ಹಾಲುಮತ ಸಂಸ್ಕೃತಿ ಪುರಾತನವಾದದ್ದು
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 12
ಹಾಲುಮತ ಸಮಾಜ ತನ್ನದೇಯಾದ ಸಂಸ್ಕೃತಿ ಹೊಂದಿದ್ದು, ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇಯಾದ ಮಹತ್ವ ಪಡೆದಿದೆ ಎಂದು ಗುಲ್ಬರ್ಗಾ ವಿಭಾಗ ತಿಂತಿಣಿ ಬಿಡ್ಜ್ನ ಕನಕ ಗುರುಪೀಠದ ಶ್ರೀಗುರು ಸಿದ್ದರಾಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಹರಾಳು ಗ್ರಾಮದಲ್ಲಿ 8 ದಿನಗಳ ಕಾಲ ನಡೆದ ಶ್ರೀಗುರು ರೇವಣಸಿದ್ದೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಚರಿತ್ರೆಯಲ್ಲಿ ಹಾಲುಮತ ಸಮಾಜದ ಭಕ್ತಶೇಷ್ಠ ಕನಕದಾಸ, ರೇವಣಸಿದ್ದೇಶ್ವರ ಅವರಂತಹ ಮಹಾನ್ ದಾರ್ಶನಿಕರು ದೇಶಕ್ಕೆ ಕಾಣಿಕೆ ನೀಡುವ ಮೂಲಕ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿ, ಹಾಲುಮತ ಸಮಾಜ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಮಾಜದವರು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಸಂಭ್ರಮದ ಮೆರವಣಿಗೆ: ಸಮಾರೋಪ ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಕನಕ ಗುರುಪೀಠದ ಶ್ರೀಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, 101 ಕಳಸಗಳು, ಕೋಲಾಟಗಳು, ಭಜನಾ ತಂಡಗಳ ಕಲಾ ಪ್ರದರ್ಶನ ನೋಡುಗರ ಗಮನ ಸೆಳೆದವು. ಹರಪ್ಪನಹಳ್ಳಿ ಹಾಲುಮತ ಸಮಾಜದ ಗುರುವಿನ ಕೊಟ್ರಯ್ಯ, ಹರಾಳು ಮಠದ ಎಚ್.ಎಂ ಹಾಲೇಶ್ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ರೇವಣಸಿದ್ದೇಶ್ವರ ಪುರಾಣವನ್ನು ಮಾಳಿಗಿ ಹೆಗ್ಗಪ್ಪ ದಡ್ಡಿ, ಅಡವಿಬಸಪ್ಪ, ಎನ್. ಸಂಗಪ್ಪ, ಭಂಡಾರಿ ನಿಂಗಪ್ಪ, ಬಿ.ಕೆ. ಸಂಗಪ್ಪ 8 ದಿನಗಳ ಕಾಲ ಪುರಾಣ ಪ್ರವಚನ ಮಾಡಿದ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನಕ ಗುರುಪೀಠದ ದರ್ಮದರ್ಶಿ ಗಾದಿಗನೂರು ಹಾಲಪ್ಪ, ನಿವೃತ್ತ ಅಬಕಾರಿ ಅಧಿಕಾರಿ ಎ. ನಂಜಪ್ಪ, ಉಜ್ಜಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಜಿಪಂ ಸದಸ್ಯೆ ಶಾರದಾ ರಾಜೇಂದ್ರಪ್ರಸಾದ್, ಹಾಲುಮತ ಸಮಾಜದ ಮುಖಂಡ ರಾಂಪುರ ಭರಮಪ್ಪ, ಭಂಡಾರಿ ನೀಲಗಿರಿಯಪ್ಪ, ಎಂ.ಕೆ. ಜಲಪುರ, ಕೆ.ಎಂ. ಕೆಂಚಲಿಂಗಪ್ಪ, ಬೋರನಹಳ್ಳಿ ಮೂಗಣ್ಣ, ಗ್ರಾಪಂ ಸದಸ್ಯ ಎ. ಬಸವರಾಜ, ಜಳ್ಳಿ ಗುರುಬಸಪ್ಪ, ಹರಾಳು ಅಶೋಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
--
ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮಕ್ಕೆ ಸೇರಿದ ಬಿ. ಮಧು ಹಾಗೂ ಸುಸ್ಮಿತಾ ಕಲ್ಗುಡಿ ಚಿತ್ರದುರ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಶುಟೋಕಾನ್ ಕರಾಟೆ ಅಸೋಸಿಯೇಶನ್ ನಡೆಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಈ ಬಾಲಕಿಯರು ಧಾರವಾಡದ ಎಸ್ಡಿಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕರಾಟೆ ಮಾರ್ಗದರ್ಶಕ ರಮೇಶ್ ಕೊಲ್ಲಾಪುರ ಬಳಿ ತರಬೇತಿ ಪಡೆಯುತ್ತಿದ್ದಾರೆ ಎಂದು ಬಾಲಕಿಯರ ಪಾಲಕರು ತಿಳಿಸಿದ್ದಾರೆ. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪಿಎಲ್ಡಿ ಬ್ಯಾಂಕ್ ಉಪಾದ್ಯಕ್ಷ ಪಿ. ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ್ ಕೊಟ್ರೇಶ್, ಕೊಳ್ಳಿ ಶೇಷರೆಡ್ಡಿ, ಪೂಜಾರ ಶೇಷಪ್ಪ ಇತರರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.