20ರಂದು ರಾಜ್ಯಾದ್ಯಂತ ಸಿಐಟಿಯು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 7
ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಎಸ್ಮಾ ಕಾಯಿದೆ ಜಾರಿ ವಿರೋಧಿಸಿ, ಸೆ. 20ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂ ಕಚೇರಿಗಳಿಗೆ ಸಿಐಟಿಯು ನೇತೃತ್ವದಲ್ಲಿ ಮುತ್ತಿಗೆ ಹಾಕಿ ಚಳವಳಿ ಕೈಗೊಳ್ಳಲಾಗುವುದು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಹೋರಾಟದ ಹಕ್ಕುಗಳನ್ನು ಹತ್ತಿಕ್ಕುವ ಎಸ್ಮಾ ಕಾಯ್ದೆ ಜಾರಿಗಾಗಿ ರಾಜ್ಯ ಸರ್ಕಾರ ಸಜ್ಜುಗೊಳ್ಳುತ್ತಿದ್ದು, ಸೆ. 26ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಸಭೆ ಅನುಮತಿ ಪಡೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ಆದರೆ, ಈ ಮಸೂದೆಯು ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ನೀತಿಯಾಗಿದೆ. ಇದರ ಪ್ರಕಾರ ಯಾವುದೇ ಕಾರ್ಮಿಕರು ತಮ್ಮ ಹಕ್ಕು ಕೇಳುವಂತಿಲ್ಲ. ಕಾಯ್ದೆಯ ಕಲಂ 22ರ ಪ್ರಕಾರ ಕಾರ್ಮಿಕರು ಮಾತನಾಡುವಂತಿಲ್ಲ. ಒಂದು ವೇಳೆ ವಿರೋಧಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳುವ ಅಧಿಕಾರ ಕಾಯ್ದೆ ನೀಡುತ್ತದೆ. ಹೀಗಾಗಿ ನ್ಯಾಯಕ್ಕಾಗಿ ಹೋರಾಡುವ ಕಾರ್ಮಿಕರ ಹಕ್ಕನ್ನು ಕಸಿಯುವ ಮಸೂದೆ ಇದಾಗಿದೆ. ಈ ನಿಟ್ಟಿನಲ್ಲಿ ಇದರ ವಿರುದ್ಧ ಸಂಘಟನೆಯು ತೀವ್ರವಾಗಿ ಹೋರಾಟ ಹಮ್ಮಿಕೊಳ್ಳುವುದಲ್ಲದೆ, ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಮಸೂದೆ ವಿರುದ್ಧ ಅಂದಿನ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ 2004ರಿಂದಲೇ ಕಾಯ್ದೆ ಜಾರಿಗಾಗಿ ಕಾಂಗ್ರೆಸ್, ಬಿಜೆಪಿ ಪ್ರಯತ್ನಿಸಿದ್ದು, ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಪುನಃ ಜಾರಿಗೊಳಿಸಲು ಸಜ್ಜಾಗುತ್ತಿದ್ದು, ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಅಧಿವೇಶನಕ್ಕೆ ಅಡ್ಡಿಪಡಿಸಿ, ಮಸೂದೆ ಮಂಡಿಸುವುದನ್ನು ತಡೆಯಲಾಗುವುದು.
ಕಾರ್ಮಿಕರಿಗೆ ಕನಿಷ್ಠ ರು. 10 ಸಾವಿರ ವೇತನ, ಕೂಲಿ ನೀಡಬೇಕು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆಯಲ್ಲಿ ಸುಮಾರು ರು. 2400 ಕೋಟಿ ಸೆಸ್ ಸಂಗ್ರಹಗೊಂಡಿದ್ದು, ಇದನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡದೆ, ಜಿಲ್ಲೆಗೊಂದು ಕಲ್ಯಾಣ ಮಂಟಪ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದರ ಬದಲು ರಾಜ್ಯದಲ್ಲಿನ 15 ಲಕ್ಷ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ನೇಮಿಸಿಕೊಂಡು ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರ ಸೇರಿದಂತೆ ಬಿಸಿಯೂಟ ಯೋಜನೆಯ ಖಾಸಗೀಕರಣ ಕೈಬಿಡಬೇಕು. ಸಮಗ್ರ ಬಾಲವಿಕಾಸ ಯೋಜನೆಯನ್ನು ಬಲಪಡಿಸಬೇಕು. ಗುತ್ತಿಗೆ ಕಾರ್ಮಿಕರ ಪದ್ಧತಿ ರದ್ದು ಮಾಡಬೇಕು. ರಾಜ್ಯದಲ್ಲಿರುವ 2.40 ಕೋಟಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ. 20ರ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ಸ್ವಾಗತಾರ್ಹ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಯಾರಿಸಿದ ಎರಡು ವರದಿಗಳನ್ನು ಕ್ಯಾಬಿನೇಟ್ ಅಂಗೀಕರಿಸಿರುವುದು ಸ್ವಾಗತಾರ್ಹವಾಗಿದೆ. ವರದಿಯಲ್ಲಿದ್ದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ವರದಿಯಲ್ಲಿ ಸಂತೋಷ್ ಹೆಗ್ಡೆ ಸೂಚಿಸಿದಂತೆ ತಪ್ಪಿತಸ್ಥರಿಂದ ಐದು ಪಟ್ಟು ಹಣ ವಸೂಲಿ ಮಾಡಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಆರ್.ಎಸ್. ಬಸವರಾಜ, ಕಾರ್ಯದರ್ಶಿ ಸತ್ಯಬಾಬು, ಕಾರ್ಯದರ್ಶಿ ಎಂ. ಗೋಪಾಲ್ ಇದ್ದರು.