ಆಸರೆ: ಒಂದು ಸಾರಿ ನೋಡಿ ಸಚಿವರೇ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 3
ಸರ್ಕಾರ್ದೋರು ನಮಗಾ ಆಸರೆ ಮನಿ ಆಸೆ ತೋರ್ಸಿ ನಡೋ ಬೀದ್ಯಾಗ ಬಿಟ್ಟಾರ, ಇತ್ತ ಡಿಸಿ ಸಾಹೇಬ್ರು ಬಂದಿಲ್ಲಾ, ಅತ್ತ ಜಿಲ್ಲಾ ಉಸ್ತುವಾರಿ ಸಚಿವ್ರು ಒಂದ್ ಸಲಾನೂ ಬಂದು ನಮ್ ಪರಿಸ್ಥಿತಿ ಹೆಂಗ ಐತಿ ಅಂತಾ ನೋಡಿಲ್ಲ. ಹಿಂಗಾದ್ರ ನಮ್ ಗತಿ ಹೆಂಗ?
ಹೀಗೆಂದು ತಮ್ಮ ಸಂಕಷ್ಟಕ್ಕೆ ಪರಿಹಾರ ದೊರಕದೇ ತೊಂದರೆಯಲ್ಲಿರುವ ತಾಲೂಕಿನ ಮಾಗಳ ಗ್ರಾಮದ ಬಸ್ತಿಓಣಿ, ಬ್ಯಾಡರಗೇರಿ ಸಂತ್ರಸ್ತರು ಪ್ರಶ್ನೆಯನ್ನು ಕೇಳುತ್ತಾರೆ. 2009ರಲ್ಲಿ ಧುತ್ತನೆ ಸುರಿದ ಬಾನಸುನಾಮಿಯ ಮುಂಗಾರು ಮಳೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದ ಸಂತ್ರಸ್ತರಿಗೆ ಮೂರು ವರ್ಷಗಳು ಕಳೆದರೂ ಈವರೆಗೂ ಆಸರೆ ಮನೆಗಳನ್ನು ಸರ್ಕಾರ ನೀಡಿಲ್ಲ.
100 ಮನೆ ಮಾತ್ರ ನಿರ್ಮಾಣ: ಆರಂಭದಲ್ಲಿ 556 ಆಸರೆ ಮನೆಗಳ ನಿರ್ಮಾಣದ ಹೊಣೆಯನ್ನು ಜಿಲ್ಲೆಯ ಗಣಿ ಮಾಲೀಕರಿಗೆ ವಹಿಸಲಾಗಿತ್ತು. ಆಗ 556 ಆಸರೆ ಮನೆಗಳಲ್ಲಿ ಕೇವಲ 100 ಮನೆಗಳು ಮಾತ್ರ ಸಂಡೂರಿನ ಅಂಬಿಕಾ ಮೈನ್ಸ್ ಕಂಪನಿ ನಿರ್ಮಾಣ ಮಾಡಿತ್ತು. ತರುವಾಯ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಉಳಿದ ಮನೆಗಳ ನಿರ್ಮಾಣದ ಹೊಣೆ ನೀಡಿ ಕೈ ತೊಳೆದುಕೊಂಡ ಸರ್ಕಾರ ಈವರೆಗೂ ಸಂತ್ರಸ್ತರ ಗೋಳು ಕೇಳದೆ ಮನೆಗಳ ನಿರ್ಮಾಣ ಮಾಡಲು ಮನಸ್ಸು ಮಾಡಿಲ್ಲವೆಂದು ಸಂತ್ರಸ್ತರು ದೂರುತ್ತಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಗುತ್ತಿಗೆ ಪಡೆದಿರುವ ಯುಇಐಡಿ ಎಂಬ ಮಲೇಶಿಯಾ ಕಂಪನಿಯು 153 ಮನೆಗಳನ್ನು ನಿರ್ಮಾಣ ಮಾಡಿದೆ. ಆದರೆ ಸರ್ಕಾರ ಆರಂಭದಿಂದಲೂ ನಯಾಪೈಸೆ ಹಣ ನೀಡಿಲ್ಲವೆಂದು ಕಂಪನಿಯ ಮಾಲೀಕರು ಕಾಮಗಾರಿಯನ್ನು ಕಳೆದ 4 ತಿಂಗಳಿನಿಂದ ಸ್ಥಗಿತಗೊಳಿಸಿದ್ದಾರೆ.
ರು. 2.45 ಕೋಟಿ ನೀಡಿಲ್ಲ: ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಹುಡುಕಿದರೆ ಮಂಡಳಿಯೇ ಗುತ್ತಿಗೆದಾರರಿಗೆ ರು. 2.45 ಕೋಟಿ ನೀಡಿಲ್ಲ. ಕಾಮಗಾರಿ ಆರಂಭದಿಂದಲೂ ಹಣ ಬಿಡುಗಡೆ ಮಾಡಿಲ್ಲ. ಯಾವ ರೀತಿ ಕೆಲಸ ಮಾಡಬೇಕು? ಸರ್ಕಾರ ಹಣ ನೀಡಿದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಾರೆ ಕಂಪನಿ ಸೂಪರ್‌ವೈಜರ್ ಪರಮಾನ್.
ಕಾರ್ಮಿಕರಿಗಿಲ್ಲ ಕೂಲಿ: ಆಸರೆ ಮನೆ ನಿರ್ಮಾಣದಲ್ಲಿ ಕೆಲಸ ಮಾಡಿದ ಯಾವ ಕಾರ್ಮಿಕರಿಗೂ ಕೂಲಿ ನೀಡಿಲ್ಲ. ಬರೋಬ್ಬರಿ ರು. 7 ಲಕ್ಷಕ್ಕೂ ಹೆಚ್ಚು ಕೂಲಿ ನೀಡಬೇಕಿದೆ. ಇದರಿಂದ ಬೇಸತ್ತ ಕಾರ್ಮಿಕರು ಗುತ್ತಿಗೆದಾರರ ಯಂತ್ರ ಮತ್ತು 2 ನೀರಿನ ಟ್ಯಾಂಕರ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ನೀಡಿದ್ದ ಮಾಲೀಕರೊಬ್ಬರು ಹಣ ನೀಡಿಲ್ಲವೆಂದು ಸಿಮೆಂಟ್ ಮಿಶ್ರಣ ಮಾಡುವ ಯಂತ್ರವನ್ನೇ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಗುತ್ತಿಗೆದಾರರ ಯಾವ ಸರಕು ಆಸರೆ ಮನೆ ನಿರ್ಮಾಣದ ಸೈಟ್‌ನಲ್ಲಿ ಇಲ್ಲ. ಕಾರ್ಮಿಕರು ಕೂಲಿಗಾಗಿ ಗುತ್ತಿಗೆದಾರರಿಗೆ ದೂರವಾಣಿ ಕರೆ ಮಾಡಿದರೆ ಸ್ಪಂದನೆ ನೀಡುತ್ತಿಲ್ಲ. ಆದರಿಂದ ಅವರ ಯಂತ್ರ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೇವೆ ಎನ್ನುತ್ತಾರೆ ಕಾರ್ಮಿಕರು.
ಮೂರು ವರ್ಷಗಳಿಂದ ಸಂತ್ರಸ್ತರ ನೋವನ್ನು ಯಾವೊಬ್ಬ ಅಧಿಕಾರಿಯೂ ಆಲಿಸಿಲ್ಲ. ಗ್ರಾಮಕ್ಕೆ ಭೇಟಿ ನೀಡಿಲ್ಲ. ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಸಮಸ್ಯೆ ಕುರಿತು ಮನವಿ ಮಾಡಿದ್ದರೂ ಸ್ಪಂದಿಸದೇ ಭೇಟಿ ನೀಡಿಲ್ಲ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಎಚ್. ಬಸವರಾಜ.
ಪರಿಶೀಲಿಸಿ: ಈಗಿರುವ ಮನೆಗಳು ಪೂರ್ಣ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಾಗಿಲ್ಲ. ಕಳಪೆಯಾಗಿದ್ದರೂ ಯಾರು ಕ್ರಮ ಕೈಗೊಂಡಿಲ್ಲ. ಇಂತಹ ಮನೆಗಳಲ್ಲಿ ವಾಸಕ್ಕೆ ಗ್ರಾಮಸ್ಥರು ಒಪ್ಪುತ್ತಿಲ್ಲ. ಬಸ್ತಿಓಣಿ, ಬ್ಯಾಡರಗೇರಿಯಲ್ಲಿ ಚರಂಡಿ, ಸಿಸಿ ರಸ್ತೆ ಮಾಡದಂತೆ ಸರ್ಕಾರ ಆದೇಶ ನೀಡಿದೆ. ಆದರಿಂದ ಇದ್ದ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮಿಂದ ಮತ ಪಡೆದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪಿ.ಟಿ. ಪರಮೇಶ್ವರ ನಾಯ್ಕ ಸಚಿವರಾಗಿ 4 ತಿಂಗಳಾದರೂ ಸಂತ್ರಸ್ತರ ನೋವನ್ನು ಆಲಿಸಿಲ್ಲ. ಒಮ್ಮೆಯೂ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲವೆಂದು ಸಂತ್ರಸ್ತರು ದೂರುತ್ತಾರೆ. ಮುಂಬರುವ ದಿನಗಳಲ್ಲಾದರೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾಯ್ದು ನೋಡಬೇಕು.
ಮೂರು ವರ್ಷಗಳಿಂದ ಸಂತ್ರಸ್ತರ ನೋವನ್ನು ಯಾವೊಬ್ಬ ಅಧಿಕಾರಿಯೂ ಆಲಿಸಿಲ್ಲ. ಗ್ರಾಮಕ್ಕೆ ಭೇಟಿ ನೀಡಿಲ್ಲ. ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಸಮಸ್ಯೆ ಕುರಿತು ಮನವಿ ಮಾಡಿದ್ದರೂ ಸ್ಪಂದಿಸಿ ಭೇಟಿ ನೀಡಿಲ್ಲ.
- ಎಚ್. ಬಸವರಾಜ,
ಮಾಗಳ ಗ್ರಾಪಂ ಅಧ್ಯಕ್ಷ
-ಚಂದ್ರು ಕೊಂಚಿಗೇರಿ