ಕಾರ್ಮಿಕ ಸಚಿವರಿಂದ ಕಾನೂನು ನಿರ್ಲಕ್ಷ್ಯ
ಹೂವಿನಹಡಗಲಿ: ವಿಧಾನಸೌಧದಲ್ಲಿ ಕುಳಿತು ಕಾನೂನುಗಳನ್ನು ರಚನೆ ಮಾಡುವ ಶಾಸಕರು, ಸಚಿವರು ಕಾನೂನುಗಳನ್ನು ಗಾಳಿಗೆ ತೂರಿ ಎಸ್‌ಡಿಎಂಸಿ ರಚನೆ ಮಾಡಲು ಮುಂದಾಗಿದ್ದಾರೆಂದು ತಾಲೂಕಿನ ಹೊಳಗುಂದಿ ಗ್ರಾಮದ ಹಳೆ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಟಕಣೆ ನೀಡಿರುವ ಅವರು, ಕಳೆದ ಮಾರ್ಚ್‌ನಲ್ಲಿ 100ಕ್ಕೂ ಹೆಚ್ಚು ಶಾಲಾ ಮಕ್ಕಳ ಪಾಲಕರು ಶಾಲಾ ಆವರಣದಲ್ಲಿ ಸಭೆ ಸೇರಿ ಹೊಸ ಎಸ್‌ಡಿಎಂಸಿ ಸಮಿತಿ ರಚನೆ ಮಾಡಿದ್ದರು. ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಎಚ್. ಬಸವರಾಜ ಜುಲೈನಲ್ಲಿ ಅನಾರೋಗ್ಯ ಕಾರಣ ನೀಡಿ ರಾಜಿನಾಮೆ ನೀಡಿದ್ದಾರೆ.
ಶಾಲಾ ಮುಖ್ಯಗುರುಗಳು ಜು. 31ರಂದು ರಾಜಿರಾಮೆ ಅಂಗೀಕಾರ ಮಾಡಿದ್ದಾರೆ. ಆದರೆ ಜು. 28ರಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾರ್ಚ್‌ನಲ್ಲಿ ರಚನೆಯಾಗಿದ್ದ ಸಮಿತಿಯನ್ನು ರದ್ದು ಮಾಡಿ ನೂತನ ಎಸ್‌ಡಿಎಂಸಿ ರಚನೆ ಮಾಡಲು ಆದೇಶಿಸಿದ್ದಾರೆಂದು ಆರೋಪಿಸಿದ್ದಾರೆ.
ಕಾನೂನು ಪ್ರಕಾರ ಒಮ್ಮೆ ರಚನೆಯಾದ ಎಸ್‌ಡಿಎಂಸಿ ಅವಧಿ 3 ವರ್ಷ, ಆದರೆ ಸಚಿವರು, ಶಾಸಕರಾದವರು ಹೊಸ ಎಸ್‌ಡಿಎಂಸಿ ರಚನೆ ಮಾಡಬೇಕೆಂಬ ನಿಯಮವಿಲ್ಲ. ಶಾಲಾ ಆವರಣದಲ್ಲಿ ಪಾಲಕರ ಸಭೆ ಕರೆಯದೆ ಕಾಂಗ್ರೆಸ್ ಮುಖಂಡರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಪಕ್ಷದ 9 ಕಾರ್ಯಕರ್ತರನ್ನು ಸೇರಿಸಿ ಸಮಿತಿ ರಚನೆ ಮಾಡಿ ಎಂದು ಆದೇಶ ಮತ್ತು ಅನುಮೋದನೆ ಮಾಡಿರುವ ಸಚಿವರಿಗೆ ಕಾನೂನು ಅರಿವು ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಚಿವರ ಕ್ರಮ ಪ್ರಶ್ನಿಸಿ ಧಾರವಾಡದ ಹೈಕೋರ್ಟ್ ಪೀಠದಲ್ಲಿ ಹೊಸ ಎಸ್‌ಡಿಎಂಸಿ ರಚನೆಗೆ ತಡೆಯಾಜ್ಞೆ ತರಲಾಗಿದೆ. ಆದರೆ ಸಚಿವ ಪರಮೇಶ್ವರ ನಾಯ್ಕ, ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ತಾವು ಹೊಸ ಎಸ್‌ಡಿಎಂಸಿ ರಚನೆಗೆ ಮುಂದಾಗಿದ್ದೇವೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.
ಅವರೊಬ್ಬ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಸಾಮಾನ್ಯ ಜನರಿಗೆ ಕಾನೂನು ತಿಳಿವಳಿಕೆ ನೀಡಬೇಕಿದ್ದ ಸಚಿವರೆ ಈ ರೀತಿ ಕಾನೂನುಗಳನ್ನು ಗಾಳಿ ತೂರಿ ತಮ್ಮ ಮನ ಬಂದಂತೆ ವರ್ತಿಸುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಮುಂದಾದರೂ ಕಾನೂನು ಅರಿತು ಅವಘಡಗಳು ನಡೆಯಂತೆ ಸಚಿವರು ನಡೆದುಕೊಳ್ಳಬೇಕೆಂದು ಡಿ. ವೀರೇಶ, ಬಿ. ಮಲ್ಲಿಕಾರ್ಜುನ, ಎಚ್.ಎಂ. ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಮನವಿ ಮಾಡಿದ್ದಾರೆ.