ಮಾನವ ಹಕ್ಕು ಜಾಗೃತಿ ಕಾರ್ಯಕ್ರಮ
ಬಳ್ಳಾರಿ: ಮಾನವ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ಮಾನವ ಹಕ್ಕುಗಳ ಸಂಘದ ಜಿಲ್ಲಾಧ್ಯಕ್ಷ ಡಿ. ಪ್ರಭುರೆಡ್ಡಿ ತಿಳಿಸಿದರು.
ನಗರದ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ಮಾನವ ಹಕ್ಕುಗಳ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘಟನೆಯಿಂದ ಮುಂಬರುವ ದಿನಗಳಲ್ಲಿ ಹಲವು ಅಭಿವೃದ್ಧಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಮಾನವ ಹಕ್ಕುಗಳಲ್ಲಿ ಬರುವ ಜೀವಿಸುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ ಮತ್ತು ವಿಕಾಸ ಹೊಂದುವ, ಭಾಗವಹಿಸುವ, ಸಮಾನತೆಯ, ತಾರತಮ್ಯದ ವಿರುದ್ಧ, ಅಭಿವ್ಯಕ್ತಿ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ, ಮಾಹಿತಿ ಪಡೆಯುವ, ಆತ್ಮಸಾಕ್ಷಿ ಮತ್ತು ಧರ್ಮದ ಅನುಸರಣೆ ಹಾಗೂ ಧಾರ್ಮಿಕ ಹಕ್ಕು, ಸಂಘಟಿತರಾಗುವ ಹಕ್ಕು, ವೈಯಕ್ತಿಕ ರಕ್ಷಣೆಯ ಹಕ್ಕು, ಆರೋಗ್ಯದ ಹಕ್ಕು, ಆಹಾರದ ಹಕ್ಕು, ಶಿಕ್ಷಣ ಮತ್ತು ತರಬೇತಿ ಹಕ್ಕು, ಲೈಂಗಿಕ ಶೋಷಣೆಯಿಂದ ರಕ್ಷಣೆ ಹಕ್ಕು, ನಿರ್ಮಲವಾದ ಪ್ರಕೃತಿ ಮತ್ತು ಪರಿಸರ ಹಕ್ಕು, ನ್ಯಾಯ ದೊರಕಿಸಿ ಕೊಡುವ ಹಕ್ಕು ಸೇರಿದಂತೆ ಒಟ್ಟು 18 ಹಕ್ಕುಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪೈಕಿ ಹಲವು ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ನೇತೃತ್ವದಲ್ಲಿ 1987ರಲ್ಲಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಮಾನವ ಹಕ್ಕುಗಳ ಸಂಘವು ದಕ್ಷಿಣ ಭಾರತದ ಜನತೆಗೆ ಅಷ್ಟಾಗಿ ಪರಿಚಯವಿಲ್ಲ. ಸಂಘವು ತಡವಾಗಿ ರಾಜ್ಯಕ್ಕೆ ಕಾಲಿಟ್ಟರೂ, ತಮ್ಮ ಹಕ್ಕುಗಳ ಕುರಿತು ಜನರಿಗೇ ಗೊತ್ತಿರದ ಹಲವು ಮಾನವ ಹಕ್ಕುಗಳ ಕುರಿತು ಸಾಧ್ಯವಾದಷ್ಟು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸಲಾಗಿದೆ ಎಂದರು.
ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅವರ ವಿವರ ಇಂತಿದೆ. ಜಿಲ್ಲಾಧ್ಯಕ್ಷರಾಗಿ ಡಿ. ಪ್ರಭುರೆಡ್ಡಿ, ಜಿಲ್ಲಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್‌ರೆಡ್ಡಿ, ನಗರ ಅಧ್ಯಕ್ಷರಾಗಿ ಬಿ.ಮಧುಸೂದನ ನಾಯಡು, ನಗರ ಕಾರ್ಯದರ್ಶಿಯಾಗಿ ವಿ.ಸುರೇಶ್‌ರೆಡ್ಡಿ, ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷರಾಗಿ ಬಿ.ವಿ.ಶಂಕರ್, ಸಿರುಗುಪ್ಪ ತಾಲೂಕು ಕಾರ್ಯದರ್ಶಿಯಾಗಿ ಎಸ್.ಜಯಪ್ರಕಾಶ್ ಸೇರಿದಂತೆ ಇತರರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್‌ರೆಡ್ಡಿ, ಸುರೇಶ್ ರೆಡ್ಡಿ, ಪತ್ರಿಕಾ ಸಲಹೆಗಾರ ಯು.ಶಿವಾನಂದ, ಸೇರಿದಂತೆ ಮತ್ತಿತರರು ಇದ್ದರು.