗಳ ಕಾಟವೂ ಹೆಚ್ಚಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕೂಡ್ಲಿಗಿ ಹಾಗೂ ಹೂವಿನಹಡಗಲಿ ಇತರ ತಾಲೂಕುಗಳಲ್ಲಿ ಕಾಡು ಹಂದಿಗಳ ಕಾಟದಿಂದ ಮುಂಗಾರು ಬೆಳೆ ರೈತರ ಕೈ ಸೇರುತ್ತದೋ ಇಲ್ಲವೆ ಎನ್ನುವ ಚಿಂತೆಯಾಗಿದೆ.
ಈ ಹಾನಿಗೆ ಯಾರು ಹೊಣೆ?
ನೆರೆ, ಪ್ರವಾಹಕ್ಕೆ ರೈತರಿಗೆ ಪರಿಹಾರ ನೀಡುತ್ತದೆ. ಆದರೆ ಜಿಂಕೆ, ಕಾಡುಹಂದಿಗಳಿಂದ ಬೆಳೆ ಹಾನಿಗೊಳಗಾದರೆ ರೈತರಿಗೆ ಪರಿಹಾರವೇನು? ಬರದ ನಡುವೆಯೂ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ಈ ರೀತಿ ಹಾನಿಗೆ ಯಾರು ಹೊಣೆ ಎಂಬುದು ಸರ್ಕಾರವೇ ಆಲೋಚಿಸಬೇಕಾಗಿದೆ.
ಜಿಂಕೆಗಳ ಕಾಟಕ್ಕೆ ಬೇಸತ್ತು ಹೋಗಿದ್ದೇವೆ...
1000ಕ್ಕೂ ಹೆಚ್ಚು ಜಿಂಕೆಗಳು ರೂಪನಗುಡಿ ಹೋಬಳಿ ಸೇರಿದಂತೆ ಈ ಭಾಗದಲ್ಲಿವೆ. ಹತ್ತಿ ಬಿತ್ತನೆ ಮಾಡಿದ್ದ ಜಮೀನಿಗೆ ಒಮ್ಮೆಲೆ ನೂರಾರು ಜಿಂಕೆಗಳು ಜಮೀನನ್ನು ಹೊಕ್ಕು, ಸಸಿಗಳನ್ನು ತಿಂದು, ಜಮೀನಿನಲ್ಲಿ ಸುತ್ತಾಡುವುದರಿಂದ ಬೆಳೆ ಹಾನಿಯಾಗುತ್ತಿದೆ. ಸ್ವಲ್ಪ ಹೊತ್ತು ಜಮೀನು ಕಾಯದೇ ಇದ್ದರೆ, ಬೆಳೆಹಾನಿಯಾಗುತ್ತದೆ. ಈಗಾಗಲೇ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಸಸಿಗಳನ್ನು ಜಿಂಕೆಗಳು ತಿಂದಿವೆ. ಈಗಾಗಲೇ ಎರಡು ವರ್ಷದಿಂದ ಬರದಿಂದ ತತ್ತರಿಸಿ ಹೋಗಿದ್ದೇವೆ. ಇದೀಗ ಬಿತ್ತನೆ ಮಾಡಿದ ಬೆಳೆಯು ಜಿಂಕೆಯ ಪಾಲಾಗುತ್ತಿದೆ.
- ಎರ್ರೆಪ್ಪ, ರೈತ
- ಶಶಿಧರ ಮೇಟಿ