ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿವೇಕಾನಂದರ ಅಮೃತವಾಣಿ ಸಾರ್ವಕಾಲಿಕ ಸತ್ಯ

Vishwanath S
Updated On : 3 Sept 2013, 11:17 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 2
ಸದ್ಭಾವನೆ, ರಾಷ್ಟ್ರಾಭಿಮಾನ ಮೂಡಿಸುವ ಮೂಲಕ ಯುವ ಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾದ ಸ್ವಾಮಿ ವಿವೇಕಾನಂದರ ಅಮೃತವಾಣಿಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ಜಿಬಿಆರ್ ಕಾಲೇಜು ಪ್ರಾಧ್ಯಾಪಕ ಎಸ್.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಜಿಬಿಆರ್ ಕಾಲೇಜು ಆವರಣದಲ್ಲಿ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ನಿಮಿತ್ತ ಮನೆ ಮನೆಗೆ ಸ್ವಾಮಿ ವಿವೇಕಾನಂದ ಅಭಿಯಾನ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಜೀವನದ ಮೌಲ್ಯಗಳನ್ನು ಅರಿತು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು. ಆರ್‌ಎಸ್‌ಎಸ್ ದೇಶ ಕಟ್ಟುವಲ್ಲಿ ತನ್ನದೇ ಆದ ಧ್ಯೇಯೋದ್ದೇಶಗಳನ್ನು ಹೊಂದಿದೆ. ಆದರೆ ಆರ್‌ಎಸ್‌ಎಸ್ ಸಂಘಟನೆ ಇತ್ತೀಚೆಗೆ ರಾಜಕೀಯ ಪ್ರೇರಿತವಾಗುತ್ತಿರುವುದು ನೋವಿನ ಸಂಗತಿ ಎಂದರು.
ಪ್ರಸ್ತುತ ಪಠ್ಯಕ್ರಮದಲ್ಲಿ ಆದರ್ಶ ವ್ಯಕ್ತಿಗಳನ್ನು ಪರಿಚಯಿಸುವ ಕಾರ್ಯ ನಡೆಯದಿದ್ದರಿಂದ ಯುವ ಜನತೆಯಲ್ಲಿ ದೇಶಾಭಿಮಾನದ ಅರಿವಿನ ಕೊರತೆ ಉಂಟಾಗಿದೆ ಎಂದ ಅವರು, ಶ್ರಮ ಸಂಸ್ಕೃತಿ ಕೈ ಬಿಟ್ಟು ವಿಲಾಸಿ ಬದುಕು ಅಪೇಕ್ಷಿಸುವವರ ಸಂಖ್ಯೆ ಹೆಚ್ಚಾಗಿರುವುದು ಕೂಡ ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದರು.
ಕೂಡ್ಲಿಗಿಯ ವರ್ತಕ ಅನಂತಪದ್ಮನಾಭ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಹಿಂದೆ ಬೀಳದೆ ಸ್ವದೇಶಿ ಹಾಗೂ ಸಾಧಕರ ಕಾರ್ಯಕ್ರಮಗಳ ಮೂಲಕ ಮನಸ್ಸು ಪರಿವರ್ತಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ. ಪಂಪಾಪತಿ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರುರಾಜ್, ಹಾಲೇಶ ನಾಯ್ಕ ಇತರರಿದ್ದರು.
ಎ. ಉಮಾಪತಿ ಪ್ರಾರ್ಥಿಸಿದರು. ಎಚ್. ಪೂಜಪ್ಪ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಂ. ಗುರುಬಸವರಾಜಯ್ಯ ನಿರೂಪಿಸಿದರು. ಗಣೇಶ ಆಚಾರ್ಯ ವಂದಿಸಿದರು. ಅನಂತರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಮತ್ತು ಕರಪತ್ರಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement