ಆಧುನಿಕತೆಯಿಂದ ಜನಪದ ಸಾಹಿತ್ಯ ಮರೆ
ಹೂವಿನಹಡಗಲಿ: ಆಧುನಿಕ ಯುಗದ ಭರಾಟೆಯಲ್ಲಿ ಗ್ರಾಮೀಣ ಜನಪದ ಸಾಹಿತ್ಯ ಕಲೆಗಳು ಮರೆಯಾಗುತ್ತಿವೆ ಎಂದು ಜಾನಪದ ಕಲಾವಿದ ಬಸವರಾಜ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಹೊಳಗುಂದಿಯ ವಿಘ್ನೇಶ್ವರ ಯುವಕ ಸಂಘದ 39ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಲ ಜನಪದ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ, ಜಾಗತೀಕರಣ ಪ್ರಭಾವಕ್ಕೆ ಒಳಗಾಗಿ ಇಂದಿನ ಜಾನಪದ ಸುಗ್ಗಿಯ ಹಾಡು, ಹಂತೆಪದ, ಜೋಗತಿ ಹಾಡು, ನೃತ್ಯ, ಪೌರಾಣಿಕ ನಾಟಕಗಳು ನೆಲೆ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.
ಶರಣರ ವಚನಗಳೇ ನಮಗೆ ದಾರಿ ದೀಪ, ಆದರೆ ಈಚೆಗೆ ಸಿನಿಮಾ ಹಾಡುಗಳು ಕೆಟ್ಟ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದು ಅವಮಾನದ ಸಂಗತಿ. ಪಾಶ್ವಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಯುವಕರಿಗೆ ದೇಶಿಯ ಸಂಗೀತ, ಸಾಹಿತ್ಯವನ್ನು ಉಣಬಡಿಸಬೇಕಿದೆ ಎಂದು ತಿಳಿಸಿದರು.
ಅರುಣೋದಯ ಕಲಾ ತಂಡದ ಜಾನಪದ ಕಲಾವಿದ ಶಂಕ್ರಣ್ಣ, ಅಧ್ಯಕ್ಷತೆ ವಹಿಸಿದ್ದ ಎಂ. ಇಂದ್ರಪ್ಪ ಮಾತನಾಡಿ, ವೇದಿಕೆಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗಲಿವೆ ಎಂದರು. ಉಪನ್ಯಾಸಕ ನೆಪೋಲಿಯಾನ್, ಗ್ರಾಪಂ ಸದಸ್ಯ ಕೆ.ಎಸ್. ಶಿವಕುಮಾರ ಮಾತನಾಡಿದರು. ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಿ. ಚನ್ನವೀರಪ್ಪ ಮತ್ತು ವೈ. ಬಸಣ್ಣ, ಬೋವಿ ಸಂಘದ ಅಧ್ಯಕ್ಷ ಪ್ರಕಾಶ, ಎಂ. ಅಶೋಕ, ಸಂಘದ ಅಧ್ಯಕ್ಷ ಕೆ. ಕೊಟ್ರೇಶ, ಕಾರ್ಯದರ್ಶಿ ಎಚ್. ಕರಿಬಸಪ್ಪ, ಕಾಶೀನಾಥ, ನಂದೀಶ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಎನ್.ಡಿ. ರೇಖಾ ಅವರನ್ನು ಸನ್ಮಾನಿಸಲಾಯಿತು. ಪಿ. ಸಿದ್ದೇಶ ಸ್ವಾಗತಿಸಿದರು. ಶಿಕ್ಷಕ ಕನಕೇಶ ನಿರೂಪಿಸಿದರು. ಎಸ್. ಗುರುಬಸವರಾಜ ವಂದಿಸಿದರು. ನಂತರ ಅರುಣೋದಯ ಕಲಾ ತಂಡದಿಂದ ಹಳ್ಳಿ ಹಾಡು, ಸುಗ್ಗಿಯ ಹಾಡು, ಯಲ್ಲಮ್ಮನ ಪದ, ಗೀಗೀ ಪದ, ದೀಪದ ನೃತ್ಯ, ಭೂಮಿ ತಾಯಿ ವಂದನೆ, ಅಡವಿ ತಾಯಿಗೆ ವಂದನೆ ಜನಮನ ಸೆಳೆದವು.
--
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇಲಾಖೆಯು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನವೀಕರಣ, ಹೊಸ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ವರ್ಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರಿ, ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿರಬಾರದು. ವಾರ್ಷಿಕ ಆದಾಯ ರು. 44,500 ಒಳಗಿರಬೇಕು. ಶೇ. 75ರಷ್ಟು ಹಾಜರಾತಿಯಿರಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಖಾತೆ ಸಂಖ್ಯೆ, ಬ್ಯಾಂಕ್ ಕೋಡಿನ ವಿವರ, ಜಾತಿ, ಆದಾಯ ಪ್ರಮಾಣ ಪತ್ರ, ತೇರ್ಗಡೆಯಾದ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಶಾಲಾ ಮುಖ್ಯಸ್ಥರು ಶಾಲೆಯ ಅರ್ಹ ವಿದ್ಯಾರ್ಥಿಗಳ ಅರ್ಜಿಗಳನ್ನು ಕ್ರೋಡೀಕರಿಸಿ ಹಾರ್ಡ್ ಮತ್ತು ಸಾಫ್ಟ್ ಕಾಪಿಯನ್ನು ಸೆ. 25ರೊಳಗಾಗಿ ಕೂಡ್ಲಿಗಿ ಬಿಸಿಎಂ ವಿಸ್ತರಣಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.