ವೈದ್ಯರ ಕಡ್ಡಾಯ ಸೇವೆಗೆ ಮಸೂದೆ ರಚನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 2
ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವಂತೆ ಮಸೂದೆ ರೂಪಿಸಿ, ಅನುಮೋದಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನಿಯಮ ಉಲ್ಲಂಘಿಸಿದ ವೈದ್ಯರಿಗೆ ದಂಡ ವಿಧಿಸಲಾಗಿದೆ. ಆದರೆ ದಂಡದ ಪ್ರಮಾಣವನ್ನು ಒಂದು ಲಕ್ಷದಿಂದ ರು. 5 ಲಕ್ಷದವರೆಗೆ, ಪಿಜಿ ಡಿಪ್ಲೊಮಾ ವೈದ್ಯರಿಗೆ ರು. 5ರಿಂದ 10 ಲಕ್ಷವರೆಗೆ, ಪಿಜಿ ವೈದ್ಯರಿಗೆ ರು. 10 ಲಕ್ಷದಿಂದ 25 ಲಕ್ಷ ವರೆಗೆ ಹೆಚ್ಚಳ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.
331 ವೈದ್ಯರ ನೇಮಕ: ಕೇಂದ್ರದ ಎಂಸಿಎ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದ ವೈದ್ಯರಿಗೆ ವೈದ್ಯಕೀಯ ಪ್ರಮಾಣಪತ್ರ ನೀಡದಿರಲು ಚಿಂತಿಸುತ್ತಿದೆ. 381 ವೈದ್ಯರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಇಲಾಖೆ 331 ವೈದ್ಯರ ನೇಮಕಾತಿಗೆ ಅನುಮತಿ ನೀಡಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಅಪೌಷ್ಟಿಕತೆ ಹೊಂದಿದ ಮಕ್ಕಳಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ, ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಒದಗಿಸಬೇಕು. 50 ಸಾವಿರ ಜನರಿಗೊಂದು ಆ್ಯಂಬುಲೆನ್ಸ್‌ನ್ನು ಒದಗಿಸುವಂತೆ ನಿರ್ಧರಿಸಲಾಗಿದೆ. ಪ್ರಸ್ತುತ 517 ಆ್ಯಂಬುಲೆನ್ಸ್‌ಗಳಿವೆ. ಕೇಂದ್ರ ಸರ್ಕಾರ 217 ಆ್ಯಂಬುಲೆನ್ಸ್ ನೀಡಲಿದೆ. ವರ್ಲ್ಡ್‌ಬ್ಯಾಂಕ್ 190 ಆ್ಯಂಬುಲೆನ್ಸ್ ಖರೀದಿಗೆ ನೆರವು ನೀಡಲಿದೆ ಎಂದು ಸಚಿವ ಖಾದರ್ ತಿಳಿಸಿದರು.
ನೂತನವಾಗಿ ಸಹಾಯವಾಣಿ ಸಂಖ್ಯೆ 104ನ್ನು ಸ್ಥಾಪಿಸಲಾಗಿದೆ. ಈ ದೂರವಾಣಿಗೆ ಕರೆ ಮಾಡಿ ವೈದ್ಯಕೀಯ ಸಲಹೆ, ಔಷಧಿ ವಿವರ ಹಾಗೂ ಯಾವುದೇ ದೂರುಗಳಿದ್ದರೂ ದಾಖಲಿಸಬಹುದು. ಕಲಬೆರಕೆ ಆಹಾರ, ಗುಟ್ಕಾ ನಿಷೇಧ ಕುರಿತು ಕಾಯ್ದೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಖಾದರ್ ಹೇಳಿದರು.
ಸೌಜನ್ಯದಿಂದ ವರ್ತಿಸಿ, ಉತ್ತಮ ಸೇವೆ ನೀಡಿ
ಬಳ್ಳಾರಿ: ಎಲ್ಲ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿ, ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಿ, ಉತ್ತಮ ತಪಾಸಣೆ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ವೈದ್ಯರು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ರೋಗಿಗಳಿಗೆ ಔಷಧಿಗೆ ಹೊರ ಚೀಟಿ ಬರೆದುಕೊಡಬಾರದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಿಯಾಗಿ ಔಷಧಿ ವಿತರಣೆ ಮಾಡಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು ಎಂದರು.
ಜಾಗೃತಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಆಮಂತ್ರಿಸಿದರೆ ಯಶಸ್ವಿಯಾಗುತ್ತದೆ. ಅಪೌಷ್ಟಿಕ ಮಕ್ಕಳಿಗೆ ಸ್ಥಾಪಿಸುವ ಆರೈಕೆ ಕೇಂದ್ರಗಳಲ್ಲಿ ಹೆಚ್ಚು ಕಾಳಜಿವಹಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾದವ ರಾವ್ ಪಾಟೀಲ್, ಡಾ. ನಿಜಾಮುದ್ದೀನ್, ಡಾ. ಅಬ್ದುಲ್ಲಾ, ಡಾ. ನರಸಿಂಹಮೂರ್ತಿ, ಡಾ. ವೀರಣ್ಣಗೌಡ, ಡಾ. ಅಶ್ವತನಾರಾಯಣ ಮತ್ತಿತರರು ಹಾಜರಿದ್ದರು.
-381 ವೈದ್ಯರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಇಲಾಖೆ 331 ವೈದ್ಯರ ನೇಮಕಾತಿಗೆ ಅನುಮತಿ ನೀಡಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು.
- 50 ಸಾವಿರ ಜನರಿಗೊಂದು ಆ್ಯಂಬುಲೆನ್ಸ್‌ನ್ನು ಒದಗಿಸುವಂತೆ ನಿರ್ಧರಿಸಲಾಗಿದೆ. ಪ್ರಸ್ತುತ 517 ಆ್ಯಂಬುಲೆನ್ಸ್‌ಗಳಿವೆ. ಕೇಂದ್ರ ಸರ್ಕಾರ 217 ಆ್ಯಂಬುಲೆನ್ಸ್ ನೀಡಲಿದೆ. ವರ್ಲ್ಡ್‌ಬ್ಯಾಂಕ್ 190 ಆ್ಯಂಬುಲೆನ್ಸ್ ಖರೀದಿಗೆ ನೆರವು ನೀಡಲಿದೆ.
- ನೂತನವಾಗಿ ಸಹಾಯವಾಣಿ ಸಂಖ್ಯೆ 104ನ್ನು ಸ್ಥಾಪಿಸಲಾಗಿದೆ. ಈ ದೂರವಾಣಿಗೆ ಕರೆ ಮಾಡಿ ವೈದ್ಯಕೀಯ ಸಲಹೆ, ಔಷಧಿ ವಿವರ ಹಾಗೂ ಯಾವುದೇ ದೂರುಗಳಿದ್ದರೂ ದಾಖಲಿಸಬಹುದು.