ಗ್ರಾಮಾಭಿವೃದ್ಧಿಯಲ್ಲಿ ಯುವಕರ ಪಾತ್ರ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 12
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಸನ್ಮಾರ್ಗದಲ್ಲಿ ಯುವಕರು ಮುನ್ನಡೆಯುವಂತಾಗಲಿ ಎಂದು ಪ್ರಗತಿ ಪರ ರೈತರ ಅರವಳ್ಳಿ ವೀರಣ್ಣ ತಿಳಿಸಿದರು.
ತಾಲೂಕಿನ ಮಾಗಳ ಗ್ರಾಮದ ನವಸ್ಫೂರ್ತಿ ಯುವಕ ಸಂಘದ ತೃತೀಯ ವರ್ಷದ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯುವ ಜನಾಂಗ ದುಶ್ಚಟಗಳಿಂದ ಮುಕ್ತರಾಗಿ, ಗ್ರಾಮದ ಗುರು ಹಿರಿಯರಿಗೆ, ತಂದೆ ತಾಯಂದಿರನ್ನು ಗೌರವದಿಂದ ಕಾಣುವಂತಾಗಬೇಕು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೇ ತಪ್ಪನ್ನು ಖಂಡಿಸಬೇಕು. ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸುವ ಗುಣವಿರಬೇಕು. ಜತೆಗೆ ಗ್ರಾಮದ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದರು.
ಆದರ್ಶ ಮೈಗೂಡಿಸಿಕೊಳ್ಳಿ: ಮುಖ್ಯ ಶಿಕ್ಷಕ ಎಂ. ಶಾಂತರಾಜ ಮಾತನಾಡಿ, ಜಿಲ್ಲೆಯಲ್ಲಿ ಮಾಗಳ ಗ್ರಾಮ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ಹೋರಾಟದ ಹಿನ್ನೆಲೆ ಹೊಂದಿದೆ. ಸಾಹಿತಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ, ಸ್ವಾತಂತ್ರ್ಯ ಹೋರಾಟಗಾರರಾದ ಬನ್ನಿಮಟ್ಟಿ ಲೆಂಕೆಪ್ಪ, ನೆಗಳೂರು ಧರ್ಮಣ್ಣ ಈ ನೆಲದವರು. ಇವರಿಂದ ಗ್ರಾಮದ ಕೀರ್ತಿ ಉನ್ನತ ಮಟ್ಟಕ್ಕೇರಿದೆ. ಆದರಿಂದ ಯುವ ಜನಾಂಗ ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಗ್ರಾಮದ ಗೌರವ ಹೆಚ್ಚಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಣ್ಣಲೆಕ್ಕಪ್ಪ, ವಿಎಸ್‌ಎಸ್‌ಎನ್‌ಬಿ ನಿ. ಕಾರ್ಯದರ್ಶಿ ಎಂ. ಲೆಕ್ಕಪ್ಪ, ಜಿಂದಾಲ್ ಕಂಪನಿ ಹಿರಿಯ ವ್ಯವಸ್ಥಾಪಕ ತೋಟದ ದಯಾನಂದ ಹಾಗೂ ಅಂಗನವಾಡಿ ಸಹಾಯಕಿಯಾಗಿದ್ದ ದಿ. ಗಂಗಿಮಾಳಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಎಚ್. ಬಸವರಾಜ, ತಾಪಂ ಮಾಜಿ ಸದಸ್ಯ ಕೆ. ಸತ್ಯನಾರಾಯಣ ರೆಡ್ಡಿ, ಪ್ರಗತಿ ಪರ ರೈತರಾದ ತೋಟದ ಮಲ್ಲಿಕಾರ್ಜುನಪ್ಪ, ಕುರಿ ರಾಯಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಣ್ಣಾಜಿ ಯಶೋಧರಗೌಡ, ಗ್ರಾಪಂ ಸದಸ್ಯರಾದ ವೈ. ವಿರೂಪಾಕ್ಷಪ್ಪ, ಜೆ. ಹೇಮಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಕೆ. ಹನುಮಂತಪ್ಪ, ಸಂಘದ ಅಧ್ಯಕ್ಷ ಬ್ಯಾಲಹುಣ್ಸಿ ಸಂತೋಷ ಸೇರಿದಂತೆ ಇತರರಿದ್ದರು.
ಶಿಕ್ಷಕ ರಂಗಾಪುರ ಮುಂಜುನಾಥ ನಿರೂಪಿಸಿದರು. ಕುರಿ ದೇವರಾಜ ಸ್ವಾಗತಿಸಿದರು. ಬಿ.ಎಂ. ವಾಗೀಶ ವಂದಿಸಿದರು. ನಂತರ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.