ಶಕ್ತಿವಂತ ಸಾಹಿತಿಗಳ ಹಿಂದೆ ಬೆಂಬಲಿಗರಿಲ್ಲ
ಕ.ಪ್ರ.ವಾರ್ತೆ ಬಳ್ಳಾರಿ ಸೆ. 5
ಇಂದು ರಾಜಕಾರಣಿಗಳಿಗೆ ಹಾಗೂ ಸ್ವಾಮೀಜಿಗಳಿಗೆ ಬೆಂಬಲಿಗರು ಇರುತ್ತಾರೆ. ಆದರೆ, ಒಂದು ಶಕ್ತಿಯಾಗಿ ಎಲ್ಲರ ಜೀವನಕ್ಕೆ ದಾರಿದೀಪಗಳಾಗಿರುವ ಸಾಹಿತಿಗಳ ಹಿಂದೆ ಯಾವುದೇ ವ್ಯಕ್ತಿಗಳಿಲ್ಲ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಖೇದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಜಂಟಿಯಾಗಿ ನಗರದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ಪಿ. ಲಂಕೇಶ್ - ಒಂದು ನೆನಪು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ಇಂದು ಜನರು ಹಿಂಬಾಲಕರಾಗಿ ರಾಜಕಾರಣಿಗಳು, ಸ್ವಾಮೀಜಿಗಳ ಹಿಂದೆ ಹೋಗುತ್ತಾರೆ. ಆದರೆ, ದಾರಿದೀಪಗಳಾಗಿರುವ ಶಕ್ತಿ, ವ್ಯಕ್ತಿಗಳಿಂದೆ ಹೋಗದಿರುವುದು ಆತಂಕದ ಸಂಗತಿ. ಇಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿ ಹಾಗೂ ಶಕ್ತಿಗಳಿಂದ ಹಿಂಬಾಲಕರು ಇಲ್ಲವಾಗಿದ್ದಾರೆ. ಇದು ಇಂದಿನ ಸಮಾಜಕ್ಕೆ ದಾರಿದೀಪಗಳಾಗುವ ಶಕ್ತಿಗಳ ಕೊರತೆ ಇದೆ ಎಂದೆನಿಸುತ್ತದೆ' ಎಂದರು.
ಲಂಕೇಶ್ ಎಂದೂ ರಾಜಿಯಾಗಲಿಲ್ಲ: ಸಾಂಸ್ಕೃತಿಕವಾಗಿ ಅತಿ ಎತ್ತರದ ಸ್ತರದಲ್ಲಿದ್ದ ಲಂಕೇಶ್ ಅವರು ಬದುಕಿನಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಹಳ್ಳಿಯಿಂದ ಬಂದ ಲಂಕೇಶ್ ಮೇಷ್ಟ್ರಿಗೆ ಸಿನಿಮಾ ಮಾಡುವ ಹಂಬಲವಿತ್ತು. ಹೀಗಾಗಿ ಅವರು ಪಲ್ಲವಿ ಸಿನಿಮಾ ನಿರ್ಮಿಸಿದರು. ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡುವ ವಿಚಾರದಲ್ಲಿ ಸಚಿವರಿಗೆ ಲಂಕೇಶ್ ತಲೆಬಾಗಲಿಲ್ಲ. ಅಂದಿನ ಹಣಕಾಸು ಸಚಿವರು ಪಲ್ಲವಿ ಸಿನಿಮಾ ನೋಡಿ, ತೆರಿಗೆ ವಿನಾಯ್ತಿ ನೀಡಲು ಮೂರು ದಿನಗಳ ನಂತರ ಕಾಣುವಂತೆ ಸಚಿವರು ಹೇಳಿದಾಗ, ನೀವು ಶ್ರೀಮಂತಿರಬಹುದು. ಆದರೆ ಸಾಂಸ್ಕೃತಿಕವಾಗಿ ನಾನು ಶ್ರೀಮಂತನಿದ್ದೇನೆ. ನಿಮ್ಮನ್ನು ಕಾಣುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಅರವಿಂದ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.