ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಾಂಕಾಂಗ್‌ನಲ್ಲೂ ಅಕ್ರಮ ಗಣಿ ಹವಾ!

Rashmi Kasaragodu
Updated On : 6 Sept 2013, 1:22 am

ಶಶಿಧರ ಮೇಟಿ
ಕ.ಪ್ರ.ವಾರ್ತೆ    ಬಳ್ಳಾರಿ    ಸೆ. 5
ಗಣಿ ಅಕ್ರಮ ಲಾಬಿ ಕೇವಲ ಜನಾರ್ದನ ರೆಡ್ಡಿ ಮೂಲಕ ಮಾತ್ರ ವಿದೇಶಕ್ಕೆ ವ್ಯಾಪಿಸಿಲ್ಲ. ಆತನ ಸಹಚರರೂ ವಿದೇಶದಲ್ಲಿ ತಮ್ಮ ಅಕ್ರಮಅಡ್ಡೆಗಳನ್ನು ಹೊಂದಿದ್ದರು ಎಂಬ ಮಹತ್ವದ ಮಾಹಿತಿ ಈಗ ಸಿಬಿಐಗೆ ಲಭ್ಯವಾಗಿದೆ.
ಬುಧವಾರವಷ್ಟೇ ಸಿಬಿಐ ಬಲೆಗೆ ಬಿದ್ದಿರುವ ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ವ್ಯವಹಾರಗಳ ಪ್ರತಿನಿಧಿಯೆಂದು ಬಿಂಬಿತನಾದ ಇಂಟಿಗ್ರೇಟೆಡ್ ಲಾಜಿಸ್ಟಿಕ್ ಕಂಪನಿ (ಐಎಲ್‌ಸಿ) ಮಾಲೀಕ ಸೋಮಶೇಖರ್ ಹಾಂಕಾಂಗ್‌ನಲ್ಲಿ ಬೇನಾಮಿ ಗಣಿ ಕಂಪನಿ ಹೊಂದಿರುವ ಮಾಹಿತಿ ಸಿಬಿಐ ತನಿಖೆಯಿಂದ ಲಭ್ಯವಾಗಿದೆ. ಕರ್ನಾಟಕದಲ್ಲಿ ರಫ್ತು ನಿಷೇಧದ ನಡುವೆಯೂ ಬೇರೆಡೆಯಿಂದ ವಿದೇಶಕ್ಕೆ ಅದಿರು ರಫ್ತು ಮಾಡಿರುವ ಮಾಹಿತಿ ಹೊರ ಬಿದ್ದಿದೆ.
ಇದುವರೆಗೆ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿ, ಸಿಇಸಿ ವರದಿಯಲ್ಲಿ ಗಣಿ ಕುಳಗಳ ಹೆಸರಿದ್ದರೂ ಆರೋಪಿಗಳನ್ನು ವಿಚಾರಣೆ ಮೂಲಕ ಬಂಧಿಸುತ್ತಿರುವುದು, ಗಣಿ ಕುಳಗಳ ವಿಶ್ವರೂಪ ದರ್ಶನವಾಗುತ್ತಿದೆ. ಗಣಿ ಭೂಮ್ ಇದ್ದ ಕಾಲಕ್ಕೆ ಐಷಾರಾಮಿ ಹಾಗೂ ಗೌರವಾನ್ವಿತ ವ್ಯಕ್ತಿಗಳಾಗಿದ್ದವರು ಇದೀಗ ಸಿಬಿಐನಿಂದ ಕಂಬಿ ಎಣಿಸುವ ಪರಿಸ್ಥಿತಿವರೆಗೆ ಬಂದು ನಿಂತಿದ್ದಾರೆ.
ಎಂಜಿನಿಯರ್‌ಗೂ ಗಣಿಗಾರಿಕೆ ಆಸೆ: ತೋಳ್ಬಲ, ಅಧಿಕಾರ ಬಲ, ರಾಜಕೀಯ ಕೃಪಾಕಟಾಕ್ಷ ಇದ್ದವರು ಗಣಿ ವಿಷಯದಲ್ಲಿ ರಾತ್ರೋರಾತ್ರಿ ಶ್ರೀಮಂತರಾದ ಉದಾಹರಣೆಗಳಿವೆ. ಇಂಟಿಗ್ರೇಟೆಡ್ ಲಾಜಿಸ್ಟಿಕ್ ಕಂಪನಿ (ಐಎಲ್‌ಸಿ) ಮಾಲೀಕ ಕೋವೂರು ಸೋಮಶೇಖರ್ ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್. ಕೊಪ್ಪಳ ಜಿಲ್ಲೆಯ ಬಂಡಿ ಆರ್ಲಾಪುರ ಗ್ರಾಮದವನು. ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕ್ರಮೇಣ ಈತನಲ್ಲೂ ಗಣಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ಆಸೆ ಬೆಳೆಯಿತು. ಈ ನಿಟ್ಟಿನಲ್ಲಿ ಸೋಮಶೇಖರ್ 2003, ಡಿ.16ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಐಎಲ್‌ಸಿ ಕಂಪನಿ ನೋಂದಣಿಸಿಕೊಂಡಿದ್ದು, 2008ರಲ್ಲಿ ಸೋಮಶೇಖರ್‌ಗೆ ಜನಾರ್ದನ ರೆಡ್ಡಿ ಸಖ್ಯ ಬೆಳೆಯುತ್ತದೆ. ಅಲ್ಲಿಂದ ಈತನ ಗಣಿ ಅಕ್ರಮ ಶುರುವಾಗುತ್ತದೆ.
ಹಾಂಕಾಂಗ್‌ನಲ್ಲಿ ಬೇನಾಮಿ ಕಂಪನಿ: ಜನಾರ್ದನ ರೆಡ್ಡಿ ಆಪ್ತಸಹಾಯಕ ಮೆಹಫೂಜ್ ಅಲಿಖಾನ್‌ಗೆ ಸೇರಿದ ದೇವಿ ಟ್ರೇಡಿಂಗ್ ಹಾಗೂ ಹಾಲಿ ಶಾಸಕರೊಬ್ಬರಿಗೆ ಸೇರಿದೆ ಎನ್ನಲಾದ ಜನದೇವಿ ಮಿನರಲ್ಸ್‌ನೊಂದಿಗೆ ಸೋಮಶೇಖರ್ ವ್ಯವಹಾರ ಹೊಂದಿದ್ದ. ಸಿಬಿಐಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈತನೊಬ್ಬ ಅಂತಾರಾಷ್ಟ್ರೀಯ ಅದಿರು ಡೀಲರ್ ಆಗಿದ್ದಾನೆ. ಸೋಮಶೇಖರ್ ಹೈಲೈಟ್ ಬ್ರಿಲಿಯಂಟ್ ಲಿಮಿಟೆಡ್ ಹಾಗೂ ಮಿನರಲ್ ಎಂಬಿಸಿ ಲಿಮಿಟೆಡ್ ಎಂಬ ಬೇನಾಮಿ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿಗಳು ಹಾಂಕಾಂಗ್‌ನ ಸೂಟ್ 1508,17/19 ಎಂಪ್ಲಸ್ ಪ್ಲಾಜಾ, ಚಾತಂ ರೋಡ್, ಸೌತ್ ಟಿಎಸ್‌ಟಿ, ಕೌಲೂನ್ ಎಂಬ ವಿಳಾಸದಲ್ಲಿ ಕಂಪನಿ ಹೊಂದಿದ್ದಾನೆ. ಹಾಂಕಾಂಗ್‌ನಲ್ಲಿ ಸೋಮಶೇಖರ್‌ನ ಪ್ರತಿನಿಧಿಯಾಗಿ ಅಶೋಕ್ ರುಂಗ್ಟ್ ಎಂಬಾತ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
ಅಂಡರ್ ಇನ್ವೈಸ್‌ನಲ್ಲಿ ಅದಿರು ಮಾರಾಟ: ಸೋಮಶೇಖರ್ ದೇಶದಲ್ಲಿ ಅದಿರು ಖರೀದಿ ಮಾಡಿ ತನ್ನದೇ ಆದ ಬೇನಾಮಿ ಕಂಪನಿ ಮಿನರಲ್ ಎಂಬಿಸಿ ಲಿಮಿಟೆಡ್‌ಗೆ ಅಂಡರ್ ಇನ್ವೈಸ್ (ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಅದಿರು ಮಾರಾಟ, ತೆರಿಗೆಯಿಂದ ತಪ್ಪಿಸಿಕೊಳ್ಳಬಹುದು)ನಲ್ಲಿ ಮಾರಾಟ ಮಾಡುತ್ತಿದ್ದ. ಮಿನರಲ್ ಎಂಬಿಸಿ ಕಂಪನಿ ಸೋಮಶೇಖರ್‌ನ ಕಚೇರಿ ಸಹಾಯಕಿ ಪದ್ಮಾವತಿ ಅವರ ಹೆಸರಿನಲ್ಲಿದೆ. ಎಸ್‌ವಿಎಂ ನೇಟ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಗೆ ಸೋಮಶೇಖರ್ ಎಂಡಿ ಆಗಿದ್ದ. ಹಾಂಕಾಂಗ್ ಕಂಪನಿಯೊಂದರಿಂದ ಇಮೇಲ್ ಮೂಲಕ ಅದಿರು ವಹಿವಾಟು ಮಾಡಿರುವ ಮಾಹಿತಿ ಸಿಬಿಐಗೆ ಸಿಕ್ಕಿದೆ.
31.69 ಲಕ್ಷ ಟನ್ ಅಕ್ರಮ ಅದಿರು ರಫ್ತು: ಗಣಿಗಾರಿಕೆಯಲ್ಲಿ ಸಕ್ರಮ ಎನ್ನುವುದಕ್ಕಿಂತ ಅಕ್ರಮವೇ ಹೆಚ್ಚು ಎಂಬಂತೆ ಕಾಣುತ್ತಿದೆ. ಐಎಲ್‌ಸಿ ಸೋಮಶೇಖರ್ 2006-07ರಿಂದ 2010ರವರೆಗೆ ಸುಮಾರು 43,30,200 ಮೆಟ್ರಿಕ್ ಟನ್ ಅದಿರು ರಫ್ತು ಮಾಡಿದ್ದಾನೆ. ಇದರಲ್ಲಿ ಕೆಲವು ಲಕ್ಷ ಟನ್‌ಗಳ ಅದಿರನ್ನು ಕರ್ನಾಟಕದಿಂದ ಅದಿರು ರಫ್ತು ನಿಷೇಧದ ನಡುವೆಯೇ ರಫ್ತು ಮಾಡಿದ್ದಾನೆ ಎಂಬುದು ಪತ್ತೆಯಾಗಿದೆ. ಅದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೇವಲ 11,61,014 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತಿಗೆ ಮಾತ್ರ ಪರವಾನಗಿ ಪಡೆದಿದ್ದು, ಇನ್ನುಳಿದ 31,69,486 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದಾನೆ. ಇದರಲ್ಲಿ ಬೇಲೆಕೇರಿ ಬಂದರಿನಿಂದ 6,40,517 ಮೆಟ್ರಿಕ್ ಟನ್ ಅದಿರನ್ನು ರಫ್ತು ಮಾಡಲಾಗಿದೆ ಎಂದು ತನಿಖೆಯಿಂದ ಹೊರಬಿದ್ದಿದೆ.
ಈ ಎಲ್ಲಾ ಅದಿರನ್ನು ಬಳ್ಳಾರಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಸಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಐಎಲ್‌ಸಿ ಸೋಮಶೇಖರ್ ಬಂಧಿತನಾದ 15ನೇ ಆರೋಪಿಯಾಗಿದ್ದಾನೆ. ಇನ್ನಿತರ ಟ್ರೇಡರ್ಸ್ ಹಾಗೂ ಗಣಿ ಮಾಲೀಕರು ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement