ಖಾಸಗಿ ವೈದ್ಯರ ಮೇಲೆ ಹಲ್ಲೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 3
ಖಾಸಗಿ ವೈದ್ಯರ ಮೇಲೆ ಪದೇ ಪದೇ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಮತ್ತು ವೈದ್ಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಮಂಗಳವಾರ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಹಾಗೂ ನಗರದ ಖಾಸಗಿ ವೈದ್ಯರು ಹೊರ ರೋಗಿಗಳ ಸೇವೆಯನ್ನು ಒಂದು ದಿನದ ಸೇವೆ ಸ್ಥಗಿತಗೊಳಿಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.
ನಗರದ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿರುವುದರಿಂದ ಮತ್ತು ಆಸ್ಪತ್ರೆಯ ಆಸ್ತಿಯನ್ನು ಧ್ವಂಸಗಳೊಸುತ್ತಿರುವುದರಿಂದ ವೈದ್ಯರಿಗೆ ಸಾಕಷ್ಟು ಮಾನಸಿಕ ಕಿರುಕುಳ ಉಂಟಾಗುತ್ತಿದೆ. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಯುವಂತೆ ಮತ್ತು ಹಲ್ಲೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯರು ಸಹ ಸಾರ್ವಜನಿಕ ಸೇವೆ ಮಾಡುತ್ತಿದ್ದು, ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರೂ ಸಹ ಕೆಲವರು ವಿನಾಕಾರಣ ವೈದ್ಯರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲಿ ಎಂದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ. ಗುರುರಾಜ್ ಆಚಾರ್ಯ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ದೇಶಪಾಂಡೆ, ನಗರದ ವೈದ್ಯರಾದ ಡಾ. ಜಯರಾಂ, ಡಾ. ಮೃತ್ಯುಂಜಯ ವಸ್ತ್ರದ, ಡಾ. ರಾಜೀವ್, ಡಾ. ಇಕ್ಬಾಲ್ ಸೇರಿದಂತೆ ನಗರದ ಅನೇಕ ವೈದ್ಯರು ತಹಸೀಲ್ದಾರ್ ಕೋನರಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಘಟನೆ ವಿವರ: ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಹೆಣ್ಣು ಮಗುವೊಂದು ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತಪಟ್ಟಿತ್ತು. ಮಗುವಿನ ಪಾಲಕರು ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆಕ್ರೋಶಗೊಂಡು ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿ, ಆಸ್ಪತ್ರೆಯಲ್ಲಿ ದಾಂದಲೆ ನಡೆಸಿದ್ದರು. ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಸಿಗೊಳಿಸಿದ್ದರು.
ಸೋಮವಾರ ನಡೆದ ಘಟನೆಯನ್ನು ಖಂಡಿಸಿ ನಗರದ ಖಾಸಗಿ ವೈದ್ಯರು ಮಂಗಳವಾರ ಆಸ್ಪತ್ರೆಗಳನ್ನು ದಿಢೀರ್ ಬಂದ್ ಮಾಡಿ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು ಹೊರ ರೋಗಿಗಳ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಗ್ರಾಮೀಣ ಹಾಗೂ ನಗರದ ಹೊರ ರೋಗಿಗಳು ವೈದ್ಯರಿಗಾಗಿ ಪರದಾಡುವಂತಾಗಿತ್ತು.