ಎಸ್‌ಡಿಎಂಸಿ ರಾಜಕೀಯ: ತಡೆಯಾಜ್ಞೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 4
ಹೂವಿನಹಡಗಲಿ ಕ್ಷೇತ್ರದಲ್ಲಿ ಬದಲಾವಣೆ ರಾಜಕೀಯ ಹಿನ್ನೆಲೆಯಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಅವಧಿಗೂ ಮುನ್ನ ಹೊಸ ಎಸ್‌ಡಿಎಂಸಿ ರಚನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ.
ಕಳೆದೊಂದು ತಿಂಗಳಿನಿಂದಲೂ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಎಸ್‌ಡಿಎಂಸಿ ರಾಜಕೀಯ ಜೋರಾಗಿಯೇ ನಡೆಯುತ್ತಿದೆ. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಸಚಿವರ ಹಸ್ತಕ್ಷೇಪದಿಂದ ಅನೇಕ ಅವಾಂತರಗಳು ಎದುರಾಗಿದ್ದು, ಸಚಿವರ ಕ್ರಮವನ್ನು ಖಂಡಿಸಿ ಸಾರ್ವಜನಿಕರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಎಸ್‌ಡಿಎಂಸಿ ರಚನೆಯ ಹಿಂದೆ ರಾಜಕೀಯ ಕರಿನೆರಳು ಬಿದ್ದ ಪರಿಣಾಮ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ. ಇದರಿಂದ ಶಾಲಾ ಮುಖ್ಯಶಿಕ್ಷಕರಿಗೆ ಸಚಿವರ ಅನುಮೋದನೆಯನ್ನು ಅರಗಿಸಿಕೊಳ್ಳಲಾಗದೇ ಒತ್ತಡದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸಚಿವರ ಅನುಮೋದನೆಯಂತೆ ಹೊಸ ಎಸ್‌ಡಿಎಂಸಿ ರಚನೆ ಕಾರ್ಯ ಪೂರ್ಣಗೊಂಡಿದೆ. ಸಮಿತಿ ರಚನೆ ಪ್ರಕ್ರಿಯೆಯಲ್ಲಿ ಯಾವ ರಾಜಕೀಯ ನಾಯಕರು, ಸಚಿವರು, ಶಾಸಕರು ಹಸ್ತಕ್ಷೇಪ ಮಾಡುವಂತಿಲ್ಲ. ಇದೊಂದು ಸ್ವತಂತ್ರ ಸಮಿತಿ, ಇದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ. ತಂದೆ ತಾಯಂದಿರ ಪರಿಷತ್ತೇ ಅಂತಿಮ ನಿರ್ಧಾರ ತೆಗೆದುಕೊಂಡು ಅದೇ ಸಮಿತಿ ಸದಸ್ಯರೇ 13 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಅವರೊಳಗೊಬ್ಬರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿದೆ.
ಆದರೆ ಸಚಿವರು ಹೂವಿನಹಡಗಲಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆಂಬ ಕಾರಣಕ್ಕಾಗಿ ಹಳೆ ಸಮಿತಿಗಳ ಅಧಿಕಾರಾವಧಿಯನ್ನು ಮೊಟಕುಗೊಳಿಸಿ ಹೊಸ ಸಮಿತಿ ರಚನೆ ನಿರ್ಧಾರ ಕೈಗೊಳ್ಳುವುದಾದರೆ, 2006ರಲ್ಲಿ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿ ಸಮಿತಿ ರಚನೆ, ಅಧಿಕಾರ ಅವಧಿ ಸೇರಿದಂತೆ ಇನ್ನಿತರ ನಿಯಮಗಳನ್ನು ಯಾಕೆ ಹೊರಡಿಸಬೇಕಿತ್ತು ಎಂಬುದು ಸಾರ್ವಜನಿಕರು ಪ್ರಶ್ನೆ.
ರಾಜಕೀಯ ಬದಲಾವಣೆ ಗಾಳಿ ಬೀಸಿದಾಗ ಸಚಿವರು, ಶಾಸಕರು ಹೊಸ ಸಮಿತಿಗಳನ್ನು ರಚನೆ ಮಾಡಬಹುದೆಂದು ಕಾನೂನುಗಳಲ್ಲಿ ಅವಕಾಶವಿಲ್ಲ. ಇಂತಹ ಕಾನೂನು ಬಾಹಿರ ಎಸ್‌ಡಿಎಂಸಿ ರಚನೆಯನ್ನು ಖಂಡಿಸಿ ಸಾರ್ವಜನಿಕರು ಸಚಿವರಿಗೆ ಸೆಡ್ಡು ಹೊಡೆದಿದ್ದಾರೆ. ತಾಲೂಕಿನ ಕೋಮಾರನಹಳ್ಳಿ ತಾಂಡಾದ ನಾಗರಾಜ ನಾಯ್ಕ, ಪಾಂಡು ನಾಯ್ಕ ಮತ್ತು ಹೊಳಗುಂದಿ ಗ್ರಾಮದ ಡಿ. ವೀರೇಶ, ಪ್ರಕಾಶ ಅವರು ಧಾರವಾಡ ಹೈಕೋರ್ಟ್ ಪೀಠದಲ್ಲಿ ನೂತನ ಎಸ್‌ಡಿಎಂಸಿ ಸಮಿತಿ ರಚನೆಗೆ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ.
ಶಾಲೆಗಳಲ್ಲಿ ಪಾಲಕರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು, ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯದಿಂದ ಕಾರ್ಯಕರ್ತರನ್ನು ನೇಮಿಸಿ ಶಾಲಾ ಶೈಕ್ಷಣಿಕ ವಾತಾವರಣ ಹಾಳು ಮಾಡಬಾರದೆಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಕೋರ್ಟ್‌ನ ಮಧ್ಯಂತರ ತಡೆಯಾಜ್ಞೆ ಆದೇಶ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ. ಪಟ್ಟಣದ 4 ಸರ್ಕಾರಿ ಶಾಲೆಗಳಿಗೆ ಪಾಲಕರಲ್ಲದ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಅನುಮೋದನೆ ನೀಡಿದ್ದಾರೆ. ಈ ವರೆಗೂ ಪಟ್ಟಣದಲ್ಲಿ ಯಾರೂ ಇದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಿಲ್ಲ. ಆದರೆ ಹಳ್ಳಿಗಳಲ್ಲಿ ನ್ಯಾಯಕ್ಕಾಗಿ ಕೋರ್ಟ್ ಮೇಟ್ಟಿಲೇರಿದ್ದೇ ಸಚಿವರಿಗೆ ಹಿನ್ನಡೆಯಾದಂತಿದೆ.
ತಾಲೂಕಿನ ಎಲ್ಲ ಕಡೆಗಳಲ್ಲಿ ಕೋರ್ಟ್ ಮೊರೆ ಹೊಗುವ ಮೊದಲೇ ಸಚಿವರು ಆಗಿರುವ ಪ್ರಮಾದವನ್ನು ಸರಿಪಡಿಸುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಿದೆ.
ಹೊಸ ಎಸ್‌ಡಿಎಂಸಿ ರಚನೆ
ಹೂವಿನಹಡಗಲಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸಚಿವರ ಅನುಮೋದನೆಯಂತೆ ಹೊಸ ಎಸ್‌ಡಿಎಂಸಿ ರಚನೆ ಕಾರ್ಯ ಪೂರ್ಣಗೊಂಡಿದೆ. ಸಮಿತಿ ರಚನೆ ಪ್ರಕ್ರಿಯೆಯಲ್ಲಿ ಯಾವ ರಾಜಕೀಯ ನಾಯಕರು, ಸಚಿವರು, ಶಾಸಕರು ಹಸ್ತಕ್ಷೇಪ ಮಾಡುವಂತಿಲ್ಲ. ಇದೊಂದು ಸ್ವತಂತ್ರ ಸಮಿತಿ, ತಂದೆ ತಾಯಂದಿರ ಪರಿಷತ್ತೇ ಅಂತಿಮ ನಿರ್ಧಾರ ತೆಗೆದುಕೊಂಡು ಅದೇ ಸಮಿತಿ ಸದಸ್ಯರೇ 13 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಅವರೊಳಗೊಬ್ಬರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಸಚಿವರು ಹೂವಿನಹಡಗಲಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆಂಬ ಕಾರಣಕ್ಕಾಗಿ ಹಳೆ ಸಮಿತಿಗಳ ಅಧಿಕಾರಾವಧಿಯನ್ನು ಮೊಟಕುಗೊಳಿಸಿ ಹೊಸ ಸಮಿತಿ ರಚನೆ ನಿರ್ಧಾರ ಕೈಗೊಂಡಿದ್ದಾರೆ.
-ಚಂದ್ರು ಕೊಂಚಿಗೇರಿ