ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಂಡರ್ ಪಾಸ್, ವಸತಿ ಗೃಹಕ್ಕೆ ಒಪ್ಪಿಗೆ

Lingaraj Badiger
Updated On : 11 Sept 2013, 11:09 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 10
ಬಳ್ಳಾರಿ ನಗರದಲ್ಲಿ ಅಂಡರ್ ಪಾಸ್, ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ವಸತಿ ಗೃಹಗಳ ಕೊರತೆ, ಉದ್ಯೋಗ ಖಾತ್ರಿ ಯೋಜನೆ ಕುರಿತು ವಿಧಾನಪರಿಷತ್‌ನಲ್ಲಿ ಚರ್ಚಿಸಲಾಗಿದ್ದು, ಅದಕ್ಕೆ ಸಂಬಂಧಪಟ್ಟ ಸಚಿವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಳ್ಳಾರಿಯಲ್ಲಿ ರೇಲ್ವೆ ಗೇಟ್‌ಗಳ ಸಮಸ್ಯೆಯಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದಾಗ, ಬಳ್ಳಾರಿಯಲ್ಲಿ ರೇಲ್ವೆ ಗೇಟ್‌ಗಳಿಗೆ ಅಂಡರ್ ಪಾಸ್ ಮಾಡುವ ಯೋಜನೆ ಯಾವಾಗ ಆರಂಭಿಸಲಾಗುತ್ತದೆ.
ಯೋಜನೆಗೆ ತಗುಲುವ ವೆಚ್ಚ ಎಷ್ಟು ಎಂಬ ಜಿನಗಾ ಅವರ ಪ್ರಶ್ನೆಗೆ ಮೂಲ ಸೌಲಭ್ಯ ಸಚಿವ ಸಂತೋಷ್ ಲಾಡ್ ಉತ್ತರಿಸಿ, ಬಳ್ಳಾರಿಯ ಎಲ್‌ಸಿ ನಂ. 110 ಸಂಬಂಧಿಸಿದಂತೆ ಅಂದಾಜು ಪಟ್ಟಿಯನ್ನು ನೈಋತ್ಯ ರೇಲ್ವೆಯವರು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ ನಂತರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಎಲ್‌ಸಿ ನಂ. 112ಕ್ಕೆ ಸಂಬಂಧಿಸಿದಂತೆ ನೈಋತ್ಯ ರೇಲ್ವೆಯಿಂದ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.
ರು. 2.33 ಕೋಟಿ: ಹೊಸಪೇಟೆ ನಗರದ ಎಲ್‌ಸಿ ಸಂಖ್ಯೆ 85ರ ಬದಲಿಗೆ ರಸ್ತೆ ಮೇಲು ಸೇತುವೆ, ರಸ್ತೆ ಕೆಳ ಸೇತುವೆ ನಿರ್ಮಾಣ ಮಾಡುವ ಬಗ್ಗೆ ನೈಋತ್ಯ ರೇಲ್ವೆಯಿಂದ ಅಂದಾಜು ವೆಚ್ಚದ ಬಗ್ಗೆ ಮಾಹಿತಿ ಕೋರಲಾಗಿದ್ದು, ಮಾಹಿತಿ ಸ್ವೀಕೃತವಾದ ನಂತರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.
ಬಳ್ಳಾರಿ ನಗರದ ಎಲ್‌ಸಿ ಸಂಖ್ಯೆ 114ರಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಭೂ ಸ್ವಾಧೀನಪಡಿಸಿಕೊಳ್ಳಲು ಮತ್ತು ಯುಟಿಲಿಟಿಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರದಿಂದ ರು. 2.33 ಕೋಟಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.
ವಸತಿಗೃಹ ನಿರ್ಮಾಣ: ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಾಲಿ ಒದಗಿಸಿರುವ ವಸತಿ ಗೃಹಗಳು ಹಾಗೂ ಕೊರತೆ ಇರುವ ಬಗ್ಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಕೇಳಿದಾಗ, ಬಳ್ಳಾರಿ ಜಿಲ್ಲೆಯಲ್ಲಿ ಪೊಲೀಸ್ ಡಿಎಸ್ಪಿ, ಸಿಪಿಐ, ಆರ್‌ಪಿಐ, ಪಿಎಸ್‌ಐ, ಆರ್‌ಎಸ್‌ಐ, ಎಎಸ್‌ಐ, ಎಚ್‌ಸಿ, ಪಿಸಿಗಳಿಗೆ 1098 ವಸತಿಗೃಹಗಳು, ಇನ್ನು ಜಿಲ್ಲೆಯ 1258 ವಸತಿ ಗೃಹಗಳು ಕೊರತೆಯಿಂದ ಕೂಡಿವೆ. ತ್ವರಿತ ವಸತಿ ಯೋಜನೆ-3ರಡಿ 24 ಪಿಸಿ ವಸತಿಗೃಹಗಳು ಮತ್ತು 04 ಎಸ್‌ಐ ವಸತಿಗೃಹಗಳನ್ನು ಬಳ್ಳಾರಿ ನಗರದ ಡಿಎಆರ್ (ಕೇಂದ್ರ ಸ್ಥಾನ)ದಲ್ಲಿ ನಿರ್ಮಾಣ ಮಾಡಲು ಕೆಎಸ್‌ಪಿಎಚ್‌ಸಿ ಅವರು ಕ್ರಮ ಕೈಗೊಂಡಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ.
ಬೃಹತ್ ವಸತಿ ಯೋಜನೆ ಅಡಿಯಲ್ಲಿ 306 ವಸತಿಗೃಹಗಳನ್ನು 2013-14ನೇ ಸಾಲಿನಲ್ಲಿ ನಿರ್ಮಿಸಲಾಗುವುದು. ಇನ್ನುಳಿದ ವಸತಿ ಗೃಹಗಳ ನಿರ್ಮಾಣವನ್ನು ಜಮೀನು ಮತ್ತು ಅನುದಾನದ ಲಭ್ಯತೆಯ ಆಧಾರತ ಮೇಲೆ ಹಂತ ಹಂತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಜಿನಗಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement