ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಡಿತರ ಅಕ್ಕಿ ಮೇಲೆ ಸಿಸಿ ಕ್ಯಾಮೆರಾ ಕಣ್ಣು

Vishwanath S
Updated On : 6 Sept 2013, 11:12 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 5
ಅನ್ನಭಾಗ್ಯ ಯೋಜನೆ ಬಂದ ಮೇಲೆ ಪಡಿತರ ಅಕ್ಕಿ ಕಾಳಸಂತೆ ಮಾರಾಟ ಹೆಚ್ಚಾಗುತ್ತಿದೆ. ಇಂತಹ ಕಾಳಸಂತೆಗೆ ಕಡಿವಾಣ ಹಾಕಲು ಅನ್ನಭಾಗ್ಯಕ್ಕೆ ರಕ್ಷಣೆ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಬಳ್ಳಾರಿಯಲ್ಲಿ ಪಡಿತರ ಧಾನ್ಯಗಳ ದಾಸ್ತಾನು ಮಾಡುವ ಕೆಎಫ್‌ಸಿಎಸ್‌ಸಿ ಗೋದಾಮುಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಜಿಲ್ಲಾಡಳಿತ ಅಳವಡಿಸಿದೆ.
ಪಡಿತರ ಧಾನ್ಯಗಳನ್ನು ಅದರಲ್ಲೂ ಅನ್ನಭಾಗ್ಯ ಯೋಜನೆಯ ಅಕ್ಕಿಯ ದುರುಪಯೋಗದ ತಡೆಗೆ ಈ ಮೂಲಕ ಜಿಲ್ಲಾಡಳಿತ ಮುಂದಾಗಿದೆ. ರು. 15 ಲಕ್ಷ ವೆಚ್ಚದಲ್ಲಿ ಜಿಲ್ಲೆಯ 11 ಕೆಎಫ್‌ಸಿಎಸ್‌ಸಿಯ ಗೋದಾಮುಗಳಲ್ಲಿ 55 ಕ್ಯಾಮೆರಾಗಳನ್ನು ಜಿಲ್ಲಾಡಳಿತ ಅಳವಡಿಸಲು ಮುಂದಾಗಿದೆ. ರು. 1 ಕೆ.ಜಿ. ಅಕ್ಕಿಯನ್ನು ಕಾಳಸಂತೆ ಮಾರಾಟಗಾರರು ಸುಲಭವಾಗಿ ಪಡೆದು ಅದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಾರೆ ಎಂಬ ಸುಳಿವು ಇತ್ತು. ಅನ್ನಭಾಗ್ಯ ಯೋಜನೆಯನ್ನು ಈರೀತಿ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ಅಪವಾದದ ಮಾತುಗಳು ಕೇಳಿ ಬಂದಿದ್ದವು. ಈ ಅಪವಾದಗಳನ್ನು ದೂರ ಮಾಡಲು, ಪಡಿತರ ಅಕ್ಕಿ ಕಾಳಸಂತೆಗೆ ಹೋಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಗೋದಾಮುಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮುಂದಡಿ ಇಟ್ಟಿದ್ದಾರೆ.
ವ್ಯವಸ್ಥೆ ಮೇಲೆ ಕಣ್ಗಾವಲು: ಸಾಮಾನ್ಯವಾಗಿ ಆಯಾ ಜಿಲ್ಲೆಗಳಲ್ಲಿ ಪಡಿತರ ಧಾನ್ಯಗಳನ್ನು ವಿತರಿಸಲು ಜಿಲ್ಲೆ ವ್ಯಾಪ್ತಿಯ ಕೆಎಫ್‌ಸಿಎಸ್‌ಸಿ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ನ್ಯಾಯಾಬೆಲೆ ಅಂಗಡಿಗೆ ಪಡಿತರ ಧಾನ್ಯಗಳು ಹೋಗುತ್ತಿದ್ದವು. ಇಲ್ಲಿ ಸ್ವಲ್ಪ ಏಮಾರಿದರೆ ಸಾಕು ಪಡಿತರ ವಿತರಣಾ ಕೇಂದ್ರಕ್ಕೆ ಹೋಗುವ ಅಕ್ಕಿ ಕಾಳಸಂತೆಯ ಪಾಲಾಗುತ್ತಿದ್ದವು. ಈ ರೀತಿ ಪಡಿತರ ಧಾನ್ಯಗಳ ದುರ್ಬಳಕೆ ಹೆಚ್ಚಾಗುತ್ತಿತ್ತು. ಇತ್ತೀಚೆಗೆ ಜಿಲ್ಲೆಯಲ್ಲಿ ಸರ್ಕಾರಿ ಗೋದಾಮಿನಿಂದ ಪಡಿತರ ಅಕ್ಕಿಯನ್ನು ಲಾರಿಗಳಲ್ಲಿ ತುಂಬಿಕೊಂಡು ಸಿಕ್ಕಿ ಬಿದ್ದ ಪ್ರಕರಣ ನಡೆದಿತ್ತು. ಇಂತಹ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸಿಸಿ ಕ್ಯಾಮೆರಾ ಅಳವಡಿಸಲು ಹೊರಟಿದೆ. ಆ ಮೂಲಕ ಪಡಿತರ ಧಾನ್ಯ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಯಲು ಪ್ರಯತ್ನ ಮಾಡುತ್ತಿದೆ.
