ಶೈಕ್ಷಣಿಕ ಜಿಲ್ಲೆ ರಚನೆಗೆ ಸಿಎಂ ಸಮ್ಮತಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 5
ಹೂವಿನಹಡಗಲಿ ತಾಲೂಕನ್ನು ಶೈಕ್ಷಣಿಕ ಜಿಲ್ಲೆ ರಚನೆಗೆ ಈಗಾಗಲೇ ಸಿಎಂ ಜತೆಗೆ ಚರ್ಚೆ ಮಾಡಿದ್ದು, ಅವರು ಸಕರಾತ್ಮಕವಾಗಿ ಸಮ್ಮತಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.
ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ 125ನೇ ಜನ್ಮದಿನಾಚರಣೆ ನಿಮಿತ್ತ ಹೂವಿನಹಡಗಲಿಯ ಶಿವಶಾಂತವೀರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಜಿಲ್ಲೆ ರಚನೆಗೆ ಈ ಹಿಂದೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು ಅಂದಿನ ಸರ್ಕಾರದೊಂದಿಗೆ ಸಾಕಷ್ಟು ಬಾರಿ ಚರ್ಚೆ ಮಾಡಿ ಕ್ರಮ ಕೈಗೊಂಡಿದ್ದರು. ಆದರೆ ಈ ವರೆಗೂ ಆ ಕೆಲಸ ಕೈಗೂಡಿಲ್ಲ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹೂವಿನಹಡಗಲಿ ಸೇರಿಸಿಕೊಂಡು ಶೈಕ್ಷಣಿಕ ಜಿಲ್ಲೆ ರಚನೆ ಮಾಡಲು ಶೀಘ್ರದಲ್ಲೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.
ಕಾಯಕ ಮರೆಯಬೇಡಿ: ಶಿಕ್ಷಕ ವೃತ್ತಿ ಗೌರವ ಕಾಪಾಡಿಕೊಂಡು ಪ್ರಾಥಮಿಕ ಹಂತದಲ್ಲೆ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆ ನಿಮ್ಮದಾಗಿದೆ. ಬುದ್ಧಿಗೆ ದ್ರೋಹ, ಆತ್ಮವಂಚನೆ ಇಲ್ಲದೇ ತಮ್ಮ ಮನೆ ಸಮಸ್ಯೆಗಳನ್ನು ವೃತ್ತಿಯಲ್ಲಿ ಸೇರಿಕೊಂಡು ಕಾಯಕವನ್ನು ಮರೆಯದೇ ಉತ್ತಮವಾಗಿ ಕೆಲಸ ಮಾಡಿದಾಗ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಶಿಕ್ಷಕರ ವೃತ್ತಿಪರತೆ ಬಗ್ಗೆ ಹೇಳಿದರು.
ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟು ಇದ್ದು, ಇದನ್ನು ನಿವಾರಣೆ ಮಾಡಲು ಸಿಎಂ ಸಿದ್ದರಾಮಯ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶಿಸಿದ್ದಾರೆ. ಇದರಿಂದ ಶಿಕ್ಷಕರ ಕೊರತೆ ನೀಗಿಸಿದಂತಾಗುತ್ತದೆ ಎಂದರು.
ಜಿಲ್ಲೆಯ ಕೊನೆ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದು ಹೆಚ್ಚು ಸೂಕ್ತ, ಆದಷ್ಟು ಶೀಘ್ರದಲ್ಲೇ ಹೂವಿನಹಡಗಲಿ ತಾಲೂಕನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ರಚನೆ ಮಾಡಿ ಎಂ.ಪಿ. ಪ್ರಕಾಶರ ಕನಸನ್ನು ಸಾಕಾರಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಕೊಪ್ಪಳ ಶಾಖಾ ಗವಿಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷಕರಿಗೆ ತ್ಯಾಗ ಮತ್ತು ಸೇವೆ ಬಹಳ ಮುಖ್ಯ, ವಿದ್ಯಾರ್ಥಿಗಳಿಗೆ ಸರ್ವ ಜ್ಞಾನ ಧಾರೆಯೆರೆದು, ಪ್ರಬುದ್ಧ ವ್ಯಕ್ತಿ ರೂಪಿಸುವ ನಿಮ್ಮ ಕೆಲಸ ನಿಜಕ್ಕೂ ಸಾರ್ಥಕವಾಗಿದ್ದರಿಂದ ಸಮಾಜ ನಿಮ್ಮನ್ನು ಗೌರವದಿಂದ ಕಾಣುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಲಾ 8 ಮಂದಿ ಶಿಕ್ಷಕರನ್ನು ಸಚಿವ ಪರಮೇಶ್ವರ ನಾಯ್ಕ ಹಾಗೂ ಶಾಸಕ ರವೀಂದ್ರ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ವಿಶೇಷ ಉಪನ್ಯಾಸ ನೀಡಿದರು. ಜಿಪಂ ಪ್ರಭಾರಿ ಅಧ್ಯಕ್ಷೆ ಮಮತಾ ಸುರೇಶ್, ತಾಪಂ ಅಧ್ಯಕ್ಷೆ ಪಿ. ದುರುಗಮ್ಮ, ಡಿಡಿಪಿಐ ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಅರವಳ್ಳಿ ವೀರಣ್ಣ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಇಒ ಬಿ. ವಿಜಯಕುಮಾರ, ಅಟವಾಳಿಗಿ ಕೊಟ್ರೇಶ, ಜ್ಯೋತಿ ಮಲ್ಲಣ್ಣ, ಉಮೇಶ, ಪಾರ್ವತಮ್ಮ ಬೆಲ್ಲದ್, ಎಂ.ಪಿ. ವೀರೇಶ, ಕೃಷ್ಣನಾಯ್ಕ, ಧರ್ಮಶೀಲ, ಹಂಪನಗೌಡ, ಟಿ.ಪಿ. ವೀರೇಂದ್ರ, ಕೆ. ಹನುಮಂತಪ್ಪ, ಸಿ. ನಿಂಗಪ್ಪ ಸೇರಿದಂತೆ ಇತರರಿದ್ದರು.
ಶೈಕ್ಷಣಿಕ ಜಿಲ್ಲೆ ರಚನೆಗೆ ಈ ಹಿಂದೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು ಅಂದಿನ ಸರ್ಕಾರದೊಂದಿಗೆ ಸಾಕಷ್ಟು ಬಾರಿ ಚರ್ಚೆ ಮಾಡಿ ಕ್ರಮ ಕೈಗೊಂಡಿದ್ದರು. ಆದರೆ ಈ ವರೆಗೂ ಆ ಕೆಲಸ ಕೈಗೂಡಿಲ್ಲ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹೂವಿನಹಡಗಲಿ ಸೇರಿಸಿಕೊಂಡು ಶೈಕ್ಷಣಿಕ ಜಿಲ್ಲೆ ರಚನೆ ಮಾಡಲು ಶೀಘ್ರದಲ್ಲೆ ಕ್ರಮ ಕೈಗೊಳ್ಳುತ್ತೇವೆ.
ಪಿ.ಟಿ. ಪರಮೇಶ್ವರ ನಾಯ್ಕ, ಸಚಿವ
ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟು ಇದ್ದು, ಇದನ್ನು ನಿವಾರಣೆ ಮಾಡಲು ಸಿಎಂ ಸಿದ್ದರಾಮಯ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶಿಸಿದ್ದಾರೆ. ಇದರಿಂದ ಶಿಕ್ಷಕರ ಕೊರತೆ ನೀಗಿಸಿದಂತಾಗುತ್ತದೆ.
ಎಂ.ಪಿ. ರವೀಂದ್ರ, ಶಾಸಕ
ಶಿಕ್ಷಕ ವೃತ್ತಿ ಕುಲಪತಿ ಹುದ್ದೆಗೆ ಸಮ: ಕುಂವೀ
ಪ್ರಾಥಮಿಕ ಶಾಲೆ ಶಿಕ್ಷಕರು ಇಂದಿಗೂ ಪ್ರಾಮಾಣಿಕ ಹಾಗೂ ನೈತಿಕ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತಿರುವುದರಿಂದ ಅವರ ವೃತ್ತಿ ವಿವಿ ಕುಲಪತಿ ಹುದ್ದೆಗೆ ಸಮಾನ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಿಸಿದರು.
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಹಳ್ಳಿಗಳ ನಕ್ಷೆಯನ್ನು ಬದಲಾವಣೆ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರ ಮೇಲಿರುವ ದೊಡ್ಡ ಆಪಾದನೆ ಲೈಂಗಿಕ ಉಪಟಳ. ಇದನ್ನು ಮಾಧ್ಯಮಗಳು ಹೆಚ್ಚು ಪ್ರಚಾರ ನೀಡಿ ಇಡೀ ಶಿಕ್ಷಕ ವೃಂದವನ್ನೇ ಆಪಾದಿತರಂತೆ ಬಿಂಬಿಸುತ್ತಿರುವುದು ಖೇದಕರ. ಸಹಿಸಲಾರದ ವ್ಯಕ್ತಿಗಳು ಇಂತಹ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಾರೆ. ಮೊದಲು ಶಿಕ್ಷಕರಲ್ಲಿ ಕೀಳರಿಮೆ ಹೋಗಬೇಕು. ಶಿಕ್ಷಣಕ್ಕಾಗಿ ಕೋಟ್ಯಂತರ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಆದರೆ ಶಿಕ್ಷಕರು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕೆಲಸ ಮಾಡಬೇಕೆಂದರು.
ಶಾಲೆ ಇದ್ದ ಕೇಂದ್ರ ಸ್ಥಳಗಳಲ್ಲೇ ಶಿಕ್ಷಕರು ಇರಬೇಕು, ಪಟ್ಟಣ ಮತ್ತು ನಗರ ಪ್ರದೇಶಗಳಿಂದ ಹಳ್ಳಿಗೆ ಹೋಗಿ ಪಾಠ ಮಾಡುವ ಪರಿಪಾಠ ಬಿಡಬೇಕು. ನಿಮಗೆ ಸರ್ಕಾರವನ್ನು ನಡುಗಿಸುವ ಶಕ್ತಿ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಿರಂತರ ಜ್ಞಾನ ತುಂಬಿಸುವ ಗ್ರಥಾಲಯ ನಿವಾಗಬೇಕು, ಸರ್ಕಾರವೂ ಕೂಡಾ ಕೆಲ ಯೋಜನೆಗಳಿಂದ ಶಿಕ್ಷಕರನ್ನು ಮುಕ್ತರನ್ನಾಗಿಸಿ ಬೋಧನೆಗೆ ಹೆಚ್ಚು ಮಹತ್ವ ನೀಡಬೇಕೆಂದರು.