ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅರಸು ಬಂಗಲೆ ಧ್ವಂಸ: ಖಂಡನೆ

Vishwanath S
Updated On : 14 Sept 2013, 11:51 am

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ವಾಸವಾಗಿದ್ದ ಬೆಂಗಳೂರಿನ ಸದಾಶಿವ ನಗರದಲ್ಲಿದ್ದ ಬಂಗಲೆಯನ್ನು ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಸೊಸೆ ಕಾನೂನು ಬಾಹಿರವಾಗಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡು ಬಂಗಲೆಯನ್ನು ಧ್ವಂಸಗೊಳಿಸಿರುವುದು ತೀವ್ರ ಖಂಡನೀಯ. ಆ ನಿವೇಶನವನ್ನು ಅರಸು ಸ್ಮಾರಕವಾಗಿಯೇ ಪರಿವರ್ತಿಸಬೇಕು ಎಂದು ಡಿ. ದೇವರಾಜ ಅರಸು ಸ್ಮಾರಕ ಹೋರಾಟ ಸಮಿತಿ ರಾಜ್ಯ ಸಂಚಾಲಕ ತುಪ್ಪದಹಳ್ಳಿ ಹನುಮಂತಪ್ಪ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸು ತಮ್ಮ ಆಡಳಿತಾವಧಿಯಲ್ಲಿ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ವಾಸಿಸಲು ತಮಗೆ ಮನೆ ಇಲ್ಲವೆಂದು ತಮ್ಮ ಸ್ನೇಹಿತರಿಗೆ ತಿಳಿಸಿದ್ದಾಗ ಅವರು ಬೆಂಗಳೂರಿನ ಸದಾಶಿವ ನಗರದ ಸಿಐಟಿಬಿಗೆ ಸೇರಿದ್ದ ಸರ್ಕಾರಿ ಆಸ್ತಿಯಾದ 1.1 ಎಕರೆ ನಿವೇಶನದಲ್ಲಿ ಒಂದು ಬಂಗಲೆ ನಿರ್ಮಿಸಿ, ಆ ಬಂಗಲೆಯಲ್ಲಿಯೇ ಅರಸು ಅವರು ವಾಸವಾಗಿ, ತಮ್ಮ ಆಡಳಿತ ಕಾರ್ಯಗಳನ್ನು ನಡೆಸುತ್ತಿದ್ದರು. ಕೊನೆಗೆ ಆ ಬಂಗಲೆಯಲ್ಲಿಯೇ ಸಾವನ್ನಪ್ಪಿದ್ದರು. ಅಂತಹ ಬಂಗಲೆಯನ್ನು ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು 2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಬಾಹಿರವಾಗಿ ಈ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿ, ಜು. 7ರ ಮಧ್ಯರಾತ್ರಿ ಬಂಗಲೆಯನ್ನು ಧ್ವಂಸಗೊಳಿಸಿರುವುದು ಹೇಯ ಕೃತ್ಯ ಎಂದರು.
ಉಯಿಲಿನಲ್ಲಿ ಬರೆದಿದ್ದರು: ಧ್ವಂಸಗೊಳಿಸಿರುವ ಆ ನಿವೇಶನವನ್ನು ಅರಸು ಸ್ಮಾರಕವಾಗಿ ಪರಿವರ್ತಿಸಬೇಕು. ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಸಾಮಾಜಿಕ ಕಾರ್ಯಕ್ರಮಗಳ ಒಂದು ವಸ್ತುಸಂಗ್ರಹ ಮಾಡಿ, ಆಡಳಿತಾತ್ಮಕವಾಗಿ ನಿರ್ವಹಿಸುವ ಐಎಎಸ್ ಹಾಗೂ ಐಪಿಎಸ್ ಕಲಿಯುವ ಬಡ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರವನ್ನಾಗಿ ಮಾಡುವಂತೆ ಅರಸು ಅವರೇ ತಮ್ಮ ಉಯಿಲಿನಲ್ಲಿ ಬರೆದಿದ್ದಾರೆ. ಈ ನಿವೇಶನವನ್ನು ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡಿಎನವರು ಅರಸು ಹೆಸರಿಗೆ ಅಲಾಟ್ ಮಾಡಿಸಿದ್ದು, ಅದನ್ನು ಸ್ವತಃ ಅರಸು ಅವರೇ ರದ್ದುಗೊಳಿಸಿ ಸಹಿ ಮಾಡಿರುವುದು ದಾಖಲೆಯಲ್ಲಿದೆ. ಈ ಕುರಿತು ಅನೇಕ ಬಿಡಿಎ ಅಧ್ಯಕ್ಷರು ಈ ನಿವೇಶನ ಅರಸು ಅವರ ಹೆಸರಿನಲ್ಲಿ ಇಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಈ ಆಸ್ತಿ ವಿಷಯ ಗ್ರೋವರ್ ಕಮಿಷನ್‌ನಲ್ಲೂ ಪ್ರಸ್ತಾಪವಾಗಿದ್ದು, ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಸಹ ಸೂಚಿಸಿದ್ದಾರೆ. ಇಂಥ ವೇಳೆ ನಿವೇಶನ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಹೇಗೆ ಕ್ರಯವಾಗಿದೆ ಎಂಬುದು ಅನುಮಾನ ಮೂಡಿಸಿದೆ ಎಂದರು.
20ಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ ಈ ಕುರಿತು ತನಿಖೆಗೆ ಆದೇಶಿಸಬೇಕು. ನಿವೇಶನವನ್ನು ಸಂಬಂಧಪಟ್ಟವರಿಂದ ಹಿಂಪಡೆದು ಅರಸು ಜ್ಞಾಪಕಾರ್ಥ ಸ್ಮಾರಕವಾಗಿ ನಿರ್ಮಿಸಲು ಆಗ್ರಹಿಸಿ ಸೆ. 20ರಂದು ರಾಜ್ಯದ ಎಲ್ಲ ಜಿಲ್ಲೆಗಳ ಡಿಸಿ ಕಚೇರಿ ಎದುರು 1 ದಿನ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು. ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಎಂ.ವಿ. ಎರುಕಲಸ್ವಾಮಿ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಪೃಥ್ವಿರಾಜ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement