ತಾಲೂಕು ರಚನೆಗೆ ಹೋರಾಟ: ಭೀಮಾನಾಯ್ಕ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 4
ನೂತನ ಕೊಟ್ಟೂರು ತಾಲೂಕು ರಚನೆಯ ಪ್ರಕಟಣೆಯನ್ನು ಮುಂಬರುವ ವಿಧಾನಸಭಾ ಅಧಿವೇಶನದೊಳಗೆ ಸರ್ಕಾರ ಘೋಷಿಸಿ ಅಧಿಕೃತವಾಗಿ ಪ್ರಕಟಿಸಬೇಕು. ಇಲ್ಲವಾದರೆ ಅಧಿವೇಶನ ಹೊರ ಮತ್ತು ಒಳಗೆ ವ್ಯಾಪಕ ಪ್ರತಿಭಟನೆಗೆ ಮುಂದಾಗುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್ನೆನ್ನೆಸ್ಸ್ ಘಟಕಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಐತಿಹಾಸಿಕ ಕೊಟ್ಟೂರು ತಾಲೂಕು ಕೇಂದ್ರವಾಗಲು ಎಲ್ಲ ಬಗೆಯ ಅರ್ಹತೆ ಪಡೆದಿದೆ. ತಾಲೂಕು ಕೇಂದ್ರದ ಮನವಿಗೆ ಈ ಹಿಂದೆ ಸರ್ಕಾರ ಮಾನ್ಯತೆ ನೀಡಿ ಪರಿಗಣಿಸಿದೆ. ರಾಜಕೀಯ ಕಾರಣಗಳಿಗೋಸ್ಕರ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಸರ್ಕಾರ ಪರಿಗಣಿಸದೇ ಇರುವುದನ್ನು ಸಹಿಸಿಕೊಂಡು ಇನ್ನು ಮುಂದೆ ಸುಮ್ಮನಿರಲಾರೆ. ಪಟ್ಟಣದ ಪ್ರಮುಖರು, ಸಂಘ ಸಂಸ್ಥೆಗಳೊಂದಿಗೆ ಕೊಟ್ಟೂರು ತಾಲೂಕು ರಚನೆ ಹೋರಾಟಕ್ಕೆ ತೊಡಗಿಸಿಕೊಳ್ಳುವೆ. ಇದಕ್ಕೆ ಆಸ್ಪದ ನೀಡದೆ ಸರ್ಕಾರ ದೃಢನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಒಳಚರಂಡಿ ವ್ಯವಸ್ಥೆ: ಪಟ್ಟಣದ ಮಹತ್ವ ಅರಿತು ಒಳಚರಂಡಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿರುವೆ. ಈಗಾಗಲೇ ಪೂರ್ವಭಾವಿ ಸರ್ವೇ ಕಾರ್ಯ ನಡೆದಿದೆ. ಪಟ್ಟಣವನ್ನು ಮುಂಬರುವ ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದೇ ತಮ್ಮ ಆದ್ಯತೆ. ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ 8 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಡುವೆ ಎಂದು ಭರವಸೆ ನೀಡಿದರು.
ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಸರ್ಕಾರಿ ಪದವಿ ಮಹಾವಿದ್ಯಾಲಯ ಶೀಘ್ರ ಆರಂಭಗೊಳ್ಳುವಂತಾಗಬೇಕು. ಸ್ಟೇಡಿಯಂ ನಿರ್ಮಾಣವನ್ನು ಶಾಸಕರು ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿಡಿಎಂಸಿ ಕಾರ್ಯಾಧ್ಯಕ್ಷ ಕೆ.ಎಂ. ಕೊಟ್ರೇಶ್, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಬೂದಿ ಶಿವಕುಮಾರ್, ಪ್ರಾಚಾರ್ಯ ಟಿ. ಶಿವಮೂರ್ತಿ, ಉಪಪ್ರಾಚಾರ್ಯ ಸಿ. ಬಸವರಾಜ್, ಸದಸ್ಯರಾದ ಸೆರೆಗಾರ ವೆಂಕಟೇಶ್, ನೀಲಮ್ಮ ಜವಳಿ, ಸುಮಾ ಮಂಜುನಾಥಗೌಡ, ಬಿ. ಕೊಟ್ರೇಶ್, ಅನಿಲ್ ಹೊಸಮನಿ, ಡಿ. ಮಹೇಂದ್ರ, ಐ. ದಾರುಕೇಶ, ಎನ್. ಬಸವರಾಜ, ಜವಳಿ ರಾಜಶೇಖರ, ಎಂ. ಪ್ರಕಾಶ, ಫಕ್ಕೀರಪ್ಪ, ಕರಿಬಸವನಗೌಡ, ಬಿ. ಶಂಕರ್, ಶಫಿಸಾಬ್, ಮರುಳಸಿದ್ದಪ್ಪ, ಪಿ. ಸತೀಶ, ಆರ್.ಎಂ. ಗುರುಬಸವರಾಜ ಇದ್ದರು. ಬಿ. ಗೋವಿಂದಪ್ಪ ಸ್ವಾಗತಿಸಿದರು. ಸಿ. ಬಸವರಾಜ ಬಿನ್ನವತ್ತಳೆ ಸಲ್ಲಿಸಿದರು. ಉಪನ್ಯಾಸಕ ಜಿ. ಸೋಮಶೇಖರಪ್ಪ ನಿರೂಪಿಸಿದರು.
ಪಟ್ಟಣದ ಮಹತ್ವ ಅರಿತು ಒಳಚರಂಡಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿರುವೆ. ಈಗಾಗಲೇ ಪೂರ್ವಭಾವಿ ಸರ್ವೇ ಕಾರ್ಯ ನಡೆದಿದೆ. ಪಟ್ಟಣವನ್ನು ಮುಂಬರುವ ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದೇ ತಮ್ಮ ಆದ್ಯತೆ.
- ಭೀಮಾನಾಯ್ಕ, ಶಾಸಕ