ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೆಎಸ್‌ಎಸ್‌ನಿಂದ ಶೈಕ್ಷಣಿಕ ವಾತಾವರಣ ಸೃಷ್ಟಿ: ರವೀಂದ್ರ

Vishwanath S
Updated On : 5 Sept 2013, 10:59 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 4
ವಿದ್ಯಾರ್ಥಿಗಳಿಗೆ ಶಿಸ್ತಿನ ಅರಿವು ಮೂಡಿಸಿ ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ಸೃಷ್ಟಿಸಿರುವ ಜೆಎಸ್‌ಎಸ್ ವಿದ್ಯಾಸಂಸ್ಥೆಯು ದೇಶದಲ್ಲೆ ಮಾದರಿ ಸಂಸ್ಥೆಯಾಗಿದೆ ಎಂದು ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯದಲ್ಲಿ ಆಯೋಜಿಸಿದ್ದ ಲಿಂ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 98ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ ದೇಶದಲ್ಲಿಯೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಹೂವಿನಹಡಗಲಿಯಂತಹ ಹಿಂದುಳಿದ ಪ್ರದೇಶದಲ್ಲಿ ಉನ್ನತ ಸಂಸ್ಥೆ ನೆಲೆಸಿರುವುದು ನಮ್ಮೆಲ್ಲರಿಗೆ ಸಂತೋಷದ ವಿಚಾರ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜೆಎಸ್‌ಎಸ್ ಸಂಸ್ಥೆಗಳ ವಿಶ್ರಾಂತ ಕುಲಪತಿ ಮಲೆಯೂರು ಗುರುಸ್ವಾಮಿ ಉಪನ್ಯಾಸ ನೀಡಿ, ಸಾವಿರ ವರ್ಷಗಳ ಇತಿಹಾಸವಿರುವ ಸುತ್ತೂರು ಮಠವನ್ನು ಶೈಕ್ಷಣಿಕವಾಗಿ ಎತ್ತರಕ್ಕೆ ಬೆಳೆಸಿದ ಕೀರ್ತಿ ರಾಜೇಂದ್ರ ಸ್ವಾಮಿಗಳಿಗೆ ಸಲ್ಲುತ್ತದೆ. ನಾಡಿನ ಜನತೆಗೆ ಜ್ಞಾನ ದಾಸೋಹದ ಅಮೃತ ಉಣಬಡಿಸಿದವರು ಎಂದು ಸ್ಮರಿಸಿಕೊಂಡರು.
ಸಾನ್ನಿಧ್ಯ ವಹಿಸಿದ್ದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಜೆಎಸ್‌ಎಸ್ ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯ ಎಫ್.ಸಿ. ಕಾಲವಾಡಮಠ ಮಾತನಾಡಿದರು. ಪ್ರಾಚಾರ್ಯ ಎಚ್.ಪಿ. ರಮೇಶ್, ಎಂ.ಪಿ.ಎಂ. ಮಂಜುನಾಥ, ಎಚ್.ಎಂ. ಉಮೇಶ್ ಇತರರಿದ್ದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವನಜಾಕ್ಷಿ, ಮೈಲಾರಪ್ಪ ಬಾವಿಕಟ್ಟಿ, ಬಿ.ಎಸ್. ವೇದಮೂರ್ತಿ, ಧನುಷ್, ಜಿ. ಸುಪ್ರಿಯಾ, ಕೆ.ಎಚ್. ಮೇಘರಾಣಿ ಇವರಿಗೆ ದತ್ತಿ ಬಹುಮಾನ ನೀಡಲಾಯಿತು.
ಎಚ್. ಮುಸ್ಕಾನ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸಂಪ್ರೀತ್ ವಂದಿಸಿದರು. ಶ್ರೀಗಳ ಜಯಂತಿ ನಿಮಿತ್ತ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement