ತೋರಣಗಲ್ ಸಮೀಪ ಸೇತುವೆ ಕುಸಿತ!
ಕ.ಪ್ರ.ವಾರ್ತೆ, ಬಳ್ಳಾರಿ, ಸೆ. 8-
ಆಂಧ್ರಪ್ರದೇಶದ ಗುತ್ತಿಯಿಂದ ಅಂಕೋಲದವರೆಗಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬರುವ ಜಿಲ್ಲೆಯ ತೋರಣಗಲ್ ಸಮೀಪದ 50 ವರ್ಷ ಹಳೆಯದಾದ ಸೇತುವೆ ಎಚ್‌ಎಲ್ ಕಾಲುವೆಯಲ್ಲಿ ಶನಿವಾರ ಬೆಳಗಿನ ಜಾವ ಕುಸಿದ ಬಿದ್ದಿದೆ. ಹೀಗಾಗಿ ಬಳ್ಳಾರಿಯಿಂದ ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಮಂತ್ರಾಲಯ, ಶ್ರೀಶೈಲಂಗೆ ತೆರಳುವ ಬಸ್ ಸಂಚಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಗಿತಗೊಂಡಿದ್ದು, ಪರ್ಯಾಯವಾಗಿ ಕಂಪ್ಲಿ ಮಾರ್ಗದ ಮೂಲಕ ಸಂಚರಿಸುತ್ತಿವೆ.
ಗಣಿಗಾರಿಕೆ ಭೂಮ್ ಇದ್ದ ಕಾಲಕ್ಕೆ ಭಾರಿ ವಾಹನಗಳ ಸಂಚಾರದಿಂದ ಸೇತುವೆ ಶಿಥಿಲಗೊಂಡಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರದವರು ಶಿಥಿಲಗೊಂಡ ಸೇತುವೆ ಮೇಲಿನ ರಸ್ತೆಯನ್ನು ತೇಪೆ ಹಚ್ಚುತ್ತಾ ಸಾಗಿದ್ದರೆ ಹೊರತು ದುರಸ್ತಿಗೆ ಮುಂದಾಗಿರಲಿಲ್ಲ. ದಿನದಿಂದ ದಿನಕ್ಕೆ ಸೇತುವೆ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ 50 ಅಡಿ ಉದ್ದದ ಸೇತುವೆ ಎಚ್‌ಎಲ್ ಕಾಲುವೆಯಲ್ಲಿ ಕುಸಿದು ಬಿದ್ದಿದೆ. ಸೇತುವೆ ಮೇಲೆ ಯಾವುದೇ ವಾಹನ ಹೋಗದ ಪರಿಣಾಮ ಅನಾಹುತ ಸಂಭವಿಸಿಲ್ಲ.
ಸಂಚಾರ ಅಸ್ತವ್ಯಸ್ಥ: ಗುತ್ತಿಯಿಂದ ಅಂಕೋಲಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಬಳ್ಳಾರಿ ಕಡೆಯಿಂದ ಹೊಸಪೇಟೆ, ಗದಗ, ಧಾರವಾಡ, ಬೆಳಗಾವಿ, ಬಿಜಾಪುರ ಹಾಗೂ ಹೊಸಪೇಟೆ ಕಡೆಯಿಂದ ಆಂಧ್ರಪ್ರದೇಶದ ಮಂತ್ರಾಲಯ, ಶ್ರೀಶೈಲಂ, ಕರ್ನೂಲು, ಅನಂತಪುರ ಸೇರಿದಂತೆ ಆಂಧ್ರಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ಮಾರ್ಗವಾಗಿ ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ಕುಡಿತಿನಿ, ಕಂಪ್ಲಿ, ಕಮಲಾಪುರ ಮೂಲಕ ಸಂಚರಿಸುತ್ತಿವೆ. ಇನ್ನು ಸಣ್ಣಪುಟ್ಟ ವಾಹನಗಳು ವಡ್ಡು ಮತ್ತು ಬಸಾಪುರದ ಮೂಲಕ ಹೊಸಪೇಟೆಗೆ ಹೋಗಬಹುದು. ಸಂಡೂರು ಮೂಲಕ ಹೊಸಪೇಟೆ ಹೋಗುವ ವ್ಯವಸ್ಥೆಯೂ ಇದೆ.
ತಹಸೀಲ್ದಾರ್ ಭೇಟಿ: ಸೇತುವೆ ಕುಸಿದ ಸ್ಥಳಕ್ಕೆ ಸಂಡೂರು ತಹಸೀಲ್ದಾರ್ ಆರ್. ತಿಮ್ಮಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿ ಸೇತುವೆ ಕುಸಿದಿರುವ ವಿಷಯವನ್ನು ಡಿಸಿ ಮೂಲಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದರು.