ಹುಬ್ಬಳ್ಳಿ-ಗುಲ್ಗರ್ಗ ನೇರ ರೇಲ್ವೆ ಮಾರ್ಗಕ್ಕೆ ಸ್ವಾಗತ
ಹೊಸಪೇಟೆ: ನೈಋತ್ಯ ರೇಲ್ವೆ ವಲಯದ ಪ್ರಧಾನ ಕಚೇರಿ ಇರುವ, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿಯಿಂದ ಗುಲ್ಬರ್ಗಕ್ಕೆ ನೇರ ರೇಲ್ವೆ ಸಂಪರ್ಕ ಕಲ್ಪಿಸುವುದಾಗಿ ಹೇಳಿರುವ ರೇಲ್ವೆ ಸಚಿವ ಮಲ್ಲಿಕಾರ್ಜು ಖರ್ಗೆ ಅವರ ಹೇಳಿಕೆಯನ್ನು ಜಿಲ್ಲಾ ರೇಲ್ವೆ ಸಲಹಾ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಹುಬ್ಬಳ್ಳಿಯಿಂದ ಗುಲ್ಬರ್ಗಕ್ಕೆ ಹೋಗುವ ಈ ರೈಲು ಬಳ್ಳಾರಿ, ಗುಂತಕಲ್ ಮಾರ್ಗವಾಗಿ ಸಂಚರಿಸುವಂತೆ ಮಾಡಿದರೆ ಅನುಕೂಲವಾಗಲಿದ್ದು, ಈ ಮಾರ್ಗದಲ್ಲಿ ಹೈ-ಕ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ದೊರೆಯಲಿದೆ. ಗುಲ್ಬರ್ಗದಿಂದ ಹಂಪಿಗೆ ನೇರ ಸಂಪರ್ಕ ದೊರೆತು ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರತಿನಿತ್ಯ ಹುಬ್ಬಳ್ಳಿ ಮತ್ತು ಉ.ಕ ಜಿಲ್ಲೆಗಳಿಂದ ಸಾವಿರಾರು ಪ್ರಯಾಣಿಕರು ಮಂತ್ರಾಲಯಕ್ಕೆ ತೆರಳುತ್ತಿದ್ದು, ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಗುಲ್ಬರ್ಗ ಹೈದರಾಬಾದ್- ಕರ್ನಾಟಕ ಪ್ರದೇಶದ ಜಿಲ್ಲೆಗಳ ಕಂದಾಯ ವಿಭಾಗೀಯ ಕೇಂದ್ರವಾಗಿದ್ದು, ಅನೇಕ ವಿಭಾಗೀಯ ಕಚೇರಿಗಳು ಆ ನಗರದಲ್ಲಿವೆ. ಗುಲ್ಬರ್ಗಕ್ಕೆ ನೇರ ರೈಲು ಸಂಪರ್ಕ ದೊರೆತರೆ ಸರ್ಕಾರಿ ನೊಕರರಿಗೆ ಹಾಗೂ ಅಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ ಎಂದಿದ್ದಾರೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೃಹತ್ ಉದ್ದಿಮೆಗಳಿದ್ದು, ಈಗಾಗಲೇ ಹೊಸಪೇಟೆಯಿಂದ ಗುಂತಕಲ್ ಮಾರ್ಗವಾಗಿ ಗುಲ್ಬರ್ಗಕ್ಕೆ ಜೋಡಿ ರೈಲು ಮಾರ್ಗ ಸಂಪರ್ಕವಿದೆ. ಅಲ್ಲದೇ ಹೊಸಪೇಟೆ- ಹುಬ್ಬಳ್ಳಿ ನಡುವೆ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವುದರಿಂದ ಕ್ರಾಸಿಂಗ್ ಜಂಜಾಟವಿಲ್ಲದೆ ಪ್ರಯಾಣಿಕರು ತ್ವರಿತವಾಗಿ ತಮ್ಮ ಊರುಗಳಿಗೆ ತಲುಪಬಹುದು.