ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೋಗಗ್ರಸ್ತ ಬಳ್ಳಾರಿ ಮುನ್ಸಿಪಲ್ ಶಾಲೆ

Vishwanath S
Updated On : 8 Sept 2013, 11:43 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 7
ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ ಮಕ್ಕಳಿಗೆ ಕುಳಿತು ಪಾಠ ಕೇಳಲು ಕೊಠಡಿಗಳ ಕೊರತೆ ಇರುತ್ತದೆ. ಕೊಠಡಿಗಳ ಕೊರತೆಯಿಂದ ಮಕ್ಕಳು ಶಾಲಾ ಆವರಣದಲ್ಲಿ ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ. ಆದರೆ ಬಳ್ಳಾರಿ ಮುನ್ಸಿಪಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಭರಪೂರ ಕೊಠಡಿಗಳಿದ್ದರೂ ಶಾಲಾ ಮಕ್ಕಳು ಮಾತ್ರ ಶನಿವಾರ ಕೊಠಡಿ ಹೊರಗೆ ನೆಲದ ಮೇಲೆ ಕುಳಿತು ಪಾಠ ಕೇಳುವಂತಾಯಿತು.
ಮುನ್ಸಿಪಲ್ ಪ್ರೌಢಶಾಲೆಗೆ ತನ್ನದೇ ಆದ ಇತಿಹಾಸವಿದೆ. 8ರಿಂದ 10ನೇ ತರಗತಿ ವರೆಗಿನ 500 ಮಕ್ಕಳಿಗೆ 18 ಕೊಠಡಿಗಳು ಇವೆ. ಅದರಲ್ಲಿ 10ನೇ ನಂಬರಿನ ಕೊಠಡಿ ಇದ್ದರೂ, ಉಪಯೋಗಕ್ಕಿಲ್ಲ. ಕಾರಣ ಕೊಠಡಿ ಸುತ್ತಲು ಪಕ್ಕದ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳು ಮೂತ್ರ ವಿಸರ್ಜನೆ ಮಾಡುವುದರಿಂದ ಆ ಕೊಠಡಿಯನ್ನು ಉಪಯೋಗಿಸುತ್ತಿಲ್ಲವಂತೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕೊಠಡಿ ನಿರ್ಮಿಸುತ್ತಾರೆ. ಆದರೆ ಮೂತ್ರ ವಿಸರ್ಜನೆ ಮಾಡುತ್ತಾರೆಂದು ಪರ್ಯಾಯ ಕ್ರಮಕ್ಕೆ ಮುಂದಾಗದೆ, ಕೊಠಡಿಯನ್ನೇ ಬಳಸದೇ ಬಿಡುವುದು ಎಷ್ಟು ಸರಿ ಎಂಬುದು ನಗರದ ಪ್ರಜ್ಞಾವಂತರ ಪ್ರಶ್ನೆ.
ಸೊಳ್ಳೆ ಹಾವಳಿ ಮಧ್ಯೆ ಪಾಠ: ನಗರದ ಹೃದಯ ಭಾಗದಲ್ಲಿರುವ ಮುನ್ಸಿಪಲ್ ಶಾಲೆಯು ಅವ್ಯವಸ್ಥೆ ಆಗರವಾಗಿದೆ. ಶಾಲೆಯಲ್ಲಿ ಸುಸಜ್ಜಿತ ಕೊಠಡಿಗಳು ಇದ್ದು ಇಲ್ಲದಂತಾಗಿವೆ. ಮಳೆಗಾಲ ಬಂತೆಂದರೆ ಶಾಲಾ ಮೈದಾನದಲ್ಲಿ ನೀರು ನಿಲ್ಲುತ್ತದೆ. ಇನ್ನು ಶಾಲೆಯ ಹಿಂದೆ ಸರ್ಕಾರಿ ಹಾಸ್ಪೆಲ್ ಇದ್ದು ಇವೆರಡರ ಮಧ್ಯದ ಸಣ್ಣದಾದ ಜಾಗದಲ್ಲಿ ಗಿಡ ಗಂಟೆಗಳು ಬೆಳೆದು, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗುವುದು ಹಾಗೂ ದುರ್ನಾತ ಬರುವುದು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಶಾಲಾ ಆವರಣದ ನೆಲದ ಮೇಲೆ ಮಕ್ಕಳನ್ನು ಕೂಡಿಸಿಕೊಂಡು ಪಾಠ ಮಾಡಲಾಗುತ್ತದೆ. ಇನ್ನು ಶಾಲೆಗೆ ನಾಲ್ಕು ಜನ ಸ್ವೀಪರ್ಸ್‌ಗಳು ಇದ್ದರೂ ಕೊಠಡಿಗಳ ಸ್ವಚ್ಛತೆ ಅಷ್ಟಕ್ಕಷ್ಟೆ.
ರೋಗಗಳಿಗೆ ಆಹ್ವಾನ: ಆರೋಗ್ಯ ಇಲಾಖೆ, ಬಳ್ಳಾರಿ ಮಹಾನಗರ ಪಾಲಿಕೆ ನೈರ್ಮಲ್ಯ ಕಾಪಾಡುವ ಮೂಲಕ ಮಕ್ಕಳ ಆರೋಗ್ಯ ಕಾಳಜಿ ಅಗತ್ಯ ಎಂದು ಕೇವಲ ಯೋಜನೆ ರೂಪಿಸಿ, ಜಾಗೃತಿ ಕಾರ್ಯಕ್ರಮ ಮಾಡುತ್ತಾರೆ. ಆದರೆ ಮಳೆ ಬಂದಾಗ ಮುನ್ಸಿಪಲ್ ಶಾಲೆಯಲ್ಲಿ ನೀರು ನಿಂತು ಸ್ವಚ್ಛತೆ ಗೌಣವಾಗುತ್ತದೆ. ಒಂದು ಕಡೆ ನಿಂತ ನೀರಿಂದ ದುರ್ನಾತ ಬರುತ್ತಿದ್ದರೆ ಇನ್ನೊಂದು ಕಡೆ ಮಕ್ಕಳು ಸೊಳ್ಳೆಯಿಂದ ಕಚ್ಚಿಸಿಕೊಳ್ಳುತ್ತ ಪಾಠ ಕೇಳಬೇಕು. ಇದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅರ್ಥವಾಗುವುದಿಲ್ಲ, ಶಾಲೆ ಮುಖ್ಯಸ್ಥರಿಗೆ ಗೊತ್ತಾಗುವುದಿಲ್ಲ. ಇಂತಹ ವ್ಯವಸ್ಥೆಯಲ್ಲಿ ಮಕ್ಕಳು ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವೇ? ಇದಕ್ಕಾಗಿಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರುವುದಿಲ್ಲವೇನೋ? ಇಂತಹ ಅವ್ಯವಸ್ಥೆಯ ಮಧ್ಯೆ ಶಿಕ್ಷಣ ಇಲಾಖೆ ಎಷ್ಟು ಯೋಜನೆ ರೂಪಿಸಿದರೂ ಮಕ್ಕಳನ್ನು ಹಾಗೂ ಪೋಷಕರ ಆಸಕ್ತಿಯನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸಾಧ್ಯವೇ?
ಜಿಲ್ಲಾಧಿಕಾರಿಗಳೇ ಇತ್ತ ಗಮನಿಸಿ: ಈ ಶಾಲೆಯನ್ನು ಚುನಾವಣೆ ಸೇರಿದಂತೆ ಇನ್ನಿತರ ಉದ್ದೇಶಕ್ಕೆ ಉಪಯೋಗಿಸುತ್ತಾರೆ. ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಿ ಲಕ್ಷಾಂತರ ರು. ಬಾಡಿಗೆ ಪಡೆಯುತ್ತಾರೆ. ವರ್ಷಕ್ಕೆ ಲಕ್ಷಾಂತರ ರುಪಾಯಿ ಆದಾಯ ಬಂದರೂ, ಶಾಲಾ ಮೈದಾನದಲ್ಲಿ ನೀರು ನಿಲ್ಲಿದಂತೆ ನೋಡಿಕೊಳ್ಳಲು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ಇದರ ನಿರ್ವಹಣೆಯನ್ನು ಮುನ್ಸಿಪಲ್ ಕಾಲೇಜಿನ ಪ್ರಾಚಾರ್ಯರಿಗೆ ವಹಿಸಲಾಗಿದೆ. ಈ ಬಗ್ಗೆ ಪ್ರಾಚಾರ್ಯರು ಹಾಗೂ ಉಪಪ್ರಚಾರ್ಯರನ್ನು ಕೇಳಿದರೆ ಪಾಲಿಕೆಯವರಿಗೆ ಹೇಳಿದ್ದೇವೆ, ಸ್ವಚ್ಛತೆ ಮಾಡಿಲ್ಲ ಎಂದು ಸಬೂಬು ನೀಡುತ್ತಾರೆ. ಶಾಲೆಗೆ ಆದಾಯ ಮೂಲವಿದ್ದರೂ, ಸ್ವಚ್ಛತೆ ಕಾಯ್ದುಕೊಂಡಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಬಿಸ್ವಾಸ್ ಅವರೇ ಕೊಂಚ ಗಮನಹರಿಸಿ, ನಿರ್ವಹಣೆ ಹೊಣೆ ಹೊತ್ತವರಿಗೆ ಬಿಸಿ ಮುಟ್ಟಿಸಬೇಕಾಗಿದೆ.
ಮಳೆ ಬಂದಾಗ ಶಾಲೆ ಮುಂದೆ ನೀರು ನಿಲ್ಲುತ್ತದೆ. ಶಾಲೆ ಹಿಂದೆ ನೀರು ನಿಂತು ಸೊಳ್ಳೆಗಳ ಕಾಟ, ಸ್ವಚ್ಛತೆ ಕೊರತೆ ಹಿನ್ನೆಲೆಯಲ್ಲಿ ಮಕ್ಕಳನ್ನು ಹೊರಗೆ ಕೂಡಿಸಲಾಗಿದೆ ಎನ್ನುತ್ತಾರೆ ಉಪ ಪ್ರಾಚಾರ್ಯೆ ವಿಮಲಾ.
ಸ್ವಚ್ಛತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿದೆ ಎಂದು ಹೇಳುವ ಅವರು, ಜವಾಬ್ದಾರಿ ಹೊತ್ತು ಈ ರೀತಿ ಹಾರಿಕೆ ಉತ್ತರ ಕೊಡುತ್ತಾರೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಬ್ರೇಕ್ ಹಾಕಬೇಕಿದೆ ಎನ್ನುವುದು ನಗರ ಜನತೆ ಆಶಯ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement