ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೋದಿ ಆಯ್ಕೆ: ಸಂಭ್ರಮ

Vishwanath S
Updated On : 14 Sept 2013, 11:52 am

ಬಳ್ಳಾರಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ರಾಷ್ಟ್ರೀಯ ನಾಯಕರು ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ನೇಮಿರಾಜ್ ನಾಯ್ಕ ನೇತೃತ್ವದಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರು ನಗರದ ಗಡಿಗಿ ಚನ್ನಪ್ಪ ವೃತ್ತ (ರಾಯಲ್) ದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಾರಿಗೌಡ, ದತ್ತಾತ್ರೆಯರೆಡ್ಡಿ, ಹನುಮಂತಪ್ಪ, ರಾಮಚಂದ್ರಪ್ಪ, ನಗರ ಘಟಕದ ಅಧ್ಯಕ್ಷ ಕೆ. ವೇಮಣ್ಣ, ಯುವಮೋರ್ಚಾ ಅಧ್ಯಕ್ಷ ಎಸ್. ಸುಧಾಕರ್ ರೆಡ್ಡಿ, ಶಿವರೆಡ್ಡಿ, ಕುಂದಾಪುರ ನಾಗರಾಜ್, ಜಗದೀಶ್ ಶರ್ಮಾ, ಎಚ್.ಎಂ. ಅಮರೇಶ್, ನಜೀಂಪಾಷಾ, ಎಚ್.ಎಂ. ವಿಶ್ವನಾಥ್, ಪಿ. ಸುರೇಶ್ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬ್ಯಾಟರಿ ನೀರು ಸೇವಿಸಿ ಮಹಿಳೆ ಸಾವು
ಕುರುಗೋಡು: ಸಮೀಪದ ಬಾದನಹಟ್ಟಿ ಗ್ರಾಮದ ಮಹಿಳೆಯೋರ್ವಳು ಚಾರ್ಜಿಂಗ್ ಬ್ಯಾಟರಿಗೆ ಹಾಕಲು ಬಾಟಲಿಯಲ್ಲಿಟ್ಟಿದ್ದ ನೀರನ್ನು ಕುಡಿದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಬಾದನಹಟ್ಟಿ ಗ್ರಾಮದ ಅನಂತಮ್ಮ (57) ಮೃತಳಾದ ಮಹಿಳೆ. ಮನೆಯಲ್ಲಿ ಟ್ರ್ಯಾಕ್ಟರ್ ಬ್ಯಾಟರಿಗೆ ಹಾಕಲು ನೀರನ್ನು ಬಾಟಲಿಯಲ್ಲಿ ಸಂಗ್ರಹಿಸಲಾಗಿತ್ತು. ಬೆಳಗ್ಗೆ ಬಾಟಲಿಯಲ್ಲಿದ್ದ ನೀರು ಎಂದು ಸೇವಿಸಿದ್ದು, ಕೆಲ ಸಮಯದ ನಂತರ ಹೊಟ್ಟೆ ಉರಿಯಿಂದ ಹೊರಳಾಡಿದ್ದಾಳೆ. ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಿತರ ಧಾನ್ಯ ಅಕ್ರಮ ದಾಸ್ತಾನು: ವಶಕ್ಕೆ
ಕೊಟ್ಟೂರು: ಪಡಿತರ ಧಾನ್ಯಗಳಾದ ಅಕ್ಕಿ, ಸಕ್ಕರೆಯನ್ನು ಅಕ್ರಮವಾಗಿ ದಾಸ್ತಾನಿಟ್ಟಿದ್ದ ಮಳಿಗೆಯೊಂದರ ಮೇಲೆ ತಹಸೀಲ್ದಾರ್ ಮತ್ತು ಪಟ್ಟಣದ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ ಹಠಾತ್ತನೆ ದಾಳಿ ಮಾಡಿ, 13 ಕ್ವಿಂಟಲ್ 28 ಕೆ.ಜಿ. ಅಕ್ಕಿ, 34 ಕೆ.ಜಿ.ಯ ಸಕ್ಕರೆ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ತಹಸೀಲ್ದಾರ್ ಜವರೇಗೌಡ, ಪಿಎಸ್‌ಐ ಗುರುರಾಜ್ ಮೈಲಾರ, ಉಪ ತಹಸೀಲ್ದಾರ್ ಮಂಜುನಾಥ, ಆಹಾರ ಇಲಾಖೆಯ ಶಿರಸ್ತೇದಾರ ಶ್ರೀಧರಮೂರ್ತಿ, ಕಂದಾಯ ಪರಿವೀಕ್ಷಕ ಸೋಮನಗೌಡ, ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್ ತಂಡ ಇಲ್ಲಿನ ಛಾವಡಿ ಹಿಂಭಾಗದ ಪಟ್ಟಣ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆ ವರ್ತಕ ಜಿ. ರಾಜಶೇಖರಗೆ ಸೇರಿದ ಮಳಿಗೆ ಮೇಲೆ ದಾಳಿ ನಡೆಸಿತು. ಮಳಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಅರಿತು ದಾಳಿ ನಡೆಸಿದರು. ಈ ಸಂಬಂಧ ವರ್ತಕ ಜಿ. ರಾಜಶೇಖರ ವಿರುದ್ದ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಶೇಖರಣೆ ನಿಯಮದಡಿ ಪ್ರಕರಣ ದಾಖಲಿಸಿಕೊಂಡು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಜವರೇಗೌಡ ತಿಳಿಸಿದರು.
ಜೂಜಾಟ ಅಡ್ಡೆ ಮೇಲೆ ದಾಳಿ: 16 ಜನರ ಬಂಧನ
ಬಳ್ಳಾರಿ: ನಗರದ ಹೂವಿನ ಬಜಾರಿನಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಬ್ರೂಸ್ಪೇಟೆ ಪೊಲೀಸರು ದಾಳಿ ಮಾಡಿ, 16 ಜನರನ್ನು ಬಂಧಿಸಿ, ಅವರಿಂದ ರು. 68,420 ಹಾಗೂ 16 ಮೊಬೈಲ್ ವಶಪಡಿಸಿಕೊಂಡಿದ್ದಾರೆ.  ಗುರುವಾರ ರಾತ್ರಿ ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಪಿಎಂಸಿ ಪೊಲೀಸ್ ಠಾಣೆ ಪಿಎಸ್‌ಐ ನಿರಂಜನ ನೇತೃತ್ವದಲ್ಲಿ ದಾಳಿ ಮಾಡಿ ವಿಜಯಕುಮಾರ್ ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಅಡ್ಡೆಗೆ ದಾಳಿ
ಬಳ್ಳಾರಿ: ನಗರದ ಗೌಳೇರ ಹಟ್ಟಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, 7 ಜನರನ್ನು ಬಂಧಿಸಿ, ಅವರಿಂದ ರು. 7,850 ಹಾಗೂ 7 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಎಪಿಎಂಸಿ ಸಬ್ ಇನ್‌ಸ್ಪೆಕ್ಟರ್ ದಾಳಿ ಮಾಡಿ, ನೂರ್ ಮಹ್ಮದ್ ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ. ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಮಿನಾಶಕ ಸೇವಿಸಿ ಸಾವು
ಕುರುಗೋಡು: ಇಲ್ಲಿಗೆ ಸಮೀಪದ ಕೋಳೂರು ಗ್ರಾಮದಲ್ಲಿ ಕ್ರಿಮಿನಾಶಕ ಬಾಟಲಿ ಮುಚ್ಚಳವನ್ನು ಬಾಯಿಂದ ತೆಗೆದು, ವಿಷ ದೇಹದಲ್ಲಿ ಸೇರಿಕೊಂಡ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.  ಮೃತನು ಕೋಳೂರು ಗ್ರಾಮದ ದಮ್ಮೂರಪ್ಪ (26). ಕ್ರಿಮಿನಾಶಕದ  ಮುಚ್ಚಳವನ್ನು ಬಾಯಿಂದ ತೆಗೆದ ಕಾರಣ ಕ್ರಿಮಿನಾಶಕ ದೇಹದಲ್ಲಿ ಸೇರಿಕೊಂಡಿದ್ದು ಹೊಟ್ಟೆ ನೋವು ಎಂದು ನರಳಾಡುತ್ತಿದ್ದಾಗ, ತಕ್ಷಣ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪುಣ್ಯತಿಥಿ
ಬಳ್ಳಾರಿ: ವೀ.ವಿ. ಸಂಘದ ನಗರದ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಸೆ. 14ರಂದು ಮಧ್ಯಾಹ್ನ 12ಕ್ಕೆ ದಾನಿ ವುಂಕಿ ಸಣ್ಣರುದ್ರಪ್ಪ ಅವರ 41ನೇ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ. ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಜನತಾ ಬಜಾರ್‌ನ ನಿರ್ದೇಶಕ ಓ.ಎಂ. ಚನ್ನಬಸಯ್ಯ, ಅತಿಥಿಗಳಾಗಿ ವೀ.ವಿ. ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕೋಶಾಧಿಕಾರಿ ಸಂಗನಕಲ್ ಹಿಮಂತರಾಜ, ದಾನಿ ವದಗಾ ಮಹೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸಾಕ್ಷರತಾ ಸಪ್ತಾಹ
ಬಳ್ಳಾರಿ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಾಗೂ ತಾಲೂಕು ಲೋಕ ಶಿಕ್ಷಣ ಸಮಿತಿ ಇವರ ಸಹಯೋಗದಲ್ಲಿ ಸೆ. 14ರಂದು ಬೆಳಗ್ಗೆ 9.30ಕ್ಕೆ ನಗರದ ಕಪ್ಪಗಲ್ಲು ರಸ್ತೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಸಾಕ್ಷರ ದಾರಿಗೆ ಸಾವಿರ ಹೆಜ್ಜೆ, ಸಾಕ್ಷರತಾ ಧ್ವಜಾರೋಹಣ ಹಾಗೂ ಸಪ್ತಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಉದ್ಘಾಟಿಸುವರು. ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಬೆಂಡಿಗೇರಿ ಶೋಭಾ ಸಾಕ್ಷರತಾ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸಂಸದರು, ಜಿಲ್ಲೆಯ ಶಾಸಕರು, ವಿಧಾನಪರಿಷ ತ್ ಸದಸ್ಯರು, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ, ತಾಪಂ ಅಧ್ಯಕ್ಷ ವಿ. ಗಾದಿಲಿಂಗಪ್ಪ, ಉಪಾಧ್ಯಕ್ಷೆ ಮರೆಮ್ಮ ಕಪ್ಪಗಲ್ಲು, ಬಳ್ಳಾರಿ ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ ಹಾಗೂ ಬಿ.ಎಲ್. ಚಂದ್ರಕಲಾ, ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ವಾಣಿ, ಬಿ.ಕೆ. ಅಂಜಿನಿ, ಡಿಸಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಪಂ ಸಿಇಒ ಮಂಜುನಾಥ ನಾಯಕ್, ತಾಪಂ ಇಒ ಡಿ. ಜಾನಕಿರಾಂ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್.ಆರ್. ಸುರೇಶ್‌ಬಾಬು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಆರೋಗ್ಯ ತಪಾಸಣೆ
ಬಳ್ಳಾರಿ: ಲಯನ್ಸ್ ಕ್ಲಬ್ ಕಂಟೋನ್‌ಮೆಂಟ್ ಹಾಗೂ ಕುವೆಂಪು ನಗರದ ನಾಗರೀಕ ವೇದಿಕೆ ಸಹಯೋಗದಲ್ಲಿ, ಸೆ. 15ರಂದು ಬೆಳಗ್ಗೆ 9ಕ್ಕೆ ಇಲ್ಲಿನ ಕುವೆಂಪು ನಗರದ ವಿಷ್ಣುವರ್ಧನ ಪಾರ್ಕ್ ಸಮೀಪ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ ಚಾಲನೆ ನೀಡುವರು. ಮಾಜಿ ಸಂಸದರು, ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಶಿಬಿರ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದ್ದು, ಕುವೆಂಪು ನಗರ, ತಿಲಕ್ ನಗರ, ಜಯನಗರ, ವಿನಾಯಕ ನಗರ, ಅಲ್ಲೀಪುರ, ಪ್ರಶಾಂತನಗರ, ಗೌತಮನಗರ, ಕಂಟೂನ್ಮೆಂಟ್ ರೇಲ್ವೆ ನಿಲ್ದಾಣ ಪ್ರದೇಶದ ನಾಗರೀಕರು ಭಾಗವಹಿಸಬೇಕು ಎಂದು ಕೆ. ಗೂಳಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement