ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 14
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ ಸುಮಾರು 15-20 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ನೊಟೀಸ್ ನೀಡಿರುವುದು ಖಂಡನೀಯ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಕ್ಕುಪ್ಪಿ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದಲ್ಲಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಒಕ್ಕಲೆಬ್ಬಿಸುವ ನೋಟಿಸ್ ವಿರೋಧಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರೈತನನ್ನು ದೇಶದ ಬೆನ್ನೆಲುಬು, ಅನ್ನದಾತ ಎಂದು ಬಿಂಬಿಸುತ್ತಾ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ರೈತರನ್ನು ಸದಾ ವಂಚಿಸುತ್ತಲೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರೈತ ವಿರೋಧಿ ಸರ್ಕಾರ: ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಗೋಣಿಬಸಪ್ಪ ಮಾತನಾಡಿ, ರೈತರ ಮೇಲೆ ಗುಂಡು ಹಾರಿಸಿದ ಗುಂಡೂರಾವ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು ರೈತರು ಎನ್ನುವುದನ್ನು ಯಾವೊಬ್ಬ ಮುಖ್ಯಮಂತ್ರಿ ಮರೆಯಬಾರದು. ಶ್ರೀಮಂತರಿಗೆ, ಗಾಲ್ಫ್ ಆಡುವವರಿಗೆ ರಕ್ಷಣೆ ಒದಗಿಸುವ ಸರ್ಕಾರ ರೈತರ ನೆರವಿಗೂ ಬಾರದಿರುವುದು ರೈತ ವಿರೋಧಿ ನಿಲುವು ತಾಳುತ್ತಿದೆ. ಸರ್ಕಾರಿ ಅನಾಧೀನ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ನೀಡಿರುವ ಒಕ್ಕಲೆಬ್ಬಿಸುವ ನೋಟಿಸ್‌ನ್ನು ಕೂಡಲೆ ಹಿಂಪಡೆದು ಪಟ್ಟಾ ವಿತರಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತ್ರಿಫೇಸ್ ನೀಡಿ: ನೀರಾವರಿ ತಜ್ಞ ಡಾ.ಜಿ.ಎಸ್. ಪರಮಶಿವಯ್ಯ ವರದಿಯಂತೆ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕು. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಸಿಗದೆ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ವಾರದೊಳಗೆ ಪಡಿತರ ಚೀಟಿ ವಿತರಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ರಾತ್ರಿವೇಳೆ ಸಿಂಗಲ್ ಫೇಸ್, ನಿರಂತರ ಎಂಟು ತಾಸು ತ್ರಿಫೇಸ್‌ನಂತೆ ವಿದ್ಯುತ್ ಸರಬರಾಜು ಮಾಡಬೇಕು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಪಟ್ಟಣದ ಗಾಂಧಿ ಚಿತಾಭಸ್ಮ ಸ್ಮಾರಕದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಪ್ರಮೋದ್ ಮೂಲಕ ಸಿಎಂಗೆ ಮನವಿಪತ್ರ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎನ್. ಭರ್ಮಣ್ಣ, ಡಿ. ಮಹೇಶ್, ಎಂ.ಪಿ. ಶಿವನಾಯ್ಕ, ಎಂ. ಕೊಟ್ರೇಶಪ್ಪ, ಕೆ.ಎಂ. ಚಂದ್ರಯ್ಯಸ್ವಾಮಿ, ಎಸ್. ಬಾಷಾಸಾಬ್, ವಿ. ನಾಗರಾಜ, ಎಚ್. ರಾಜನಗೌಡ, ವೈ. ಸೂರ್ಯನಾರಾಯಣ, ಎಂ. ತಿಪ್ಪೇಸ್ವಾಮಿ, ಎ. ದುರುಗಪ್ಪ, ಎನ್. ಓಬಣ್ಣ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.