ಜಿಪಂ ಮೇಲೆ ಕೈ ಬಾವುಟ ಹಾರಾಟ
ಬಳ್ಳಾರಿ: ಬಿಜೆಪಿ ಹಾಗೂ ಬಿಎಸ್ಸಾರ್ ಕಾಂಗ್ರೆಸ್‌ನ ಒಗ್ಗಟ್ಟಿನ ಬಲ ಪ್ರದರ್ಶನದ ನಡುವೆಯೂ ಜಿಲ್ಲಾ ಪಂಚಾಯ್ತಿಯು ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ವಶವಾಗಿದೆ. ಆ ಮೂಲಕ ರೆಡ್ಡಿ ಸಹೋದರರ ಆರ್ಭಟಕ್ಕೆ ಜಿಲ್ಲೆಯಲ್ಲಿ ಇದುವರೆಗೆ ಅಭದ್ರವಾಗಿದ್ದ ಕಾಂಗ್ರೆಸ್ ಕೋಟೆ ಈಗ ಭದ್ರವಾದಂತಾಗಿದೆ.
ಬಹುಮತಕ್ಕೆ ಒಂದು ಸಂಖ್ಯೆ ಕಡಿಮೆ ಇದ್ದರೂ ರೆಡ್ಡಿ ಬಳಗದ ಓರ್ವರನ್ನು ತಮ್ಮತ್ತ ಸೆಳೆದು ಜಿಲ್ಲಾ ಪಂಚಾಯ್ತಿಯಲ್ಲಿ ತಮ್ಮ ಅಧಿಕಾರ ಸ್ಥಾಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಜಿಪಂ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹೊಳಲು ಕ್ಷೇತ್ರದ ಬೆಂಡಿಗೇರಿ ಶೋಭಾ ಅವರು ಆಯ್ಕೆಯಾದರು.
ಇತ್ತೀಚಿಗೆ ಬಿಎಸ್ಸಾರ್ ಕಾಂಗ್ರೆಸ್‌ನ ಜಿಪಂ ಅಧ್ಯಕ್ಷರಾಗಿದ್ದ ಸುಮಂಗಳಮ್ಮ ಗುಬಾಜಿ ವಿರುದ್ಧ ಅವಿಶ್ವಾಸ ಮಂಡನೆಯನ್ನು ಕಾಂಗ್ರೆಸ್ ಸದಸ್ಯರು ಮಂಡಿಸಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರಭಾರಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ಜಿಪಂ ನೂತನ ಅಧ್ಯಕ್ಷ ಆಯ್ಕೆ ಚುನಾವಣೆ ನಡೆಯಿತು. ಪ್ರಸಕ್ತ 35 ಸದಸ್ಯ ಬಲ ಹೊಂದಿರುವ ಜಿಪಂನಲ್ಲಿ ಕೋಗಳಿ ಕ್ಷೇತ್ರದ ಬಿಜೆಪಿ ಸದಸ್ಯೆ ರತ್ನಮ್ಮ ಕರಿಬಸವನಗೌಡ, ಜೆಡಿಎಸ್‌ನ ಸರಸ್ವತಿ ಅವರು ಕಾಂಗ್ರೆಸ್ ಪರ ನಿಲ್ಲುವ ಮೂಲಕ 16 ಸಂಖ್ಯೆ ಬಲವುಳ್ಳ ಕಾಂಗ್ರೆಸ್ ಸರಳ ಬಹುಮತ ಸಾಬೀತುಪಡಿಸಿತು.
ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ನಾಮಪತ್ರ: ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಬಿಎಸ್ಸಾರ್ ಕಾಂಗ್ರೆಸ್ ವತಿಯಿಂದ ಅವಿಶ್ವಾಸ ಮಂಡನೆಗೆ ಗುರಿಯಾಗಿದ್ದ ಸುಮಂಗಳಮ್ಮ ಗುಬಾಜಿ ಅವರು ಗೋನಾಳ ರಾಜಶೇಖರ್ ಗೌಡ ಸೇರಿದಂತೆ ಇತರರೊಡಗೂಡಿ ನಾಮಪತ್ರ ಸಲ್ಲಿಸಿದ್ದರು. ಇನ್ನು ಕಾಂಗ್ರೆಸ್ ವತಿಯಿಂದ ನಿರೀಕ್ಷೆಯಂತೆ ಬೆಂಡಿಗೇರಿ ಶೋಭಾ ಜಿಪಂ ಸದಸ್ಯರಾದ ವಸಂತ್, ಕೊಟಗಿನಹಾಳ ಶರಣಪ್ಪ, ಮೇಟಿ ಅನ್ನದಾನರೆಡ್ಡಿ, ಲಕ್ಷ್ಮಣ ಸೇರಿದಂತೆ ಇತರರೊಡಗೂಡಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಆಯುಕ್ತರಿಂದ ಅಧ್ಯಕ್ಷರ ಘೋಷಣೆ: ಮಧ್ಯಾಹ್ನ 3 ಗಂಟೆಗೆ ಆರಂಭವಾದ ಕೋರಂ ಸೂಚನೆಯಲ್ಲಿ ಪ್ರಾದೇಶಿಕ ಆಯುಕ್ತ ಎ.ಎ. ಬಿಸ್ವಾಸ್ ಅವರು ಕೈ ಎತ್ತುವ ಮೂಲಕ ಬಿಜೆಪಿ ಪರ ಹಾಗೂ ವಿರೋಧ ಮತ ಹಾಕುವಂತೆ ಸೂಚಿಸಿದರು. ಬಿಜೆಪಿ ಪರ 17, ವಿರೋಧವಾಗಿ 18 ಮತಗಳು ಬಿದ್ದವು. ಇನ್ನು ಕಾಂಗ್ರೆಸ್ ಪಕ್ಷದ ಪರ ಹಾಗೂ ವಿರೋಧವಾಗಿ ಮತಕ್ಕೆ ಸೂಚಿಸಿದಾಗ ಪರವಾಗಿ 18, ವಿರೋಧವಾಗಿ 17 ಮತಗಳು ಬಿದ್ದವು. ಮತಗಳನ್ನು ಪರಿಶೀಲಿಸಿದ ನಂತರ ಆಯುಕ್ತ ಬಿಸ್ವಾಸ್, ಕಾಂಗ್ರೆಸ್‌ನ ಬೆಂಡಿಗೇರಿ ಶೋಭಾ ಅವರು ಗೆಲವು ಸಾಧಿಸಿದ್ದಾರೆ ಎಂದು ಘೋಷಿಸಿದರು. ಕಾಂಗ್ರೆಸ್ ಅಭ್ಯರ್ಥಿ ಶೋಭಾ ಅವರಿಗೆ ವಸಂತ ಅವರು ಸೂಚಕರಾದರೆ, ಬಿಎಸ್ಸಾರ್ ಅಭ್ಯರ್ಥಿ ಸುಮಂಗಳಮ್ಮ ಗುಬಾಜಿ ಅವರಿಗೆ ಗೋನಾಳ ರಾಜಶೇಖರಗೌಡ ಸೂಚಕರಾಗಿದ್ದರು.
ಕೈ ಮುಖಂಡ, ಕಾರ್ಯಕರ್ತರಲ್ಲಿ ಸಂಭ್ರಮ: ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎನ್ನುವ ಕಾರಣಕ್ಕೆ ಜಿಪಂ ಅಧ್ಯಕ್ಷ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ಸಂಡೂರು ಶಾಸಕ ಈ. ತುಕಾರಾಂ, ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು, ಮುಖಂಡರು ಜಿಪಂ ಕಚೇರಿ ಎದುರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಧಿಕಾರದ ಚುಕ್ಕಾಣಿ ಕಾಂಗ್ರೆಸ್‌ಗೆ ಲಭಿಸಿದೆ ಎಂಬ ಸುದ್ದಿ ಹೊರ ಬಿದ್ದದ್ದೇ ತಡ ಪಟಾಕಿ ಸಿಡಿಸಿ, ಸಂಭ್ರಮದಿಂದ ಎಲ್ಲರಿಗೂ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇನ್ನು ಚುನಾವಣೆ ಸಂದರ್ಭದಲ್ಲಿ ಜಿಪಂ ಸಿಇಒ ಮಂಜುನಾಥ್ ನಾಯಕ್ ಇದ್ದರು.