17ರಿಂದ ಕುಮಾರೇಶ್ವರ ಜಯಂತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 14
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಗೆ ಕಾರಣಕರ್ತ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಹಾನಗಲ್ನ ಶ್ರೀ ಕುಮಾರ ಶಿವಯೋಗಿಗಳ 146ನೇ ಜಯಂತಿ ಮಹೋತ್ಸವವನ್ನು ಸೆ. 17ರಿಂದ ಸೆ. 28ರ ವರೆಗೆ ನಗರದ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಶ್ರೀ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಶನಿವಾರ ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಶೈಕ್ಷಣಿಕ, ಧಾರ್ಮಿಕ, ಸಂಗೀತ ಹಾಗೂ ಆಯುರ್ವೇದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ ಹಾನಗಲ್ಲ ಕುಮಾರ ಶಿವಯೋಗಿಗಳ ಸ್ಮರಣೆ ಹಿನ್ನೆಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘ, ಸಮಾಜದ ಎಲ್ಲ ಗಣ್ಯರು ಹಾಗೂ ಭಕ್ತರ ಇಚ್ಚಯಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ದೊಡ್ಡಪಾತ್ರವಿದೆ
ಅಕ್ಷರಜ್ಞಾನದಿಂದಲೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಕುಮಾರೇಶ್ವರ ಶಿವಯೋಗಿಗಳು, ವೀರಶೈವ ಸಮಾಜವನ್ನು ಶರಣ ಸಂಸ್ಕೃತಿಯ ನೆಲೆಯಲ್ಲಿ ಮತ್ತೆ ಅಸ್ವಿತ್ವಕ್ಕೆ ತರುವಲ್ಲಿ ದೊಡ್ಡ ಪಾತ್ರವಹಿಸಿದರು. ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ್ದರು. ಇಂದು ಸಂಘ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
1909ರಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಶಿವಯೋಗ ಮಂದರ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಹಾಗೂ ಸಮಾಜದ ಏಳಿಗೆಗೆ ನೂರಾರು ಸ್ವಾಮೀಜಿಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ಬಳ್ಳಾರಿಯೊಂದಿಗೆ ಸಂಬಂಧ
ಶರಣರ ವಚನಗಳನ್ನು ಸಂಗ್ರಹಿಸಿದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಹಾಗೂ ಉಭಯ ಗಾನ ವಿಶಾರದ ಎನಿಸಿದ್ದ ಪಂಡಿತ ಪುಟ್ಟರಾಜ ಗವಾಯಿಗಳು ಕೂಡ ಹಾನಗಲ್ಲ ಕುಮಾರಸ್ವಾಮಿಗಳ ಆಶೀರ್ವಾದ ಪಡೆದವರಾಗಿದ್ದಾರೆ. ಬಳ್ಳಾರಿಯೊಂದಿಗೆ ಹಾನಗಲ್ ಶಿವಯೋಗಿಗಳಿಗೆ ಗಾಢವಾದ ಸಂಬಂಧವಿತ್ತು. ಈ ಭಾಗದ ಪವಾಡ ಪುರುಷ ಎನಿಸಿದ್ದ ಎಮ್ಮಿಗನೂರು ಜಡಿಸಿದ್ದ ಶಿವಯೋಗಿಗಳ ಮಾರ್ಗದರ್ಶನ ಪಡೆದಿದ್ದ ಶ್ರೀಗಳು, ಸಾಹಿತ್ಯ, ಸಂಗೀತ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದರು ಎಂದು ಹೇಳಿದರು.
ವೀರಶೈವ ಸಮಾಜದಲ್ಲಿ ಎಲ್ಲರಿಗೂ ಸ್ವಾಮಿಗಳಾಗುವ ಅವಕಾಶವಿದೆ, ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ, ಆಚಾರ, ವಿಚಾರ ತುಂಬುವಲ್ಲಿ ಸರ್ಕಾರ ವಿಫಲವಾಗಿದೆ. ಪಠ್ಯ ಪುಸ್ತಕಗಳಲ್ಲಿ ನೈತಿಕತೆಗೆ, ಆಚಾರ, ವಿಚಾರಗಳಿಗೆ, ಧಾರ್ಮಿಕ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರ ದೇವರು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಬಿಎಸ್ಆರ್ ಮುಖಂಡ ಗುರುಲಿಂಗನಗೌಡ, ವೀರಶೈವ ಮಹಾಸಭಾದ ಗೋನಾಳ ವಿರೂಪಾಕ್ಷಗೌಡ, ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದ ಆಡಳಿತಾಧಿಕಾರಿ ಆರ್. ಬಸವರಾಜ, ಎಂ. ಹಿರೇಮಠ ಸೇರಿದಂತೆ ಹಲವರು ಇದ್ದರು.