ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಟ್ಕಾ ನಿಷೇಧಕ್ಕೆ ಕರವೇ ಆಗ್ರಹ

Lingaraj Badiger
Updated On : 7 Sept 2013, 11:43 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 6
ಭಾರಿ ವಾಹನಗಳು ನಗರದ ಒಳಗಡೆ ಬರದಂತೆ ತಡೆಯಲು ಹಾಗೂ ನಗರದಲ್ಲಿ ನಡೆಯುತ್ತಿರುವ ಮಟ್ಕಾ ದಂಧೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹೊಸಪೇಟೆ ತಾಲೂಕು ವಿಜಯನಗರ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಕಚೇರಿಯ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿಜಯನಗರ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಕಟಗಿ ಜಂಬಯ್ಯ ನಾಯಕ ಮಾತನಾಡಿ, ಹೊಸಪೇಟೆ ನಗರವು ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ರಸ್ತೆಗಳು ಅಗಲೀಕರಣ ಆಗದೆ ತಗ್ಗು ಗುಂಡಿಗಳಿಂದ ಕೂಡಿವೆ. ಇಲ್ಲಿನ ರಸ್ತೆಗಳಲ್ಲಿ ಜನರು ಮತ್ತು ವಾಹನ ಸವಾರರು ಸಂಚಾರಿಸಲು ಪರದಾಡುವಂತಾಗಿದೆ.
ನಗರದ ಹೊರಗಡೆ ಇರುವ ಬೈಪಾಸ್ ರಸ್ತೆಯಲ್ಲಿ ಸಂಚಾರಿಸಬೇಕಾದ ಜಿಂದಾಲ್, ಕಲ್ಯಾಣಿ, ಕಿರ್ಲೋಸ್ಕರ್ ಹಾಗೂ ಮೈನ್ಸ್ ಲಾರಿಗಳು ಹಾಗೂ ಭಾರಿ ವಾಹನಗಳು ನಗರದ ಒಳಗಡೆ ಬರುವುದರಿಂದ ನಗರದ ರಸ್ತೆಗಳೆಲ್ಲ ಹದಗೆಟ್ಟು ತಗ್ಗು ಗುಂಡಿಗಳಿಂದ ಕೂಡಿವೆ. ನಗರದ ಒಳ ಬರುವ ಲಾರಿಗಳನ್ನು ಬೈಪಾಸ್ ರಸ್ತೆಯಲ್ಲಿ ಸಂಚರಿಸುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮೈನ್ಸ್ ಲಾರಿಗಳು ನಗರದ ಒಳಗಡೆ ಬರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಅಧಿಕ ಭಾರ ಹೊತ್ತ ಭಾರಿ ವಾಹನಗಳು ನಗರದ ಒಳಗಡೆ ಪ್ರವೇಶಿಸದಂತೆ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಬೇಕು. ನಗರದಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿದೆ. ಇದನ್ನು ತಕ್ಷಣವೇ  ಸಂಪೂರ್ಣವಾಗಿ ನಿಲ್ಲಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಹೊಸಪೇಟೆ ತಾಲೂಕು ವಿಜಯನಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ. ರಾಮಪ್ಪ, ಉಪಾಧ್ಯಕ್ಷರಾದ ಪಾಂಡುರಂಗ, ಬಿ. ಬಾಷಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಪ್ಪಣ್ಣ ಮತ್ತು ವಿ. ಶೇಖರ್, ತಿಮ್ಮಪ್ಪ, ಓಂಕಾರಿ, ಯಮನೂರ, ಕೇಶವ ಹಾಗೂ ಯುವ ಘಟಕದ ಉಪಾಧ್ಯಕ್ಷ ಎಚ್. ಹೊನ್ನೂರ್, ಮಹಿಳಾ ಘಟಕದ ಉಪಾಧ್ಯಕ್ಷೆ ಶಾರದಮ್ಮ ಹಾಗೂ ಅಂಬಿಕಾ, ಪುಷ್ಪಾ, ವರಲಕ್ಷ್ಮೀ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement