ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಠಡಿ ನಿರ್ಮಾಣ ಸ್ಥಗಿತ

Vishwanath S
Updated On : 8 Sept 2013, 11:44 am

ಕೊಟ್ಟೂರು: ಸಮೀಪದ ಲೊಟ್ಟನಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೊಠಡಿ ನಿರ್ಮಾಣಕ್ಕೆ ಕಳಪೆ ಇಟ್ಟಿಗೆಗಳನ್ನು ಬಳಸುತ್ತಿರುವುದನ್ನು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ಶುಕ್ರವಾರ ಜರುಗಿತು.
ಶಾಲೆಯ ಬಿಸಿಯೂಟದ ಕೋಣೆ ನಿರ್ಮಾಣಕ್ಕೆ ರು. 3.25 ಲಕ್ಷ ಅನುದಾನ ಬಳಕೆ ಮಾಡಿಕೊಂಡ ಎಸ್‌ಡಿಎಂಸಿಯ 12 ಸದಸ್ಯರು, ಕಾಮಗಾರಿ ನಿರ್ವಹಣೆಯನ್ನು ತಾವೇ ನಿರ್ವಹಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ಡಿ. ದೇವೇಂದ್ರಪ್ಪ ಆಪಾದಿಸಿದ್ದಾರೆ.
ಕಾಮಗಾರಿಗೆ ಗುಣಮಟ್ಟದ ಇಟ್ಟಿಗೆಗಳನ್ನು ಬಳಸುವಂತೆ ಕಾಮಗಾರಿಯ ನಿರ್ವಹಣೆಯ ಸೂತ್ರದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಸಂಬಂಧ ತಾವು ಸಹ ಕಳಪೆ ಇಟ್ಟಿಗೆಗಳನ್ನು ಕೈಬಿಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಕೊಠಡಿ ನಿರ್ಮಾಣದಲ್ಲಿ ತೊಡಗಿರುವ ಎಸ್‌ಡಿಎಂಸಿಯವರು ತಮ್ಮ ಸಲಹೆಯನ್ನು ಧಿಕ್ಕರಿಸಿ ಕಳಪೆ ಇಟ್ಟಿಗೆಗಳಿಂದಲೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದಾರೆ. ಇದರಿಂದ ರೋಸಿ ಹೋದ ತಾವು ಗ್ರಾಮಸ್ಥರೊಂದಿಗೆ ಕೂಡಿಕೊಂಡು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇನೆ ಎಂದ ಅವರು, ಎಸ್‌ಡಿಎಂಸಿಯವರು ಕಳಪೆ ಮಟ್ಟದಲ್ಲಿ ನಿರ್ಮಾಣ ಕೈಗೆತ್ತಿಕೊಂಡರು. ಬಿಆರ್‌ಸಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜೆಇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಅವರಿಗೆ ಬೆಂಬಲವಾಗಿದ್ದಾರೆ ಎಂದು ಅವರು ಆರೋಪಿಸಿದರು.
ಈ ಕುರಿತು ಬಿಇಒ ಮತ್ತು ಡಿಡಿಪಿಐ ಅವರಿಗೆ ದೂರು ಸಲ್ಲಿಸಲಾಗಿದೆ. ಶಾಲೆ ನಿರ್ಮಾಣಕ್ಕೆ ಲೊಟ್ಟನಕೇರಿಯ ಗ್ರಾಮಸ್ಥರು ಒಟ್ಟಗೂಡಿ 1.80 ಎಕರೆ ಭೂಮಿಯನ್ನು ಖರೀದಿಸಿ ದಾನ ನೀಡಿದ್ದಾರೆ. ಶಾಲೆಯನ್ನು ಪ್ರಾರಂಭಿಸುವುದಕ್ಕೆ ಇಷ್ಟೆಲ್ಲಾ ಸಹಾಯ ಒದಗಿಸಿರುವ ಗ್ರಾಮಸ್ಥರು ಕಳಪೆ ಕಾಮಗಾರಿಯನ್ನು ಯಾವ ಉದ್ದೇಶಕ್ಕೆ ಒಪ್ಪಿಕೊಳ್ಳಬೇಕು ಎಂದು ಎಸ್‌ಡಿಎಂಸಿಯವರನ್ನು ಪ್ರಶ್ನಿಸಿದರೆ ಇದೇ ಕಳಪೆ ಇಟ್ಟಿಗೆಗಳಿಂದಲೆ ನಿರ್ಮಿಸುತ್ತೇವೆ, ಇಟ್ಟಿಗೆಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ದುರಹಂಕಾರದ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು. ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಕಳಪೆ ಇಟ್ಟಿಗೆಗಳನ್ನು ಬಳಸಿ ಬಿಸಿಯೂಟ ಕೊಠಡಿ ನಿರ್ಮಾಣ ಕಾರ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement