ಸಂಸ್ಕೃತ ಎಲ್ಲ ಭಾಷೆಗಳ ತಾಯಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 2
ಬೇರೆ ಭಾಷೆಗಳಿಗೂ ಜೀವ ಕೊಡುವ ಶಕ್ತಿ ಅತ್ಯಂತ ಪ್ರಾಚೀನ ಭಾಷೆಯಾಗಿರುವ ಸಂಸ್ಕೃತ ಭಾಷೆಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದರು.
ನಗರದ ಹೊರವಲಯದ ಗುಗ್ಗರಹಟ್ಟಿಯಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದೇಶ್ವರ ಸಂಸ್ಕೃತ ಮಹಾವಿದ್ಯಾಲಯದ ಪ್ರಾರಂಭ ಹಾಗೂ ಗುಲ್ಬರ್ಗ ವಲಯ ಸಂಸ್ಕೃತೋತ್ಸವವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಸಂಸ್ಕೃತ ಭಾರತೀಯ ಎಲ್ಲ ಭಾಷೆಗಳ ತಾಯಿಯಾಗಿದೆ. ಜೊತೆಗೆ ಸಂಸ್ಕೃತವು ಜ್ಞಾನೋಪಯೋಗಿ, ಮನಸ್ಸಿಗೆ ಪರಿಣಾಮಕಾರಿಯಾಗುವ ಮಂತ್ರ ಭಾಷೆಯಾಗಿದೆ ಎಂದು ತಿಳಿಸಿದರು.
ಏಕರೂಪದ ಗ್ರಂಥವಿಲ್ಲ: ಮುಸಲ್ಮಾನರಿಗೆ ಖುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದ್ದಂತೆ ಹಿಂದೂಗಳಿಗೆ ಏಕರೂಪದ ಗ್ರಂಥವಿಲ್ಲ. ಭಾರತೀಯ ಹಿಂದೂ ಸಂಸ್ಕೃತಿಗೆ 4 ವೇದಗಳು, 100 ಉಪನಿಷತ್ತುಗಳು, 18 ಪುರಾಣಗಳು, ರಾಮಾಯಣ, ಭಾಗವತ, ಮಹಾಕಾವ್ಯಗಳು, ನಾಟಕಗಳು, ಪಂಚತಂತ್ರ ಹಿತೋಪದೇಶಗಳಂತಹ ಕಥಾ ಸಾಹಿತ್ಯಗಳು, ಜಲಶಾಸ್ತ್ರ, ಪಕ್ಷಿಶಾಸ್ತ್ರ ಹೀಗೆ ಹಲವಾರು ಗ್ರಂಥಗಳು ಸಹಕಾರ ನೀಡುತ್ತಿದ್ದು, ಒಟ್ಟು 64 ಕಲೆಗಳಿಗೆ ಭಾರತೀಯರು ಉತ್ತರಾಧಿಕಾರಿಗಳಾಗಿದ್ದಾರೆ. ಇಂತಹ ಅದೃಷ್ಟ ಜಗತ್ತಿನ ಬೇರೆ ಯಾವ ದೇಶದವರಿಗೂ ಲಭಿಸಿಲ್ಲ ಎಂದರು.
ಸಂಸ್ಕೃತಕ್ಕೆ ಉನ್ನತ ಸ್ಥಾನ: ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ತ್ರಿಲೋಚನ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಶಾಸ್ತ್ರ ಪರಂಪರೆಯಲ್ಲಿ ಸಂಸ್ಕೃತವು ತನ್ನದೇ ಆದ ಉನ್ನತ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಸಂಸ್ಕೃತ ಕೇವಲ ಭಾಷೆಯಲ್ಲ. ಮನುಷ್ಯನ ಸಂಸ್ಕಾರ ಹಾಗೂ ಸಂಸ್ಕೃತಿಯಿಂದ ಕೂಡಿದೆ. ಇದಕ್ಕೆ ಭಾರತೀಯ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ಲಭ್ಯವಿದ್ದು, ಪಾಣಿನಿಯು ಮಹೇಶ್ವರ ಸೂತ್ರದಿಂದ ವ್ಯಾಕರಣ ಶಾಸ್ತ್ರ ಪ್ರಾರಂಭಿಸಿದನು. ಮಹಾಕವಿ ಕಾಳಿದಾಸನು ವಾಗಾರ್ಥವಿವ ಸಂಪೃಕ್ತೌ ಶ್ಲೋಕದಿಂದ ಕುಮಾರ ಸಂಭವವೆಂಬ ಮಹಾಕಾವ್ಯ ಪ್ರಾರಂಭಿಸಿದನು. ಹೀಗೆ ದಂಡಿ, ಬಾಣ, ಹರ್ಷ ಇತ್ಯಾದಿ ಕವಿಗಳಿಂದ ಅಂದಿನಿಂದ ಇಂದಿನವರೆಗೂ ತನ್ನ ಸ್ಥಾನವನ್ನು ಉಳಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ಸಂಸ್ಕೃತ ಭಾರತಿ ಸಂಘಟನಾ ಮಂತ್ರಿ ವಿದ್ವಾನ್ ರಾಮಕೃಷ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುಲ್ಬರ್ಗ ವಲಯ ಸಂಸ್ಕೃತ ಪರಿವೀಕ್ಷಕ ಡಾ. ಹನುಮಂತರಾವ್ ಜೋಶಿ ಮಾತನಾಡಿದರು.
ನಂತರ ನಡೆದ ಗುಲ್ಬರ್ಗ ವಲಯ ಸಂಸ್ಕೃತೋತ್ಸವದಲ್ಲಿ ವಿವಿಧ ಸಂಸ್ಕೃತ ಶಾಲೆಗಳ ವಿದ್ಯಾರ್ಥಿಗಳ ಸಂಗೀತ, ನೃತ್ಯ ಕಾರ್ಯಕ್ರಮಗಳು ನೋಡುಗರ ಮನ ಸೆಳೆದವು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ಹೊಸೂರು, ಗುಲ್ಬರ್ಗ ವಲಯ ಸಂಯೋಜಕ ಮಲ್ಲನಗೌಡ ಎಸ್. ಮಾಲೀಪಾಟೀಲ್, ಶ್ರೀ ಸಿದ್ಧೇಶ್ವರ ಸಂಸ್ಥೆಯ ಮುಖ್ಯಸ್ಥ ಎಸ್.ಎಂ. ದಕ್ಷಿಣಾಮೂರ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಶಾಖಾಧಿಕಾರಿ ಎಂ.ಶಿವಮೂರ್ತಿ ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.
ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲಂಕಾರ ಶಾಸ್ತ್ರ ಉಪನ್ಯಾಸಕಿ ಚನ್ನಮ್ಮ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರ್ವಹಿಸಿದರು.