ದೇವದಾಸಿ ಪದ್ಧತಿ ಪೂರ್ಣನಿರ್ಮೂಲನೆಗೆ ಬದ್ಧರಾಗಿ
ಬಳ್ಳಾರಿ: ದೇವದಾಸಿ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಈ ಪದ್ಧತಿಯ ನಿರ್ಮೂಲನೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ದೇವದಾಸಿಯರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಲಾಖೆಯಿಂದ ದೇವದಾಸಿಯರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ನಿಂದ ಸಾಲ ಹಾಗೂ ನಿಗಮದಿಂದ ಸಹಾಯಧನ, ರು. 400 ಮಾಸಾಶನ, ನಿವೇಶನ ಹೊಂದಿದ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನ್ಯಾಯಾವಾದಿ ಚಂದ್ರಕಲಾ ಮಾತನಾಡಿ, ದೇವದಾಸಿ ಪದ್ಧತಿಯನ್ನು ಆಚರಣೆ ಮಾಡಿದಲ್ಲಿ ಕಾನೂನಿನಡಿ ಶಿಕ್ಷೆಗೆ ಅವಕಾಶವಿದೆ. ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ವರದಕ್ಷಿಣೆ ಹಾಗೂ ಮಹಿಳೆಯರಿಗಾಗಿ ಇರುವ ಕಾನೂನುಗಳ ಬಗ್ಗೆ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾ ಅಭಿವೃದ್ಧಿ ಅಧಿಕಾರಿ ಚಂದ್ರನಾಯಕ್ ಮಾತನಾಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಶೇಖರಪ್ಪ, ಹಗರಿಬೊಮ್ಮನಹಳ್ಳಿಯ ದೇವದಾಸಿ ಯೋಜನೆಯ ಅನುಷ್ಠಾನಾಧಿಕಾರಿ ಬಿ.ಆರ್. ವೇದಮೂರ್ತಿ, ಸಿರುಗುಪ್ಪದ ನಾಗರಾಜ್ ಉಪಸ್ಥಿತರಿದ್ದರು. ಬಳ್ಳಾರಿ ಯೋಜನಾ ಅನುಷ್ಠಾನಾಧಿಕಾರಿ ಎಂ. ಮುಕ್ಕಣ್ಣ ನಿರೂಪಿಸಿದರು. ಹೊಸಪೇಟೆ ಯೋಜನಾ ಅನುಷ್ಠಾನಾಧಿಕಾರಿ ಹೂಗಾರ್ ವಿಶ್ವನಾಥ ವಂದಿಸಿದರು.