ಪರಮೇಶ್ವರ ಸಚಿವಗಿರಿಗೆ ಜಿಲ್ಲೆಯ ಶಿಕ್ಷಕರು ತತ್ತರ
ಬಳ್ಳಾರಿ: ಚುನಾವಣೆ ಮುನ್ನ ಜನತೆಗೆ ಅನುಕೂಲವಾಗುವ ಜನಪರ ಕೆಲಸ ಮಾಡುತ್ತೇನೆ. ಜನತೆಗೆ ಯಾವುದೇ ತೊಂದರೆ ಬರದಂತೆ ಅಧಿಕಾರ ನಡೆಸುತ್ತೇವೆ ಎಂದು ವಾಗ್ದಾನ ಮಾಡುವ ರಾಜಕಾರಣಿಗಳು, ಅಧಿಕಾರ ಬಂದಾಕ್ಷಣ ತಮ್ಮ ವರಸೆ ಬದಲಾಯಿಸಿ, ತಾವಿದ್ದಲ್ಲಿಗೆ ಅಧಿಕಾರ ಶಾಹಿ ಮತ್ತು ಜನರನ್ನು ಕರೆಯಿಸಿಕೊಳ್ಳುವುದು ಅದೆಷ್ಟರ ಮಟ್ಟಿಗೆ ಸರಿ?
ಯಾವ ವಿಷಯದ ಬಗ್ಗೆ ಹೇಳುತ್ತಿದ್ದಾರೆಂಬ ಗೊಂದಲವೇ? ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಈ ಬಾರಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸ್ವಕ್ಷೇತ್ರದಲ್ಲಿ ಅದು ಜಿಲ್ಲಾ ಕೇಂದ್ರದಿಂದ 120ಕ್ಕೂ ಹೆಚ್ಚು ಕಿಮೀ ದೂರದ ಹೂವಿನಹಡಗಲಿಯಲ್ಲಿ ಆಯೋಜಿಸುವ ಮೂಲಕ ಇಡಿ ಜಿಲ್ಲಾಡಳಿತವೆ ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ, ಶಿಕ್ಷಕರು, ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ತೊಂದರೆ ನೀಡಿದ್ದಾರೆ. ಈ ಕ್ರಮ ಸರಿಯೇ ಎಂಬ ಜಿಜ್ಞಾಸೆ ಜಿಲ್ಲೆ ಜನರಲ್ಲಿ ಮೂಡಿದೆ.
ತಾವಿದ್ದಲ್ಲಿಗೆ ಕರೆಸಿಕೊಂಡರು: ಜಿಲ್ಲಾ ಉಸ್ತುವಾರಿ, ಕಾರ್ಮಿಕ ಪಿ.ಟಿ. ಪರಮೇಶ್ವರ ನಾಯ್ಕ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ತಾವು ಪ್ರತಿನಿಧಿಸುವ ಹೂವಿನಹಡಗಲಿಯಲ್ಲಿ ಆಯೋಜಿಸಿ ಕ್ಷೇತ್ರದ ಅಭಿಮಾನ ಮೆರೆದಿದ್ದಾರೆ. ಆದರೆ ಇದರಿಂದ ಇತರರಿಗೆ ಫಜೀತಿ ನೀಡಿದ್ದಾರೆ. ಸಚಿವರ ಮಾತಿನಂತೆ ಜಿಲ್ಲಾಡಳಿತ ಹೂವಿನಹಡಗಲಿಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಇದರಿಂದ ಸಚಿವರಿಗೆ ಮಾತ್ರ ಅನುಕೂಲವಾಗಿದ್ದನ್ನು ಬಿಟ್ಟರೆ, ಬಹುತೇಕರಿಗೆ ಅನಾನೂಕೂಲವೇ ಹೆಚ್ಚಾಯಿತು. ಸಚಿವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರೆಲ್ಲರೂ ಜಿಲ್ಲೆಯ ಮೂಲೆಯಲ್ಲಿರುವ ತಾಲೂಕಿಗೆ ಹೋಗುವ ಪರಿಸ್ಥಿತಿ ಬಂದೊದಗಿತು.
ಸರ್ಕಾರಕ್ಕೆ ಹೊರೆ: ಶಿಕ್ಷಣ ಇಲಾಖೆ ಸೇರಿದಂತೆ ಪೂರಕ ಇಲಾಖೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕು. ಅದಕ್ಕಾಗಿ ಬಳ್ಳಾರಿಯಿಂದ 3ರಿಂದ 4 ಗಂಟೆ ಪ್ರಯಾಣ ಮಾಡಬೇಕು. ಇದರಿಂದ ಅಧಿಕಾರಿಗಳಿಗೆ ಒಂದು ದಿನದ ಕೆಲಸ ತಡವಾಗುತ್ತದೆ. ಅಲ್ಲದೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯಿಂದ 15ರಿಂದ 20 ವಾಹನಗಳು ಅಲ್ಲಿಗೆ ಹೋಗಬೇಕಾಗುತ್ತದೆ. ಇದಕ್ಕೆ ತಗಲುವ ಸಾವಿರಾರು ರುಪಾಯಿ ಡೀಸೆಲ್ ಸೇರಿದಂತೆ ಇತರ ವೆಚ್ಚ, ಭತ್ಯೆಗಳು ಕೂಡ ಜಿಲ್ಲಾಡಳಿತದ ಮೇಲೆ ಬೀಳುತ್ತದೆ. ಇದೊಂದು ಸರ್ಕಾರಿ ಕಾರ್ಯಕ್ರಮ, ಲಕ್ಷಾಂತರ ರುಪಾಯಿ ಹಣವನ್ನು ಸರ್ಕಾರವೆ ಭರಿಸುತ್ತದೆ ಎಂದಾದರೂ ಇದು ದುಂದುವೆಚ್ಚ ಅಲ್ಲದೇ ಮತ್ತೇನು? ಸಚಿವರೊಬ್ಬರೆ ಬಳ್ಳಾರಿಗೆ ಬಂದರೆ ಅದರಿಂದಾಗುವ ಸಮಸ್ಯೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆ.
ಫಜೀತಿಯ ಪ್ರಯಾಣ: ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನೋತ್ಸವ ಸಮಿತಿ ಜಂಟಿಯಾಗಿ ಡಾ. ಎಸ್. ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2013-14ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹೂವಿನಹಡಗಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಿಂದ ಆಯ್ಕೆಯಾದ ಉತ್ತಮ ಶಿಕ್ಷಕರು, ಇನ್ನುಳಿದ ಶಿಕ್ಷಕರು ದೂರದ ಹೂವಿನಹಡಗಲಿ ಹೋಗಬೇಕಾಯಿತು. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದರಿಂದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ 7 ಗಂಟೆ. ಕಾರ್ಯಕ್ರಮದ ನಂತರ ಬೇರೆಡೆಗೆ ತೆರಳಲು ತೀವ್ರ ತೊಂದರೆಯಾಯಿತು. ಜಿಲ್ಲಾ ಕೇಂದ್ರದಲ್ಲಿ ಬಸ್ ಸೌಲಭ್ಯ ಹೆಚ್ಚಾಗಿರುತ್ತದೆ. ತಾಲೂಕು ಕೇಂದ್ರದಿಂದ ಬಸ್ ಸೌಲಭ್ಯ ಕಡಿಮೆ. ಹೂವಿನಹಡಗಲಿಯಿಂದ ಹೊಸಪೇಟೆ, ಬಳ್ಳಾರಿಗೆ ಬರುವರಿಗೆ ರಾತ್ರಿ 8ರ ವರೆಗೆ ಮಾತ್ರ ಬಸ್ ಇದೆ. ಅದನ್ನು ಬಿಟ್ಟರೆ ರಾತ್ರಿ 10 ಗಂಟೆಗೆ ಮಂತ್ರಾಲಯದ ಒಂದೇ ಬಸ್ ಇದೆ. ಅದು ತಪ್ಪಿದರೆ ರಾತ್ರಿ ಪೂರ ಭಜನೆ ಮಾಡುವುದು ಅನಿವಾರ್ಯ.
ಜಿಲ್ಲಾ ಉಸ್ತುವಾರಿ ವಹಿಸಿಕೊಂಡಾಗಿನಿಂದ ಸಚಿವರದ್ದು ಒಂದು ರೀತಿ ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ಎಂಬಂತಾಗಿದೆ. ಈ ಹಿಂದೆ ಎಂ.ಪಿ. ಪ್ರಕಾಶ್ ಅವರು ಸಚಿವರಾದರೂ ಬಳ್ಳಾರಿಯಲ್ಲೇ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಆದರೆ ಅವರ ಹೆಸರಿನಲ್ಲೇ ಅಧಿಕಾರಕ್ಕೆ ಬಂದ ಪರಮೇಶ್ವರ ನಾಯ್ಕ ಮಾತ್ರ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಕರು ಸೇರಿದಂತೆ ಜಿಲ್ಲೆಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ದುಂದುವೆಚ್ಚ ಅಗತ್ಯವೇ?
ಈ ಕಾರ್ಯಕ್ರಮ ನಡೆಸಿದ್ದರಿಂದ ಆ ತಾಲೂಕಿನ ಜನತೆಗೆ ಅನುಕೂಲವಾಗುತ್ತದೆ, ತಾಲೂಕಿಗೆ ಆದ್ಯತೆ ನೀಡಿದಂತಾಗುತ್ತದೆ ಎಂಬುದು ದಿಟ. ಶಿಕ್ಷಕರ ದಿನಾಚರಣೆ ಮಾಡಿದ ಮಾತ್ರಕ್ಕೆ ತಾಲೂಕಿಗೆ ಯಾವ ಪ್ರಯೋಜನವೂ ಇಲ್ಲ ಎಂಬದು ಅಷ್ಟೇ ಸತ್ಯ. ಈ ಕಾರ್ಯಕ್ರಮ ಮಾಡುವುದರಿಂದ ತಾಲೂಕಿಗೆ ಅನುಕೂಲವಾಗುವಂತಿದ್ದರೆ ಮಾಡಿದ್ದು ಉತ್ತಮ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಪ್ರಯಾಣದ ಖರ್ಚು, ದುಂದುವೆಚ್ಚ, ಅಧಿಕಾರಿಗಳಿಗೆ ಹಾಗೂ ಇತರ ತಾಲೂಕುಗಳ ಶಿಕ್ಷಕರಿಗೆ ಸಚಿವರೇ ತೊಂದರೆ ನೀಡಿದಂತಾಗುವುದಿಲ್ಲವೇ?
ಮೊದಲಿನಂತೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಬಳ್ಳಾರಿಯಲ್ಲಿ ಮಾಡಬಹುದಿತ್ತು. ಎಲ್ಲ ತಾಲೂಕುಗಳಿಗೆ ಅನುಕೂಲವಾಗುವ ಹೊಸಪೇಟೆಯಲ್ಲಿ ಆಯೋಜಿಸಬಹುದಿತ್ತು. ದೂರದ ಹೂವಿನಹಡಗಲಿಯಲ್ಲಿ ಮಾಡಿದ್ದರಿಂದ ಅನಾನುಕೂಲವೇ ಹೆಚ್ಚಾಯಿತು. ಇಂಥ ನಿರ್ಧಾರದಿಂದ ದುಂದುವೆಚ್ಚ ಹೆಚ್ಚು. ಅಭಿವೃದ್ಧಿ ವಿಚಾರದಲ್ಲಿ ಸಚಿವರಿಗೆ ಸಹಕಾರ ನೀಡುತ್ತೇವೆ, ಈ ನಿರ್ಧಾರಕ್ಕೆ ತಮ್ಮ ಆಕ್ಷೇಪವಿದೆ.
- ಎಸ್. ಭೀಮಾನಾಯ್ಕ, ಹಗರಿಬೊಮ್ಮನಹಳ್ಳಿ ಶಾಸಕ
-ಶಶಿಧರ್ ಮೇಟಿ