55 ಕ್ಯಾಮೆರಾಗಳ ಅಳವಡಿಕೆ: ಬಳ್ಳಾರಿ ಮಹಾನಗರದಲ್ಲಿ 3, ಹೂವಿನಹಡಗಲಿ- 1, ಹಗರಿಬೊಮ್ಮನಹಳ್ಳಿ- 1, ಹೊಸಪೇಟೆ- 1, ಕಂಪ್ಲಿ- 1, ಕೊಟ್ಟೂರು- 2, ಸಂಡೂರು- 1, ಸಿರುಗುಪ್ಪ- 1 ಕೆಎಫ್‌ಸಿಎಸ್‌ಸಿ ಗೋದಾಮುಗಳಿವೆ. ಈ ಗೋದಾಮುಗಳ ಒಳಗೆ 41 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರೆ, ಇನ್ನು ಗೋದಾಮು ಹೊರಗೆ ಪಿಟಿಜೆಡ್ 100 ಮೀಟರ್ 14 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು 360 ಡಿಗ್ರಿ ಚಿತ್ರಿಸುವ ಸಾಮರ್ಥ್ಯ ಹೊಂದಿವೆ. ಬಳ್ಳಾರಿ, ಸಿರುಗುಪ್ಪ, ಸಂಡೂರಿನ ಗೋದಾಮುಗಳಲ್ಲಿ ಈಗಾಗಲೇ ಕ್ಯಾಮೆರಾ ಅಳವಡಿಸಿದ್ದು,  ಉಳಿದ ಕಡೆಗಳಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿ ಡಿವಿಆರ್ ಮತ್ತು ಡಿಪಿಆರ್‌ಎಸ್ ವ್ಯವಸ್ಥೆ ಅಳವಡಿಸಲಾಗಿದೆ. ಒಟ್ಟಾರೆ ರು. 15 ಲಕ್ಷ ವೆಚ್ಚದಲ್ಲಿ 55 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಕುಳಿತಲ್ಲೇ ಅಕ್ರಮ ಪತ್ತೆ: ಎಲ್ಲ ಕಡೆಗಳಲ್ಲಿ ಡಿಪಿಆರ್‌ಎಸ್ ಅಳವಡಿಸುವುದರಿಂದ ಕುಳಿತಲ್ಲೇ ಆನ್‌ಲೈನ್‌ನಲ್ಲಿ ಗೋದಾಮುಗಳಲ್ಲಿ ನಡೆಯುವ ಚಟುವಟಿಕೆ ಹಾಗೂ ಯಾವ ನಂಬರಿನ ಲಾರಿಗಳ ಮೂಲಕ ಎಷ್ಟು ಪಡಿತರ ಧಾನ್ಯ ಗೋದಾಮುನಿಂದ ಹೊರ ಹೋಗಿದೆ. ಲಾರಿಗಳಲ್ಲಿ ಎಷ್ಟು ಮೂಟೆ ಲೋಡ್ ಮಾಡಲಾಗಿದೆ ಎಂಬುದು. ಪಡಿತರ ಧಾನ್ಯಗಳಲ್ಲಿ ನಡೆಯುವ ಅಕ್ರಮವನ್ನು ಕುಳಿತಲ್ಲೇ ನಿಯಂತ್ರಿಸಬಹುದು. ಸಿಸಿ ಕ್ಯಾಮೆರಾಗಳ ಸ್ಕ್ರೀನ್‌ಗಳು ಒಂದು ಜಿಲ್ಲಾಧಿಕಾರಿ ಛೇಂಬರ್‌ನಲ್ಲಿ ಮತ್ತು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದುವರೆಗೆ ಕಾಳಸಂತೆಯಲ್ಲಿ ನಡೆಯುತ್ತಿದ್ದ ಪಡಿತರ ಅಕ್ಕಿ ಮಾರಾಟ, ಇಲಾಖೆಯ ಅಧಿಕಾರಿಗಳ ಸಹಕಾರ, ಗೋದಾಮುಗಳಲ್ಲಿ ನಡೆಯುತ್ತಿದ್ದ ಅಕ್ರಮವನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿರುವುದು ಬಡವರ ಭಾಗ್ಯವೇ ಸರಿ.
ಜಿಲ್ಲಾಧಿಕಾರಿಗಳು ಗೋದಾಮುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದಾರೆ. ಇದರಿಂದಾಗಿ ಪಡಿತರ ಧಾನ್ಯಗಳಲ್ಲಿ ನಡೆಯುತ್ತಿರುವ ಅಕ್ರಮ, ಅನಧಿಕೃತ ಮಾರಾಟ ತಡೆಗಟ್ಟಬಹುದು, ನ್ಯಾಯಬೆಲೆ ಅಂಗಡಿಯವರೇ ಪಡಿತರ ಧಾನ್ಯಗಳನ್ನು ತರಲು ಬರಬೇಕು, ಅನಧಿಕೃತ ಯಾವುದೇ ವ್ಯಕ್ತಿ ಬಂದರೂ ಇನ್ನುಮುಂದೆ ಗೊತ್ತಾಗುತ್ತದೆ. ಇನ್ನು ಅಲ್ಲಿ ನಡೆಯುವ ಪ್ರತಿ ವ್ಯವಹಾರಗಳನ್ನು ಕುಳಿತಲ್ಲಿ ನೋಡಬಹುದು.
- ಮಾಂಟೆಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement