ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗೌರಿಸುತನ ಅಪರಾವತಾರ

Lingaraj Badiger
Updated On : 12 Sept 2013, 11:02 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 11
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ವಿಘ್ನ ನಿವಾರಕ ಗಣೇಶನ ಹಬ್ಬದ ಸಡಗರ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಯುವಕರ ಉತ್ಸುಕತೆ, ಬಹು ಸಂಭ್ರಮದಿಂದ ನಗರದ ವಿವಿಧೆಡೆ ವಿಜೃಂಭಣೆಯಿಂದ ಪ್ರತಿಷ್ಠಾಪಿಸಿರುವ ಅಪರೂಪದ, ವಿಭಿನ್ನ ರೂಪದ ಗಣಪನ ವಿಗ್ರಹಗಳೇ ಸಾಕ್ಷಿ. ಈ ಮೂರ್ತಿಗಳ ನೋಡುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.
ಭಾರತೀಯ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬಕ್ಕೆ ಅಗ್ರಸ್ಥಾನ ನೀಡಲಾಗಿದೆ. ಬಡವ ಬಲ್ಲಿದ ಎಂಬ ಭಾವನೆ ದೂರವಿಟ್ಟು, ಪ್ರತಿಯೊಬ್ಬ ಭಾರತೀಯ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಸಕಲ ಗಣಗಳಿಗೂ ಅಧಿಪತಿಯಾದ ಗಣೇಶ ಚತುರ್ಥಿ ಅಂಗವಾಗಿ ಯುವ ಸಮೂಹದಿಂದ ನಗರದ ವಿವಿಧೆಡೆ ವಿಶಿಷ್ಟತೆ, ಪರಿಕಲ್ಪನೆ, ಅಭಿರುಚಿಗೆ ತಕ್ಕಂತೆ ಆಕರ್ಷಕ ವಿನಾಯಕನ ವಿಗ್ರಹಗಳು ರಾರಾಜಿಸುತ್ತಿವೆ.
ಬಿದಿರಿನ ಸ್ಪರ್ಶ: ಬಳ್ಳಾರಿಯ ಮೇದಾರ ಜನಾಂಗವರು ನಗರದ ಸಿರುಗುಪ್ಪ ರಸ್ತೆಯ ಮೇದಾರ ಓಣಿಯಲ್ಲಿ ಈ ಬಾರಿ ತಮ್ಮ ಕುಲಕಸುಬಿನ ವೈಶಿಷ್ಟತೆಗೆ ತಕ್ಕಂತೆ ಬಿದಿರು, ಬೊಂಬು, ಚಾಪೆ ಮತ್ತಿತರೆ ವಸ್ತುಗಳನ್ನು ಬಳಸಿ ವಿಶೇಷವಾಗಿ ಅಲಂಕೃತಗೊಳಿಸಿರುವ ಹಿಮಾಲಯ ವಾಸಿ ನಂದಿವಾಹನ ಗಣೇಶ ವಿಗ್ರಹ ಮನಮೋಹಕವಾಗಿದೆ. ಕೇದಾರನಾಥ ದೇವಸ್ಥಾನದ ಗೋಪುರ ರೀತಿಯಲ್ಲಿ ಪ್ರವೇಶದ್ವಾರವನ್ನು ಬಿದಿರಿನಿಂದ ತಯಾರಿಸಿರುವುದು ಮತ್ತಷ್ಟು ಮೆರಗನ್ನು ತಂದಿದೆ. ಇನ್ನು ಒಳಭಾಗದಲ್ಲಿ ಸುತ್ತಮುತ್ತಲಿನ ಗೋಡೆಗಳಿಗೂ ಬಿದಿರಿನ ಸ್ಪರ್ಶ ನೀಡಿದ್ದು, ಗಂಟೆಗಳು, ಬೀಸಣಿಕೆಗಳು, ಮತ್ತಿತರೆ ಅಲಂಕೃತ ವಸ್ತುಗಳಿಂದ ಅಲಂಕರಿಸಲಾದ ಗಣೇಶನ ವಿಗ್ರಹ ವೃತ್ತಿ ವಿಶಿಷ್ಟತೆಯಿಂದ ಕೂಡಿದೆ.
ಗೀತೋಪದೇಶ: ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುವ ಪರಿಕಲ್ಪನೆ ಆಧರಿಸಿ, ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯವರು ನಗರದ ಎಂ.ಜಿ ಆಟೋಮೊಬೈಲ್ ವೃತ್ತದ ಬಳಿ ಸೊಗಸಾಗಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದು ನಗರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಉತ್ತರಾಖಂಡ್‌ನಲ್ಲಿ ಸಂಭವಿಸಿದ ನೆರೆಹಾವಳಿಯಲ್ಲಿ ಕೊಚ್ಚಿ ಹೋಗುತ್ತಿರುವ ಜನರನ್ನು ಗಣೇಶ ಗರುಡ ವಾಹನದ ಮೇಲೆ ಬಂದು ಅವರನ್ನು ರಕ್ಷಿಸುವ ಪರಿ ಜನರಿಗೆ ಮನ ಮುಟ್ಟುವ ಹಾಗೆ ಬಿಂಬಿಸುವ ರೀತಿ ಬಾಲವಿನಾಯಕ ಮಿತ್ರ ಮಂಡಳಿಯವರು  ನಗರದ ಎಪಿಎಂಸಿ ಪ್ರದೇಶದಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ದೇಶಭಕ್ತ ಗಣೇಶ: ನಗರದ ಕುಲ್ಮಿಚೌಕ್ ಬಳಿ ಕುರುಬರ ಓಣಿಯಲ್ಲಿ ವಿನಾಯಕ ಮಿತ್ರ ಮಂಡಳಿಯಿಂದ ಮೇರಾ ಭಾರತ್ ಮಹಾನ್ ಎಂಬ ಘೋಷಣೆಯಡಿ, ದೇಶದ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿರುವ ಗಣೇಶ, ಪ್ರತಿಯೊಬ್ಬರಲ್ಲೂ ದೇಶಭಕ್ತಿಯನ್ನು ಇಮ್ಮುಡಿಗೊಳಿಸುವಂತಿದೆ. ಜತೆಗೆ ಹಿಂಬದಿಯಲ್ಲಿ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನೊಳಗೊಂಡು  ಈ ವಿಗ್ರಹ ಸ್ಥಾಪಿಸಲಾಗಿದೆ. ಈ ವಿಗ್ರಹವು ನಗರದ ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸುತ್ತಿದೆ. ವಿಶ್ವಹಿಂದೂ ಪರಿಷತ್‌ನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಗರದ ಸೆಂಟೆನರಿ ಹಾಲ್‌ನಲ್ಲಿ ಗಣೇಶನೊಂದಿಗೆ ಕಲಾಕೃತಿಗಳ ಪ್ರದರ್ಶನ, ಪುಸ್ತಕ ಮಾರಾಟ ಏರ್ಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
ರೆಡ್ಡಿ ಸ್ಟ್ರೀಟ್‌ನಲ್ಲಿ ರುಪಾಯಿ ಮೌಲ್ಯ ಕಡಿಮೆಯಾಗಿರುವುದು ಹಾಗೂ ಡಾಲರ್ ಬೆಲೆ ಹೆಚ್ಚಾಗಿರುವುದನ್ನು ಮೂಲವಾಗಿಟ್ಟುಕೊಂಡು ಗಣೇಶನನ್ನು ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಾಕ್ಲೆಟ್‌ನಿಂದ ತಯಾರಿಸಿದ ಗಣೇಶನ ಮೂರ್ತಿ, ಐದು ಶಂಖಾಕೃತಿಯ ಮಣ್ಣಿನ ಮೂರ್ತಿ, ದಾಸವಾಳ ಹೂವಿಗೆ ಗಣೇಶನು ದುಂಬಿಯ ರೂಪದಲ್ಲಿ ಬಂದು ಮಕರಂದ ಹೀರುತ್ತಿರುವ ಮೂರ್ತಿ ರೂಪ ಹೀಗೆ ವಿನಾಯಕನು ವಿವಿಧ ಅವತಾರಿಯಾಗಿ ನಗರದ ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ.
ಒಟ್ಟಾರೆ ದೇಶದಾದ್ಯಂತ ಸಂಭ್ರಮಕ್ಕೆ ಸಾಕ್ಷಿಯಾದ ಗಣೇಶ ಚತುರ್ಥಿಯನ್ನು ಬಳ್ಳಾರಿ ನಗರದಲ್ಲೂ ಅದ್ಧೂರಿಯಾಗಿ ಆಚರಿಸಲಾಗಿದೆ.
-ವೈ.ಎಂ. ಸಿದ್ದಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement