ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಬ್ಬು ಸರಬರಾಜಿಗೆ ಅನುಮತಿ ನೀಡಿ

Lingaraj Badiger
Updated On : 13 Sept 2013, 11:31 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 12
ತಾವು ಬೆಳೆಯುವ ಕಬ್ಬನ್ನು ಅನುಕೂಲವಾಗುವ ಯಾವುದೇ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅನುಮತಿ ನೀಡಬೇಕು ಎಂದು ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಕಬ್ಬು ಬೆಳೆಗಾರರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ಕುರಿತು 2012ರ ಏಪ್ರಿಲ್ 24ರಂದು ಹಾಗೂ ಡಿಸೆಂಬರ್ 26ರಂದು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಇದೀಗ ಮೂರನೇ ಬಾರಿ ಮನವಿ ಸಲ್ಲಿಸುತ್ತಿದ್ದೇವೆ. ಮುಂದಿನ ತಿಂಗಳಲ್ಲಿ (ಅಕ್ಟೋಬರ್) ಕಾರ್ಖಾನೆಗಳು ಕಬ್ಬು ಅರೆಯಲು ಪ್ರಾರಂಭಿಸುತ್ತವೆ. ರೈತರು ತಾವು ಬೆಳೆದ ಕಬ್ಬನ್ನು ರೈತರೇ ಬಯಸಿದ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅನುಮತಿ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಅವಕಾಶ ನೀಡಿ: ಹೊಸಪೇಟೆಯ ಐಎಸ್‌ಆರ್ ಕಾರ್ಖಾನೆಗೆ ಮಾತ್ರ ತಾವು ಬೆಳೆದ ಕಬ್ಬನ್ನು ಪೂರೈಸಬೇಕು ಎಂದು ಕಡ್ಡಾಯ ಮಾಡಬಾರದು. ರೈತರಿಗೆ ಸೂಕ್ತ ಎನಿಸುವ ಕಾರ್ಖಾನೆಗೆ ಕಬ್ಬು ಪೂರೈಸಲು ಅವಕಾಶ ನೀಡಬೇಕು ಎಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮಗಳಾದ ಉಪನಾಯಕನಹಳ್ಳಿ, ನಕರಾಳು ತಾಂಡಾ, ಮರಬ್ಬಿಹಾಳು, ನಾರಾಯಣದೇವನಕೆರೆ, ವರದಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ರೈತರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ನಮಗೆ ಸಂಬಂಧವೇ ಇಲ್ಲ: ಈ ಹಿಂದೆ 1971ರಲ್ಲಿ ಮಲ್ಲಾಪುರ ತಾಲೂಕು ಎಂದು ನಮ್ಮ ಭಾಗವನ್ನು ಪರಿಗಣಿಸಲಾಗಿತ್ತು. ಆನಂತರ 1975ರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಎಂದು ಘೋಷಿಸಲಾಗಿದೆ. ಮರಿಯಮ್ಮನಹಳ್ಳಿಯ ಆಚೆಗೆ ಗ್ರಾಮಗಳು ಹೊಸಪೇಟೆ ತಾಲೂಕಿಗೆ ಸೇರಿಕೊಂಡಿರುತ್ತವೆ. ಹೊಸಪೇಟೆಯ ಐಎಸ್‌ಆರ್ ಸಕ್ಕರೆ ಕಾರ್ಖಾನೆಗೂ ಹಗರಿಬೊಮ್ಮನಹಳ್ಳಿ ತಾಲೂಕಿಗೂ ಯಾವುದೇ ಸಂಬಂಧ ಇಲ್ಲ. ಈ ಕಾರ್ಖಾನೆಯವರು ಪ್ರತಿ ಬಾರಿ ನಮ್ಮ ತಾಲೂಕಿನಿಂದ (ಎಚ್.ಬಿ. ಹಳ್ಳಿ) ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಕಬ್ಬಿನ ಲಾರಿಗಳನ್ನು ತಡೆದು, ಪೊಲೀಸ್ ಠಾಣೆಗೆ ಕಳುಹಿಸುತ್ತಾರೆ. ಅಲ್ಲದೇ ಕಬ್ಬು ಒಣಗಿಸಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕಾರ್ಖಾನೆ ವಿರುದ್ಧ ಹರಿಹಾಯ್ದಿದ್ದಾರೆ.
ಹೈಕೋರ್ಟ್‌ನಲ್ಲಿದೆ: ಕಬ್ಬು ಬೆಳೆದ ರೈತರು ಧಾರವಾಡದ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ ವಿರುದ್ಧ ಕೇಸ್ ದಾಖಲಿಸಿರುತ್ತೇವೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ವಿನಾಕಾರಣ ಹಗರಿಬೊಮ್ಮನಹಳ್ಳಿ ತಾಲೂಕಿನ ರೈತರ ವಿರುದ್ಧ ಜಿಲ್ಲಾಧಿಕಾರಿಗಳಾಗಲಿ, ತಹಸೀಲ್ದಾರ್ ಆಗಲಿ ರೈತರು ಕಬ್ಬನ್ನು ಸಾಗಿಸುವ ಲಾರಿಗಳನ್ನು ತಡೆ ಹಿಡಿದು ರೈತರಿಗೆ ತೊಂದರೆ ನೀಡಬಾರದು ಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ರೋಗಾಣಿ ಹುಲುಗಪ್ಪ, ರೈತರಾದ ಡಿ. ಶಿವಾನಂದ, ಕೆ. ಬಸಪ್ಪ, ಆರ್. ಸಿದ್ದಪ್ಪ, ಬಿ. ಗೋಣೆಪ್ಪ, ಎಸ್. ಪಂಪಾಪತಿ, ಎನ್. ಶಂಕ್ರಪ್ಪ, ಹನುಮಂತರಾಯ, ಪರಶುರಾಮ, ಡಿ. ಶಾಂತಪ್ಪ, ಚಿನ್ನಾಪುರಪ್ಪ ಸೇರಿದಂತೆ ನೂರಾರು ಕಬ್ಬು ಬೆಳೆಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement