ರಾಯಣ್ಣನ ಆಸ್ತಿಪತ್ರ ಎಸಿಗೆ ಹಸ್ತಾಂತರ
ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದ್ದ ಸಂಗೊಳ್ಳಿ ರಾಯಣ್ಣನ ಆಸ್ತಿಯ ಅಡವು ಪತ್ರವನ್ನು ಶುಕ್ರವಾರ ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ ಅವರಿಗೆ ಹಸ್ತಾಂತರಿಸಲಾಯಿತು.
ಗಂಗಪ್ಪ ಕಾಶಪ್ಪ ದೊಡವಾಡ ಎಂಬವರ ಮನೆಯಲ್ಲಿ ಈ ದಾಖಲೆ ಪತ್ರ ಪತ್ತೆಯಾಗಿದ್ದು, ಶಾಸಕ ವಿಶ್ವನಾಥ ಪಾಟೀಲ್ ನೇತೃತ್ವದಲ್ಲಿ ಗ್ರಾಮಸ್ಥರು ಇದನ್ನು ಎಸಿಗೆ ಹಸ್ತಾಂತರಿಸಿದ್ದಾರೆ. ರಾಯಣ್ಣನ ಹೆಸರಿನಲ್ಲಿ 11 ಎಕರೆ ಜಮೀನು ಇದ್ದು, ಈ ಬಗ್ಗೆ ಬ್ರಿಟಿಷ್ ರಾಣಿ ಚಿತ್ರದ ಸುತ್ತ ಏಟ್ ಅನ್ನಾ ಎಂದು ಮುದ್ರಿಸಿದ ಬಾಂಡ್ಪೇಪರ್ನಲ್ಲಿ ವಿವರಗಳಿವೆ.
ಮನೆ ಸ್ವಚ್ಛಗೊಳಿಸುವಾಗ ಸಂಗೊಳ್ಳಿ ರಾಯಣ್ಣನು ತನ್ನ ಆಸ್ತಿಯನ್ನು ಅಡವಿಟ್ಟ ದಾಖಲೆ ಪತ್ರ ದೊರೆತಿದ್ದು, ಇದನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. ಸರ್ಕಾರ ಇದನ್ನು ಪರಿಶೀಲಿಸಿ, ನಮ್ಮ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಯಣ್ಣನ ವಂಶಸ್ಥರಾದ ಚನ್ನಬಪ್ಪ ಗಂಗಪ್ಪ ಉರಬಿನ ಮತ್ತು ಚನ್ನಮಲ್ಲಪ್ಪ ಗಂಗಪ್ಪ ಉರಬಿನ ಆಗ್ರಹಿಸಿದ್ದಾರೆ.
ಜಮೀನು ಅಡವಿಟ್ಟ ರಾಯಣ್ಣ: ಬರಗಾಲದ ಸಂದರ್ಭದಲ್ಲಿ ರಾಯಣ್ಣ ಭೂ ಕಂದಾಯ ಪಾವತಿಸದ ಕಾರಣ ಗ್ರಾಮದ ಕುಲಕರ್ಣಿ ರಾಯಣ್ಣನ ತಾಯಿಯ ಮೇಲೆ ಬೀಸೆಕಲ್ಲು ಹೇರಿ ಅವಮಾನಿಸಿದ್ದ. ಅಲ್ಲದೇ ರಾಯಣ್ಣನ ಜಮೀನನ್ನು ಮುಟ್ಟುಗೋಲು ಹಾಕಲು ಬ್ರಿಟಿಷ್ ಸರ್ಕಾರ ಮುಂದಾದಾಗ ತನ್ನ ಆಸ್ತಿಯನ್ನು ಅಡವಿಟ್ಟು 800 ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡುವರೆಗೆ ಹೊಲ ಉಳಿಮೆ ಮಾಡುವಂತೆ ದೊಡವಾಡ ಕುಟುಂಬಕ್ಕೆ ತಿಳಿಸಿದ್ದ ಎನ್ನಲಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ರಾಯಣ್ಣ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರಿಂದ ಅಡವಿಟ್ಟ ಆಸ್ತಿ ತಮ್ಮಲ್ಲಿಯೇ ಉಳಿದಿದೆ ಎಂದು ಗಂಗಪ್ಪ ಕಾಶಪ್ಪ ದೊಡವಾಡ ಹೇಳುತ್ತಾರೆ.
ಶಾಸಕ ವಿಶ್ವನಾಥ ಪಾಟೀಲ್, ರಾಯಣ್ಣ ತನ್ನ ಆಸ್ತಿ ಅಡವಿಟ್ಟ ಬಾಂಡ್ ಪೇಪರ್ನ್ನು ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.