ಸರಗಳ್ಳತನ
ಬಳ್ಳಾರಿ: ನಗರದ ಬೆಂಗಳೂರು ರಸ್ತೆಯ ಹೂವಿನ ಬಜಾರ್ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿನ ಮಾಂಗಲ್ಯ ಸರವನ್ನು ಕಳ್ಳನೋರ್ವ ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಪರಾರಿಯಾದ ಘಟನೆ ಜರುಗಿದೆ. ಮಧ್ಯಾಹ್ನದ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಲಕ್ಷ ಬೆಲೆ ಬಾಳುವ 45 ಗ್ರಾಂ ಬಂಗಾರದ ಮಾಂಗಲ್ಯ ಹಾರಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ
ಬಳ್ಳಾರಿ: ತಾಲೂಕಿನ ಕಪ್ಪಗಲ್ಲು ಗ್ರಾಮದ ಬಸವೇಶ್ವರ ಗುಡಿ ಮುಂಭಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 16 ಜನರನ್ನು ಬಂಧಿಸಿ, ಅವರಿಂದ ನಗದು ವಶಪಡಿಸಿಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆ. ಮಲ್ಲಯ್ಯ ಸೇರಿ 16 ಜನರನ್ನು ಬಂಧಿಸಿ ಅವರಿಂದ ರು. 4,590 ನಗದು, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ವ್ಯಕ್ತಿ ಕಾಣೆ
ಬಳ್ಳಾರಿ: ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನು ಕಾಣೆಯಾಗಿದ್ದಾನೆ. ಮಹಮ್ಮದ್ ರಫೀಕ್ (32) ಕಾಣೆಯಾದ ವ್ಯಕ್ತಿ. ಈತನು ಠಾಣಾ ವ್ಯಾಪ್ತಿಯ ನೂರಾನಿ ಮಸೀದಿ ಮುಂದಿನ ಪಾತಕಂದಕಂ ಬೀದಿಯಲ್ಲಿರುವ ಮೈನುದ್ದೀನ್ ಅವರ ಮನೆಯಿಂದ ಮೇ 2ರಿಂದ ನಾಪತ್ತೆಯಾಗಿದ್ದಾನೆ. 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಉರ್ದು, ತಮಿಳು ಮತ್ತು ತೆಲುಗು ಭಾಷೆಗಳನ್ನು ಬಲ್ಲವನಾಗಿದ್ದಾನೆ. ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈತನ ಬಗ್ಗೆ ಮಾಹಿತಿ ತಿಳಿದವರು ಕೂಡಲೇ ಪೊಲೀಸ್ ಠಾಣೆ ಸಂಪರ್ಕಿಸಬೇಕೆಂದು ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಬಳ್ಳಾರಿ: ಅತಿವೇಗವಾಗಿ ಬಂದ ಲಾರಿಯೊಂದು ಮೋಟರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗಿನ ಜಾವ ಜರುಗಿದೆ. ಹೊಸಕೋಟೆ ಬಸವರಾಜ ಎಂಬುವವನೇ ಮೃತ ದುರ್ದೈವಿ. ಕೆ.ಎ. 25 ಡಿ 3529 ಸಂಖ್ಯೆಯ ಲಾರಿ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ಇದ್ದ ತಗ್ಗನ್ನು ತಪ್ಪಿಸಲು ಹೋದಾಗ ಈ ಘಟನೆ ಸಂಭವಿಸಿದೆ. ಘಟನೆಯಿಂದ ತೀವ್ರ ಸ್ವರೂಪದ ಗಾಯಗಳಾಗಿದ್ದ ಬೈಕ್ ಸವಾರನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.