ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲಾಭಾಂಶದಲ್ಲಿ ಬಿಡಿಸಿಸಿ ಬ್ಯಾಂಕ್

Rashmi Kasaragodu
Updated On : 9 Sept 2013, 12:41 pm

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 8
ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ಸದ್ಯ ಲಾಭಾಂಶಕ್ಕೆ ಸಿಬ್ಬಂದಿಗಳ ಶ್ರಮವೇ ಕಾರಣವಾಗಿದ್ದು, ಆದರಿಂದ ನಿವೃತ್ತಿ ಹೊಂದಿರುವ ಹಾಗೂ ಹಾಲಿ ಕಾರ್ಯದರ್ಶಿಗಳಿಗೆ ತಲಾ ರು. 25 ಸಾವಿರ ಪ್ರೋತ್ಸಾಹ ಧನ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಹೇಳಿದರು.
ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಪಿಕಾರ್ಡ್ ಬ್ಯಾಂಕ್, ಟಿಎಪಿಸಿಎಂಎಸ್ ಹಾಗೂ ಹೊಸಪೇಟೆ ಇಫ್ಕೋ ಹಾಗೂ ಅರ್ಬನ್ ಬ್ಯಾಂಕ್ ಸಹಯೋಗದಲ್ಲಿ ಭಾನುವಾರ ಸಚಿವ ಶಾಸಕರಿಗೆ ಸಹಕಾರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರೋತ್ಸಾಹ ಧನ: ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಲುವಾಗಿ ಬ್ಯಾಂಕ್ನ ಎಲ್ಲ ನಿರ್ದೇಶಕರು ಪಕ್ಷಾತೀತವಾಗಿ ಕೆಲಸ ಮಾಡಿದ್ದರ ಪರಿಣಾಮ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಕ್ರಮ ಕೈಗೊಳ್ಳಲಾಗಿದೆ. 2005ರಿಂದ ಈವರೆಗೂ ಒಟ್ಟು ರು. 57 ಲಕ್ಷ ಲಾಭಾಂಶ ಸಂಗ್ರಹಿಸಿ ಇಡಲಾಗಿತ್ತು. ಈಗ ರು. 47 ಲಕ್ಷ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ ಎಂದ ಅವರು, ಜಿಲ್ಲೆಯ 138 ಸಹಕಾರ ಸಂಘಗಳನ್ನು ಶೀಘ್ರದಲ್ಲೇ ಗಣಕೀಕರಣ ಮಾಡಲು ಪ್ರೋತ್ಸಾಹ ಧನ ನೀಡುತ್ತೇವೆ. ಉಳಿದ ಹಣವನ್ನು ಸಂಘದಲ್ಲಿ ಬಳಕೆ ಮಾಡಿಕೊಂಡು ರೈತರಿಗೆ ಸಕಾಲದಲ್ಲಿ ಸಾಲ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರು. 10 ಲಕ್ಷ ಅನುದಾನ:
ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ನಿವೇಶನ ಕೊಟ್ಟರೆ ತಮ್ಮ ಅನುದಾನದಲ್ಲಿ ರು. 10 ಲಕ್ಷ ಅನುದಾನವನ್ನು ನೀಡುತ್ತೇನೆ. ಈ ಸಹಕಾರಿ ಸೌಧಕ್ಕೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಸಹಕಾರಿ ಸೌಧ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿಕೊಂಡರು. ಸಹಕಾರ ಸಂಘಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹಾಂತಪ್ಪ, ಶಶಿಕಾಂತ ಹೆಸರೂರು, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸೇರಿದಂತೆ ಇತರರು ಮಾತನಾಡಿದರು.
ಅರವಳ್ಳಿ ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬೋಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ. ಶಾಂತನಗೌಡ, ತಾಪಂ ಅಧ್ಯಕ್ಷೆ ಪಿ. ದುರುಗಮ್ಮ, ಉಪಾಧ್ಯಕ್ಷೆ ಪ್ರೇಮಾ, ನಿಬಂಧಕ ಡಾ. ಉಮೇಶ, ಮಂಜುನಾಥ, ವಿರೂಪಾಕ್ಷರೆಡ್ಡಿ, ಕೋಳೂರು ಮಲ್ಲಿಕಾರ್ಜುನ, ಬಾತಿ ಚೌಡಪ್ಪ, ಮಹಾಂತಪ್ಪ, ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ನಿರ್ದೇಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವ, ಶಾಸಕರಿಗೆ ಸಹಕಾರ ಸನ್ಮಾನ ಕಾರ್ಯಕ್ರಮ ನಡೆಯಿತು. ಕೊಟ್ರೇಶ ನಿರೂಪಿಸಿದರು, ಹನುಮಂತಪ್ಪ ಸ್ವಾಗತಿಸಿದರು. ದೊಡ್ಡಬಸಪ್ಪ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement