ಬೇಲೆಕೇರಿ ಅದಿರು ನಾಪತ್ತೆ: ಮತ್ತೊಬ್ಬ ಉದ್ಯಮಿ ಬಂಧನ
ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಉದ್ಯಮಿಯನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 16ಕ್ಕೇರಿದೆ.
ದೆಹಲಿ ಮೂಲಕ ಎಕ್ಸ್ಪೋರ್ಟ್ ಕಂಪನಿ ಪಿಜೆಎಸ್ ಓವರ್ಸಿಸ್ ಲಿಮಿಟೆಡ್ನ ಮಾಲೀಕ ಪವನ್ಕುಮಾರ್ ಜೈನ್ ಅವರ ವಿಚಾರಣೆಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ಸಿಬಿಐ ಮುಂದೆ ತನಿಖೆಗೆ ಜೈನ್ ಹಾಜರಾಗಿರಲಿಲ್ಲ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತನಿಖೆಯು ಕ್ಷೀಪ್ರಗತಿಯಲ್ಲಿ ನಡೆಯುತ್ತಿರುವುದರಿಂದ ದೆಹಲಿಗೆ ತೆರಳಿದ ಸಿಬಿಐ ಅಧಿಕಾರಿಗಳು ಪವನ್ಕುಮಾರ್ನನ್ನು ದೆಹಲಿಯಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದು, ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ 10ಕ್ಕೂ ಹೆಚ್ಚು ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧನಗಳು ನಡೆಯುತ್ತಿರುವುದರಿಂದ ಇದೀಗ ಟ್ರೇಡರ್ಸ್, ಗಣಿ ಮಾಲೀಕರು ಹಾಗೂ ಎಕ್ಸ್ಪೋರ್ಟ್ಗಳೊಂದಿಗೆ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.