ರಾಜ್ಯಕ್ಕೆ ಮೋಹನ್ ಭಾಗ್ವತ್ ಭೇಟಿ
ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ರಾಜ್ಯದ ಪ್ರವಾಸಕ್ಕಾಗಿ ಆಗಮಿಸಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ಶಾಖಾ ಕಾರ್ಯದ ವಿಸ್ತಾರ ಹಾಗೂ ಗುಣಾತ್ಮಕ ವೃದ್ಧಿ, ಸೇವಾ ಚಟುವಟಿಕೆಗಳ ಬೆಳವಣಿಗೆ, ಮುಂದಿನ ಕಾರ್ಯಯೋಜನೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಆರ್ಎಸ್ಎಸ್ನ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹ (ಕಾರ್ಯದರ್ಶಿ) ಅರವಿಂದರಾವ್ ದೇಶಪಾಂಡೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿವರ್ಷ ದೇಶದ ಎಲ್ಲ ಪ್ರಾಂತಗಳಿಗೆ ಅವರ ಪ್ರವಾಸ ಇರುತ್ತದೆ. ಹಾಗೆಯೆ ನಾಲ್ಕು ದಿನಗಳ ಕಾಲ ಕಾರ್ಯ ಕಲಾಪಗಳು ವರ್ಷಾರಂಭದಲ್ಲಿಯೇ ನಿಗದಿಯಾದಂತೆ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ನಾಲ್ಕು ದಿನದ ಭೇಟಿಯಲ್ಲಿ ಸಾರ್ವಜನಿಕ ಸಮಾರಂಭ, ಪತ್ರಿಕಾ ಸಂದರ್ಶನ ಇರುವುದಿಲ್ಲ ಎಂದು ತಿಳಿಸಿದ ಅವರು, ಪ್ರಸ್ತುತ ಈ ಬೈಠಕ್ನಲ್ಲಿ ಸಂಘದ ಕುರಿತಂತೆ ಮಾತ್ರ ಚರ್ಚೆ ನಡೆಸಲಾಗುವುದು. ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಚರ್ಚೆಗಳು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಮುಖಂಡರ ಸಭೆ: ಸೆ. 14ರಂದು ಶನಿವಾರ ಕರ್ನಾಟಕ ರಾಜ್ಯದ ಸಂಘ ಪ್ರೇರಿತ ಸಂಘಟನೆಗಳ ಪ್ರಮುಖ ಕಾರ್ಯಕರ್ತರೊಂದಿಗೆ ವಾರ್ಷಿಕ ಸಮನ್ವಯ ಸಭೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡ ಅನಂತ್ಕುಮಾರ್, ಜಗದೀಶ್ ಶೆಟ್ಟರ್, ಸದಾನಂದ ಗೌಡ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಸೆ. 15ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಯ್ದ ಜಿಲ್ಲಾಸ್ತರದ ಕಾರ್ಯಕರ್ತರೊಂದಿಗೆ ಸಮಾಜಮುಖಿ ಕಾರ್ಯಚಟುವಟಿಕೆಗಳ ಬೆಳವಣಿಗೆಯ ಕುರಿತು ಚರ್ಚೆ, ಸಮಾಲೋಚನೆ ನಡೆಸಲಿದ್ದಾರೆ. ಸೆ. 16ರಂದು ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿಯ ವಾರ್ಷಿಕ ಸಭೆ ನಡೆಯಲಿದೆ ಎಂದು ವಿವರಿಸಿದರು. ಮೋಹನ್ ಭಾಗವತ್ ಅವರ ಈ ವಾರ್ಷಿಕ ಸಂದರ್ಶನದ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ (ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು) ಗಣವೇಷಧಾರಿ ಸ್ವಯಂಸೇವಕರ ಸಾಂಘಿಕ್ ಕಾರ್ಯಕ್ರಮ ಸೆ. 15ರಂದು ಸಂಜೆ 5.30ಕ್ಕೆ ನಡೆಯಲಿದೆ ಎಂದು ತಿಳಿಸಿದರು.